Connect with us

Districts

ಗುಳೆ ಹೋದವರು ವಾಪಸ್ – ಮಾಸ್ಕ್ ಹಾಕದರ ಮೇಲೆ ದಂಡಾಸ್ತ್ರ ಪ್ರಯೋಗ

Published

on

– ಕೊರೊನಾ ನಿಯಂತ್ರಣಕ್ಕೆ ಫೀಲ್ಡಿಗಿಳಿದ ಅಧಿಕಾರಿಗಳು

ಗದಗ: ಸರ್ಕಾರದ ಟಫ್ ರೂಲ್ಸ್ ಮಧ್ಯೆ, ಲಾಕ್‍ಡೌನ್ ಆಗಬಹುದು ಎಂಬ ಭಯಕ್ಕೆ ವಲಸೆ ಹೋದವರು ಮರಳಿ ಗೂಡು ಸೇರುತ್ತಿದ್ದಾರೆ. ಇಂದು ವಿವಿಧ ನಗರಗಳಲ್ಲಿ ಕೆಲಸ ಅರಸಿ ಹೋದವರು ಜಿಲ್ಲೆಯ ಗಜೇಂದ್ರಗಡ ಪಟ್ಟಣಕ್ಕೆ ಹಿಂದಿರುಗಿದ್ದಾರೆ.

ದುಡಿಯಲು ಹೋದವರು, ಉದ್ಯೋಗ ಅರಸಿ ಹೋದವರು, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೂ ಕೋಚಿಂಗ್ ಹೋದ ಜಿಲ್ಲೆಯ ಜನರು ಮತ್ತೆ ತಮ್ಮೂರಿನತ್ತ ಮುಖ ಮಾಡುತ್ತಿದ್ದಾರೆ. ಗಜೇಂದ್ರಗಡ ಪಟ್ಟಣಕ್ಕೆ ಬಂದಿಳಿದು, ಅಲ್ಲಿಂದ ಸಿಕ್ಕ ಖಾಸಗಿ ವಾಹನಗಳ ಟಾಪ್ ಮೇಲೆ ಕುಳಿತು ತಮ್ಮ ತಮ್ಮೂರುಗಳಿಗೆ ಹೊರಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ತಮ್ಮ ಹಳ್ಳಿ ತಲುಪುತ್ತಿದ್ದಾರೆ. ನೆರೆ ರಾಜ್ಯವಾದ ಗೋವಾ, ಮಹಾರಾಷ್ಟ್ರ, ಕೇರಳ ಹಾಗೂ ನಮ್ಮ ರಾಜ್ಯದ ಬೇರೆ ಜಿಲ್ಲೆಗಳಾದ ಮಂಗಳೂರು, ಬೆಂಗಳೂರು, ಕಾರವಾರ, ಉಡುಪಿ, ಚಿಕ್ಕಮಗಳೂರು, ಮೈಸೂರು ಹೀಗೆ ಅನೇಕ ಕಡೆಗಳಿಗೆ ಕೂಲಿ ಅರಸಿ ಹೋದವರು, ಕೋಚಿಂಗ್ ಹೋದ ಉದ್ಯೋಗ ಆಕಾಂಕ್ಷಿಗಳು ಗಂಟು ಮೂಟೆಗಳನ್ನು ಕಟ್ಟಿಕೊಂಡು ಬರುತ್ತಿದ್ದಾರೆ.

