Connect with us

Corona

ಬೆಣ್ಣೆ ನಗರಿಯಲ್ಲಿ ಕಂಟ್ರೋಲ್‍ಗೆ ಸಿಗ್ತಿಲ್ಲ ಕೊರೊನಾ-ಸ್ವಯಂಪ್ರೇರಿತವಾಗಿ ಚನ್ನಗಿರಿ ಲಾಕ್‍ಡೌನ್

Published

on

ದಾವಣಗೆರೆ: ಬೆಣ್ಣೆ ನಗರಿಯ ಕೊರೊನಾ ಸೋಂಕಿನ ಜಾಡು ಇದುವರೆಗೂ ಕಂಡು ಹಿಡಿಯಲು ಆಗುತ್ತಿಲ್ಲ. ಇಷ್ಟು ದಿನ ಕೇವಲ ಸಿಟಿಗೆ ಮಾತ್ರ ಸೀಮಿತವಾಗಿದ್ದ ಕೊರೊನಾ ಅಟ್ಟಹಾಸ ಈಗ ತಾಲೂಕು ಮಟ್ಟಕ್ಕೆ ತಲುಪಿದೆ. ನೆಮ್ಮದಿಯಿಂದ ಇದ್ದ ಜನರು ಈಗ ಭಯದ ವಾತಾವರಣದಲ್ಲೇ ಜೀವನ ನಡೆಸುವಂತಾಗಿದೆ. ಇದಕ್ಕೆ ಅಲ್ಲಿನ ಜನತೆಯೇ ಮದ್ದನ್ನು ಕಂಡುಕೊಂಡಿದ್ದಾರೆ.

ದಾವಣಗೆರೆಯಲ್ಲಿ ಕೊರೊನಾರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ದಾವಣಗೆರೆ ನಗರಕ್ಕೆ ಮಾತ್ರ ಸೀಮಿತವಾಗಿದ್ದ ಕೊರೊನಾ ಮಹಾಮಾರಿ ಈ ಹಳ್ಳಿಗಳಿಂದ ತಾಲೂಕು ಮಟ್ಟಕ್ಕೂ ಹರಡಿದೆ. ಜಗಳೂರು, ನ್ಯಾಮತಿ ತಾಲೂಕುಗಳನ್ನು ಬಿಟ್ಟು ಹೊನ್ನಾಳಿ, ಚನ್ನಗಿರಿ, ಹರಿಹರ ತಾಲೂಕಿಗೂ ಸೋಂಕು ವ್ಯಾಪಿಸಿದೆ. ಅದರಲ್ಲೂ ಚನ್ನಗಿರಿ ತಾಲೂಕಿನಲ್ಲಿ 11 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ನೂರಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್‍ನಲ್ಲಿಟ್ಟಿದ್ದಾರೆ. ಇದರಿಂದ ನೆಮ್ಮದಿ ಕಳೆದುಕೊಂಡ ಚನ್ನಗಿರಿಯ ಜನತೆ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮಾಡಿಕೊಂಡಿದ್ದಾರೆ.

ತಾಲೂಕಿನ ವಿವಿಧ ಪಕ್ಷದ ಮುಖಂಡರು ಹಾಗೂ ವ್ಯಾಪಾರಸ್ಥರು ಒಂದು ಸಭೆ ಸೇರಿ ಲಾಕ್‍ಡೌನ್ ಮಾಡಲು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ವ್ಯಾಪಾರ ವಹಿವಾಟು ನಡೆಸಿ ಆ ಬಳಿಕ ಬಂದ್ ಮಾಡಬೇಕು ಎಂದು ನಿರ್ಧಾರ ಕೈಗೊಂಡು ಸ್ವಯಂಪ್ರೇರಿತವಾಗಿ ಲಾಕ್‍ಡೌನ್ ಮಾಡಿದ್ದಾರೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೂಡ ಲಾಕ್‍ಡೌನ್‍ಗೆ ಬೆಂಬಲಿಸಿದ್ದಾರೆ. ನಗರದಲ್ಲೆಡೆ ಸಂಚರಿಸಿ ಯಾರು ಕೂಡ ಮನೆಯಿಂದ ಅನಾವಶ್ಯಕವಾಗಿ ಹೊರಬಾರದಂತೆ ಮನವಿ ಮಾಡಿದ್ದಾರೆ. ಪೊಲೀಸ್ ಇಲಾಖೆ ಕೂಡ ಜಾಗೃತಿ ಮೂಡಿಸ್ತಿದ್ದಾರೆ.

ಒಟ್ಟಾರೆಯಾಗಿ ಕೇವಲ ದಾವಣಗೆರೆಯ ಸಿಟಿಗೆ ಮಾತ್ರ ಸೀಮಿತವಾಗಿದ್ದ ಕೊರೊನಾ ಈಗ ತಾಲೂಕು ಮಟ್ಟಕ್ಕೆ ಹರಡಿದ್ದು, ಜನರು ಈಗ ಸ್ವಯಂ ಲಾಕ್‍ಡೌನ್ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಕೊರೊನಾ ಮಹಾಮಾರಿ ಜನರ ನೆಮ್ಮದಿಯನ್ನು ಹಾಳು ಮಾಡಿದೆ.