Connect with us

Chikkamagaluru

21 ದಿನ ಸಂಪೂರ್ಣ ಲಾಕ್‍ಡೌನ್, ರಾಜ್ಯಕ್ಕೆ ಮಾದರಿಯಾದ ಕಾಫಿನಾಡ ಪಿಳ್ಳೇನಳ್ಳಿ

Published

on

– ಬೆಳಗ್ಗೆ 7ರಿಂದ 10ಗಂಟೆ ವರೆಗೆ ಮಾತ್ರ ಅಂಗಡಿಗಳು ಓಪನ್

ಚಿಕ್ಕಮಗಳೂರು: ಈ ಗ್ರಾಮಕ್ಕೆ ಯಾರು ಬರುವಂತಿಲ್ಲ. ಅಲ್ಲದೆ ಗ್ರಾಮಸ್ಥರೂ ಮತ್ತೊಂದು ಮನೆಗೆ ಹೋಗುವಂತಿಲ್ಲ. ಮನೆಯಲ್ಲೇ ಇರಬೇಕು. ನೆಂಟರು ಈ ಊರಿಗೆ ಬರುವಂತಿಲ್ಲ. ಈ ಗ್ರಾಮಸ್ಥರು ಕೂಡ ಬೇರೆ ಊರಿನ ನೆಂಟರ ಮನೆಗೆ ಹೋಗುವಂತಿಲ್ಲ ಎಂಬ ಕಟ್ಟುನಿಟ್ಟಿನ ಲಾಕ್‍ಡೌನ್ ವಿಧಿಸಿಕೊಂಡು ಚಾಚೂತಪ್ಪದೆ ಪಾಲಿಸುವ ಮೂಲಕ ಈ ಗ್ರಾಮ ರಾಜ್ಯಕ್ಕೆ ಮದರಿಯಾಗಿದೆ.

ಜಿಲ್ಲೆಯ ಕಡೂರು ತಾಲೂಕಿನ ಪಿಳ್ಳೇನಹಳ್ಳಿಯ ಜನ ಈ ರೀತಿ ಲಾಕ್‍ಡೌನ್ ವಿಧಿಸಿಕೊಂಡು ಪಾಲಿಸುತ್ತಿದ್ದಾರೆ. ಊರಲ್ಲಿ ಶುಭಕಾರ್ಯ ನಡೆಯುವಂತಿಲ್ಲ. ಇದ್ದರೂ ತಾತ್ಕಾಲಿಕವಾಗಿ ಮುಂದೂಡಬೇಕು. ಜನ ಬೇಕಾಬಿಟ್ಟಿ ಓಡಾಡಂಗಿಲ್ಲ. ಅಂಗಡಿ ತೆರೆಯಲು ಸಮಯ ನಿಗದಿ ಮಾಡಲಾಗಿದೆ. ಹಳ್ಳಿ ಕಟ್ಟೆ ಮೇಲೆ ಹರಟೆ ಹೊಡೆಯುವಂತಿಲ್ಲ. ಮನೆಯಿಂದ ಹೊರ ಬರಬೇಕೆಂದರೆ ಮಾಸ್ಕ್ ಕಡ್ಡಾಯ ಹೀಗೆ ತಾವೇ ನಿಯಮ ರೂಪಿಸಿಕೊಂಡು ಕೊರೊನಾ ವಿರುದ್ಧ ಸಮರ ಸಾರಿದ್ದಾರೆ.

