Connect with us

Bengaluru City

ಮಾಲ್ಡೀವ್ಸ್ 152, ಕತಾರ್‌ನಿಂದ 182 ಅನಿವಾಸಿ ಭಾರತೀಯರು ಬೆಂಗಳೂರಿಗೆ ಆಗಮನ

Published

on

ಬೆಂಗಳೂರು: ಕೊರೊನಾ ವೈರಸ್ ಲಾಕ್‍ಡೌನ್ ಸಂದರ್ಭದಲ್ಲಿ ಮಾಲ್ಡೀವ್ಸ್ ನ ಮಾಲೆಯಿಂದ 152 ಹಾಗೂ ಕತಾರ್ ನ ದೋಹಾದಿಂದ 182 ಜನ ಅನಿವಾಸಿ ಭಾರತೀಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಒಂಭತ್ತನೇ ಏರ್ ಇಂಡಿಯಾ ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ ಒಟ್ಟು 152 ಮಂದಿ ಅನಿವಾಸಿ ಭಾರತೀಯರು ಶುಕ್ರವಾರ ಸಂಜೆ 6.50ಕ್ಕೆ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಒಟ್ಟು 152 ಪ್ರಯಾಣಿಕರಲ್ಲಿ ಇಬ್ಬರು ಗರ್ಭಿಣಿಯರು, ಹತ್ತು ವರ್ಷದೊಳಗಿನ ಒಬ್ಬ ಬಾಲಕ ಸೇರಿದಂತೆ 132 ಪುರುಷರು ಮತ್ತು 20 ಮಹಿಳೆಯರಿದ್ದಾರೆ.

ತಜ್ಞ ವೈದ್ಯರು ಹಾಗೂ ಸಿಬ್ಬಂದಿ 152 ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಇಬ್ಬರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಕ್ವಾರಂಟೈನ್‍ಗಾಗಿ ಕಳುಹಿಸಿಕೊಡಲಾಗಿದೆ. ಉಳಿದಂತೆ 150 ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್‍ಗಾಗಿ ಹೋಟೆಲ್ ಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.

ದೋಹಾದಿಂದ 182 ಜನ ಆಗಮನ
ರಾತ್ರಿ 9 ಗಂಟೆಗೆ ಕತಾರ್‍ನ ದೋಹಾದಿಂದ ಸಹ ಒಟ್ಟು 182 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ. ಹತ್ತನೇ ಏರ್ ಇಂಡಿಯಾ ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ 182 ಜನ ಬಂದಿಳಿದಿದ್ದಾರೆ. ಹತ್ತು ವರ್ಷದೊಳಗಿನ 16 ಮಕ್ಕಳು, 127 ಪುರುಷರು ಮತ್ತು 39 ಮಹಿಳೆಯರು ಇದ್ದಾರೆ. ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಯಾವುದೇ ಪ್ರಯಾಣಿಕರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಎಲ್ಲರನ್ನೂ 14 ದಿನಗಳ ಕ್ವಾರಂಟೈನ್‍ಗಾಗಿ ಹೋಟೆಲ್ ಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.