ಮಹಿಳೆಯರು, ಮಕ್ಕಳು, ಪುರುಷರು ಹೊಟ್ಟೆಪಾಡಿಗಾಗಿ ಊರು ತೊರೆದು ಜನ, ಮಹಾಮಾರಿ ಕೊರೊನಾಕ್ಕೆ ಹೆದರಿ ಮತ್ತೆ ಊರು ಸೇರುವಂತಾಗಿದೆ. ಯಾಕೆ ಊರಿಗೆ ಬರುತ್ತಿದ್ದಿರಾ ಅಂತ ಕೇಳಿದರೆ, ಕೊರೊನಾ ಹೆಚ್ಚಾಗುತ್ತಿದೆ, ಲಾಕ್‍ಡೌನ್ ಆಗಬಹುದು ಎಂದು ಊರಿಗೆ ಬರುತ್ತಿದ್ದೇವೆ. ಅಲ್ಲಿ ಉದ್ಯೋಗವಿಲ್ಲದೆ ಕೈಲಿ ಹಣ ಖರ್ಚು ಮಾಡುವುದಕ್ಕಿಂತ ಊರಲ್ಲಿದ್ದು ಗಂಜಿ ಕುಡಿದು, ಜಮೀನು ಕೆಲಸ ಮಾಡಿಯಾದ್ರೂ ಬದುಕುತ್ತೇವೆ ಎಂದು ವಲಸಿಗರು ಹೇಳುತ್ತಿದ್ದಾರೆ.

ಜಿಲ್ಲೆಯ ಅಧಿಕಾರಿಗಳು ಮಾಸ್ಕ್ ಹಾಕದಿರುವ ಜನರಿಗೆ ದಂಡ ವಿಧಿಸುವ ಮೂಲಕ ಬಿಸಿಮುಟ್ಟಿಸುವ ಕೆಲಸ ಮಾಡಿದರು. ಜಿಲ್ಲಾಡಳಿತ, ಕಂದಾಯ, ಪೊಲೀಸ್, ಆರೋಗ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳ 5 ತಂಡಗಳು ಕಾರ್ಯಾಚರಣೆ ನಡೆಸಿತು. ಗದಗ ಬೆಟಗೇರಿ ಅವಳಿ ನಗರದ ಪ್ರಮುಖ ಜನದಟ್ಟಣೆಯ ಸ್ಥಳಕ್ಕೆ ಎಂಟ್ರಿಕೊಟ್ಟರು. ಮಾಸ್ಕ್ ಹಾಕದ ಸಾರ್ವಜನಿಕರಿಗೆ 100 ರೂಪಾಯಿ, ಇನ್ನೂ ಅಂಗಡಿ ಮಾಲೀಕರು, ವ್ಯಾಪಾರಿಗಳಿಗೆ 500 ರೂ. ದಂಡ ವಿಧಿಸಲಾಯಿತು.

ಎಸಿ ರಾಯಪ್ಪ, ಗದಗ ತಹಶಿಲ್ದಾರ ಶ್ರೀನಿವಾಸ ಕುಲಕರ್ಣಿ, ಶಹರ ಪೊಲೀಸ್ ಠಾಣೆ ಸಿಪಿಐ ಪಿ.ವಿ ಸಾಲಿಮಠ, ನಗರಸಭೆ ಪೌರಾಯುಕ್ತ ರಮೇಶ್ ಜಾದಾವ್ ಸೇರಿದಂತೆ ಅನೇಕ ಅಧಿಕಾರಿಗಳು, ಸಿಬ್ಬಂದಿ ವರ್ಗ ದಂಡ ಕಾರ್ಯಾಚರಣೆಗೆ ಇಳಿದರು. ದಂಡ ಕಟ್ಟಲು ಎದುರು ವಾದಿಸುವವರ ಮೇಲೆ ಮುಲಾಜಿಲ್ಲದೆ ಕೇಸ್ ದಾಖಲಿಸಿದರು.

ಅಂಗಡಿ ಮಾಲೀಕರಿಗೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಕಡ್ಡಾಯವಾಗಿ ಪಾಲಿಸಬೇಕು. ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕ್ರಿಮಿನಲ್ ಹಾಗೂ ಕಠಿಣ ಕ್ರಮ ಜರುಗಿಸುವುದಾಗಿ ಎಸಿ ರಾಯಪ್ಪ ಎಚ್ಚರಿಕೆ ನೀಡಿದರು.

Click to comment

Leave a Reply

Your email address will not be published. Required fields are marked *