ಊರಲ್ಲಿ ಕೊರೊನಾಗೆ ಮೂವರು ಬಲಿಯಾಗಿದ್ದಾರೆ, 12 ಜನರಿಗೆ ಹೆಮ್ಮಾರಿ ಕೊರೊನಾ ದೃಢಪಟ್ಟಿದೆ. ಹೀಗೆ ಬಿಟ್ಟರೆ ಇದು ಹೆಚ್ಚಾಗಬಹುದೆಂದು ಭಾವಿಸಿ ಗ್ರಾಮಸ್ಥರು ತಮಗೆ ತಾವೇ ನಿರ್ಬಂಧ ಹೇರಿಕೊಂಡಿದ್ದಾರೆ. ಸುಮಾರು 1 ಸಾವಿರ ಮನೆಗಳಿರುವ ಗ್ರಾಮ ಇದಾಗಿದ್ದು, ಐದು ಸಾವಿರ ಜನಸಂಖ್ಯೆ ಹೊಂದಿದೆ. ಆದರೂ ಗ್ರಾಮದಲ್ಲಿ ಕಣ್ಣಿಗೆ ಕಾಣೋದು ಬೆರಳಿಕೆಯಷ್ಟು ಜನ ಮಾತ್ರ. ಈ ಗ್ರಾಮದ ಮೂಲಕ ಹುಲಿಕೆರೆ, ನಾಗೇನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಯ ಜನ ಓಡಾಡುತ್ತಾರೆ. ಆದರೆ ಈ ಗ್ರಾಮ ಮಾತ್ರ ಫುಲ್ ಲಾಕ್ ಡೌನ್ ಆಗಿರುತ್ತೆ.

ಊರಲ್ಲಿರೋ ಅಂಗಡಿಗಳು ಬೆಳಗ್ಗೆ 7 ರಿಂದ 10 ಗಂಟೆ ತನಕ ಮಾತ್ರ ತೆರೆದಿರುತ್ತವೆ. ಹೊಲ-ಗದ್ದೆಗೆ ಹೋಗುವ ರೈತರು, ಡೈರಿಗೆ ಹಾಲು ಹಾಕಲು ಹೋಗುವವರು ಮಾಸ್ಕ್ ಇಲ್ಲದೆ ಮನೆಯಿಂದ ಹೊರಬರುವಂತಿಲ್ಲ. ಗ್ರಾಮದ ಹಳ್ಳಿಕಟ್ಟೆ ಮೇಲೆ ಗುಂಪಾಗಿ ಕೂತು ಹರಟೆ ಹೊಡೆಯುವಂತಿಲ್ಲ. ಸ್ವಯಂ ಪ್ರೇರಿತವಾಗಿ ಈ ಗ್ರಾಮದ ಜನ ಹತ್ತಾರೂ ರೂಲ್ಸ್ ಹಾಕೊಂಡ್ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ.

ಹಳ್ಳಿಗರು ಈ ರೀತಿ ಸ್ವಯಂ ಲಾಕ್‍ಡೌನ್ ವಿಧಿಸಿಕೊಂಡು ಜೀವನ ಮಾಡೋಕೆ ಕಾರಣರಾದವರು ಸಿರಿಗೆರೆ ಶ್ರೀಗಳು. ಗ್ರಾಮದಲ್ಲಿನ ಕೊರೊನಾ ಸ್ಥಿತಿಯನ್ನು ಊರಿನ ಮುಖಂಡರು ದೂರವಾಣಿ ಮೂಲಕ ಸಿರಿಗೆರೆ ಶ್ರೀಗಳ ಬಳಿ ಚರ್ಚಿಸಿದ್ದರು. ಈ ವೇಳೆ ಸಿರಿಗೆರೆ ಶ್ರೀಗಳು 20 ದಿನ ಗ್ರಾಮದಲ್ಲಿ ಲಾಕ್‍ಡೌನ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಆಗ ಊರಿನ ಮುಖಂಡರು ಈ ನಿರ್ಧಾರಕ್ಕೆ ಬಂದಿದ್ದಾರೆ. ಪರಿಸ್ಥಿತಿ ಅವಲೋಕಿಸಿಕೊಂಡು ಅಗತ್ಯಬಿದ್ದರೆ ಲಾಕ್‍ಡೌನ್ ಮತ್ತಷ್ಟು ದಿನ ವಿಸ್ತರಿಸಿಕೊಳ್ಳಲು ಗ್ರಾಮಸ್ಥರು ತಯಾರಿದ್ದಾರೆ. ಈ ಮೂಲಕ ಊರಿನ ಜನ ನಮ್ಮ ಆರೋಗ್ಯಕ್ಕೆ ನಾವೇ ಜವಾಬ್ದಾರಿ ಎಂದು ತಮಗೆ ತಾವೇ ಲಾಕ್‍ಡೌನ್ ಘೋಷಿಸಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *