Connect with us

ಸಂಕಷ್ಟದಲ್ಲಿ ಅರ್ಚಕ ಸಮುದಾಯ- ಸರ್ಕಾರದಿಂದ ಪರಿಹಾರಕ್ಕಾಗಿ ಮನವಿ

ಸಂಕಷ್ಟದಲ್ಲಿ ಅರ್ಚಕ ಸಮುದಾಯ- ಸರ್ಕಾರದಿಂದ ಪರಿಹಾರಕ್ಕಾಗಿ ಮನವಿ

– ಹಲವರ ಮನೆಗಳಲ್ಲಿ ಅನಾರೋಗ್ಯದಿಂದ ಔಷಧಿ ಕೊಳ್ಳಲು ಹಣವಿಲ್ಲ

ಬೆಂಗಳೂರು: ಕೊರೊನಾದಿಂದಾಗಿ ಅರ್ಚಕರ ಸಮುದಾಯ ಸಹ ಸಂಕಷ್ಟಕ್ಕೆ ಸಿಲುಕಿದ್ದು, ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ 35 ಸಾವಿರಕ್ಕೂ ಅಧಿಕ ದೇವಾಲಯಗಳ ಅರ್ಚಕರಿಗೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಅರ್ಚಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಮನವಿ ಮಾಡಿದ್ದಾರೆ.

ವೀಡಿಯೋ ಮೂಲಕ ಕೇಳಿಕೊಂಡಿರುವ ಅವರು, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ 35 ಸಾವಿರಕ್ಕೂ ಅಧಿಕ ದೇವಾಲಯಗಳ ಅರ್ಚಕರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಾರೋಗ್ಯದಿಂದ ಕೆಲವರು ತುಂಬಾ ಕಷ್ಟಪಡುತ್ತಿದ್ದಾರೆ. ಔಷಧಿ, ಚಿಕಿತ್ಸೆಗಾಗಿ ಹಣವಿಲ್ಲ. ಹೀಗಾಗಿ ಎಲ್ಲ ಅರ್ಚಕರಿಗೂ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲಿರುವ ಮುಜರಾಯಿ ದೇವಾಲಯಗಳಿಗೆ ಪೂಜೆಯ ಸಾಮಗ್ರಿಗಳನ್ನು ಕೊಳ್ಳಲು ಹಾಗೂ ಪೂಜೆ ನಡೆಸುವ ಅರ್ಚಕರ ಸಂಭಾವನೆ ಎರಡೂ ಸೇರಿ ದಿನಕ್ಕೆ 135 ರೂ. ನೀಡಲಾಗುತ್ತಿದೆ. ಆದರೆ ಇದೀಗ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದ್ದು, ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನಡೆಸಲು ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ಭತ್ಯೆಯನ್ನು ಇಂದಿನ ಬೆಲೆಗಳಿಗೆ ಅನುಗುಣವಾಗಿ ಪ್ರತಿ ದಿನಕ್ಕೆ 250 ರೂ.ಗೆ ಹೆಚ್ಚಿಸಬೇಕು ಎಂದು ದೀಕ್ಷಿತ್ ಮನವಿ ಮಾಡಿದ್ದಾರೆ.

ದೇವಸ್ಥಾನಗಳಿಗೆ ನೀಡುವ ಅನುದಾನ ಈಗಲೂ 1, 2 ರೂ ಇದೆ. ಅಲ್ಲದೆ ನಗದು ಅನುದಾನ ವಾರ್ಷಿಕ 6 ಸಾವಿರ ರೂ. ಮಾತ್ರ ಇದೆ. ಇದನ್ನೂ ಹೆಚ್ಚಿಸಬೇಕು ಎಂದು ಒಕ್ಕೂಟ ತಿಳಿಸಿದೆ.

Advertisement
Advertisement