Connect with us

Corona

ಅಮೆರಿಕದಿಂದ ಮೊದಲ ಹಂತದ ವೈದ್ಯಕೀಯ ಪರಿಕರಗಳು ಆಗಮನ- ಭಾರತದ ಜೊತೆಗಿದ್ದೇವೆ ಎಂದ ದೊಡ್ಡಣ್ಣ

Published

on

– ಯುಎಸ್, ಇಂಡಿಯಾ ದೋಸ್ತಿ

ನವದೆಹಲಿ: ಭಾರತದಲ್ಲಿ ಕೊರೊನಾ ಸೃಷ್ಟಿಸಿದ ಅವಾಂತರ ಕಂಡು ವಿಶ್ವದ ನಾನಾ ದೇಶಗಳು ಸಹಾಯ ಹಸ್ತ ಚಾಚಲು ಮುಂದಾಗಿದ್ದು, ಇದೀಗ ಅಮೆರಿಕ ಕೊರೊನಾ ತುರ್ತು ಸಹಾಯಕ್ಕಾಗಿ ಮೊದಲ ಹಂತದಲ್ಲಿ ವಿವಿಧ ಅಗತ್ಯ ವೈದ್ಯಕೀಯ ಪರಿಕರಗಳನ್ನು ಪೂರೈಸಿದೆ.

ಅಮೆರಿಕ ಕಳುಹಿಸಿದ ವಿವಿಧ ವೈದ್ಯಕೀಯ ಸೌಲಭ್ಯಗಳು ಇಂದು ಬೆಳಗ್ಗೆ ಭಾರತ ತಲುಪಿವೆ. ಸೂಪರ್ ಗೆಲಾಕ್ಸಿ ಮಿಲಿಟರಿ ಟ್ರಾನ್ಸ್ ಪೋರ್ಟರ್ ನಲ್ಲಿ ವೈದ್ಯಕೀಯ ವಸ್ತುಗಳನ್ನು ಕಳುಹಿಸಲಾಗಿದ್ದು, ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಲಾಗಿದೆ. 400ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್‍ಗಳು, 1 ಮಿಲಿಯನ್ ಗೂ ಅಧಿಕ ಕೊರೊನಾ ವೈರಸ್ ರ್ಯಾಪಿಡ್ ಟೆಸ್ಟ್ ಕಿಟ್‍ಗಳು, ಇತರೆ ಆಸ್ಪತ್ರೆ ಪರಿಕರಗಳು ಸೇರಿದಂತೆ ವಿವಿಧ ವಸ್ತುಗಳನ್ನು ಇಂದು ಸ್ವೀಕರಿಸಲಾಗಿದೆ.

ಯುಎಸ್ ಎಂಬಸಿ ಈ ಕುರಿತು ಟ್ವೀಟ್ ಮಾಡಿದ್ದು, ಪೂರೈಕೆ ಮಾಡಿರುವ ಹಲವು ಚಿತ್ರಗಳನ್ನು ಹಂಚಿಕೊಂಡಿದೆ. ಕೊರೊನಾ ತುರ್ತು ಪರಿಹಾರಕ್ಕಾಗಿ ಮೊದಲ ಹಂತದಲ್ಲಿ ವಿವಿಧ ಪರಿಕರಗಳನ್ನು ಅಮರಿಕದಿಂದ ಭಾರತಕ್ಕೆ ಪೂರೈಸಲಾಗಿದೆ. 70 ವರ್ಷಗಳ ಸಹಕಾರವನ್ನು ಮುಂದುವರಿಸಿದ್ದೇವೆ. ಅಮೆರಿಕ ಭಾರತದ ಜೊತೆ ಇರಲಿದೆ. ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಒಟ್ಟಿಗೆ ಹೋರಾಡುತ್ತೇವೆ ಎಂದು ತಿಳಿಸಿದೆ. ಅಲ್ಲದೆ ಹ್ಯಾಷ್ ಟ್ಯಾಗ್‍ನೊಂದಿಗೆ ಯುಎಸ್ ಇಂಡಿಯಾ ದೋಸ್ತಿ ಎಂದು ಬರೆಯಲಾಗಿದೆ.

ಕಂಪನಿಗಳು ಹಾಗೂ ವೈಯಕ್ತಿಕವಾಗಿ ಹಲವರು ದಾನ ನೀಡಿದ ಕೋವಿಡ್ ಪರಿಕರಗಳನ್ನು ಭಾರತಕ್ಕೆ ತಲುಪಿಸಲಾಗುವುದು. ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ನೀಡಲಾಗುತ್ತಿದ್ದು, ಮುಂದಿನ ವಾರ ಸಹ ಮತ್ತೊಂದು ವಿಶೇಷ ವಿಮಾನ ಆಗಮಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬೈಡೆನ್ ಟ್ವೀಟ್ ಮಾಡಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನಿರಂತರ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು. ಸಾಂಕ್ರಾಮಿಕ ರೋಗದ ಆರಂಭದಲ್ಲಿ ನಮ್ಮ ಆಸ್ಪತ್ರೆಗಳಲ್ಲಿ ತೊಂದರೆಯಾಗಿದ್ದಾಗ ಭಾರತ ಅಮೆರಿಕಕ್ಕೆ ಸಹಾಯ ಮಾಡಿದಂತೆ, ಅಗತ್ಯ ಸಮಯದಲ್ಲಿ ಭಾರತಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದರು.

ಅಮೆರಿಕ ಮುಂಬರುವ ದಿನಗಳಲ್ಲಿ ತುರ್ತು ಪರಿಹಾರವಾಗಿ 100 ಮಿಲಿಯನ್ ಡಾಲರ್‍ಗೂ ಅಧಿಕ ಮೌಲ್ಯದ ವೈದ್ಯಕೀಯ ವಸ್ತುಗಳನ್ನು ಪೂರೈಸಲಿದೆ ಎಂದು ಸ್ಟೇಟ್ ಡಿಪಾರ್ಟ್‍ಮೆಂಟ್ ವಕ್ತಾರ ನೆಡ್ ಪ್ರೈಸ್ ಗುರುವಾರ ಹೇಳಿದ್ದಾರೆ.

ಸೋಮವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬೈಡೆನ್ ಫೋನ್ ಮೂಲಕ ಸಂಭಾಷಣೆ ನಡೆಸಿದ್ದು, ಎರಡೂ ದೇಶಗಳಲ್ಲಿನ ಕೊರೊನಾ ಸ್ಥಿತಿಗತಿ ಕುರಿತು ಚರ್ಚಿಸಿದ್ದಾರೆ. ಎರಡೂ ದೇಶಗಳಲ್ಲಿನ ಕೊರೊನಾ ಸ್ಥಿತಿ ಕುರಿತು ವಿವರವಾಗಿ ಚರ್ಚಿಸಿದ್ದೇವೆ. ಭಾರತಕ್ಕೆ ಬೆಂಬಲವಾಗಿ ನಿಂತಿದ್ದಕ್ಕೆ ಅಮೆರಿಕ ಅಧ್ಯಕ್ಷ ಬೈಡೆನ್ ಅವರಿಗೆ ಧನ್ಯವಾದಗಳು ಎಂದು ಫೋನ್ ಮಾತುಕತೆ ಬಳಿಕ ಪ್ರಧಾನಿ ಮೋದಿ ತಿಳಿಸಿದ್ದರು.

Click to comment

Leave a Reply

Your email address will not be published. Required fields are marked *