Connect with us

Chitradurga

ನೂರಾರು ಜನರ ಮಧ್ಯೆ ಮೆರವಣಿಗೆ, ಸೇಬಿನ ಹಾರ – ನಿಯಮ ಉಲ್ಲಂಘಿಸಿದ ಶ್ರೀರಾಮುಲು

Published

on

– ಸಾಮಾಜಿಕ ಅಂತರ ಎಲ್ಲಿ?
– ಮಾಸ್ಕ್ ಧರಿಸದೇ ಭಾಗಿ

ಚಿತ್ರದುರ್ಗ: ರಾಜ್ಯದಲ್ಲಿ ಕೊರೊನಾ ಮಾಹಾಮಾರಿ ಅವಾಂತರವನ್ನೇ ಸೃಷ್ಟಿಸಿದೆ. ರಾಜ್ಯದಲ್ಲಿ ದಿನಕ್ಕೆ ನೂರಾರು ಪ್ರಕರಣಗಳು ಪತ್ತೆಯಾಗುತ್ತಿವೆ. ಈ ನಡುವೆ ಜನರಿಗೆ ಮಾದರಿಯಾಗಬೇಕಾದ ಆರೋಗ್ಯ ಸಚಿವ ಶ್ರೀರಾಮುಲು ಕೋವಿಡ್ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ನೂರಾರು ಕಾರ್ಯಕರ್ತರೊಂದಿಗೆ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀರಾಮುಲು ಸೇಬಿನ ಹಾರ ಹಾಕಿಸಿಕೊಂಡಿದ್ದಾರೆ.

ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಗ್ಯ ಸಚಿವ ಶ್ರೀರಾಮುಲು ಅದ್ಧೂರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ವೇದಾವತಿ ನದಿಗೆ ಬಾಗೀನ ಅರ್ಪಣೆಗೆ ಆಗಮಿಸಿದ್ದ ಶ್ರೀರಾಮುಲು, ಎತ್ತಿನ ಗಾಡಿ ಏರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮಾಡಿದ್ದಾರೆ.

ಸಚಿವರಿಗೆ ಸಂಸದ ಎ.ನಾರಾಯಣಸ್ವಾಮಿ, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಹ ಸಾಥ್ ನೀಡಿದ್ದು, ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಈ ವೇಳೆ ನೂರಾರು ಜನರ ಮಧ್ಯೆ ಸಚಿವರಿಗೆ ಕಾರ್ಯಕರ್ತರು ಕ್ರೇನ್ ಮೂಲಕ ಸೇಬಿನ ಹಾರ, ಜೆಸಿಬಿ ಮೂಲಕ ಹೂವು ಹಾಕಿದ್ದಾರೆ. ಸ್ವತಃ ಸಚಿವರು ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದು, ಮಾತ್ರವಲ್ಲದೆ ಸಚಿವರ ಸಮ್ಮುಖದಲ್ಲೇ ನೂರಾರು ಜನ ಕಾನೂನನ್ನು ಮರೆತಿದ್ದಾರೆ.

ಶಾಸಕ ರಘುಮೂರ್ತಿ ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಶಾಸಕನಾದ ನನಗೆ ಈ ಕುರಿತು ಮಾಹಿತಿ ನೀಡಿಲ್ಲ. ಶಿಷ್ಟಾಚಾರ ಪಾಲಿಸಲು ಇಂದು ಬೆಳಗ್ಗೆ ಅಧಿಕಾರಿಗಳು ನನ್ನನ್ನು ಕರೆದಿದ್ದಾರೆ. ಸಚಿವರು ಬಿಡಿ, ಜನ ಈ ಕುರಿತು ಅರಿತುಕೊಳ್ಳಬೇಕಿತ್ತು. ಚಿತ್ರದುರ್ಗ ಜಿಲ್ಲೆಯಲ್ಲೂ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಂತಹ ಸಂದರ್ಭದಲ್ಲಿ ಈ ರೀತಿ ಮಾಡಿದರೆ ಗತಿ ಏನು? ಚಳ್ಳಕೇರೆಯಲ್ಲಿಯೇ ಪ್ರಕರಣಗಳು ಪತ್ತೆಯಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸದೆ ಹಾಸ್ಟೆಲ್‍ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿ ನಮ್ಮ ಕ್ಷೇತ್ರದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.