Connect with us

Bengaluru City

ಯಾವುದೇ ಕಾರಣಕ್ಕೂ ದಂಡ ಕಡಿಮೆ ಮಾಡಲ್ಲ – ಬಿಬಿಎಂಪಿ ಕಮಿಷನರ್ ಸ್ಪಷ್ಟನೆ

Published

on

– ಕೊರೊನಾ ನಿಯಂತ್ರಿಸಲು ದಂಡವೇ ಕೊನೆಯ ಅಸ್ತ್ರ

ಬೆಂಗಳೂರು: ಮಾಸ್ಕ್ ಧರಿಸಿಲ್ಲ ಅಂದರೆ ದುಬಾರಿ ದಂಡ ಹಾಕುತ್ತಿರುವುದಕ್ಕೆ ಜನಸಾಮಾನ್ಯರು ಕಿಡಿಕಾರುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ದಂಡ ಕಡಿಮೆ ಮಾಡಲ್ಲ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಂಜುನಾಥ್ ಪ್ರಸಾದ್, ಯಾವುದೇ ಕಾರಣಕ್ಕೂ ದಂಡದ ಪ್ರಮಾಣವನ್ನು ಕಡಿಮೆ ಮಾಡುವ ಪ್ರಸ್ತಾಪನೂ ಇಲ್ಲ. ಕಡಿಮೆ ಮಾಡುವುದಿಲ್ಲ. ಕೊರೊನಾ ನಿಯಂತ್ರಿಸಲು ದಂಡ ಅನ್ನೋದು ಕೊನೆಯ ಅಸ್ತ್ರ. ಹೀಗಾಗಿ ಜನರೇ ಪಾಲನೆ ಮಾಡಬೇಕಾಗುತ್ತದೆ. ಮನೆಯಲ್ಲೇ ತಯಾರಿಸಿಕೊಂಡು ಮಾಸ್ಕ್ ಧರಿಸಬಹುದು. ಆದರೂ ಮಾಸ್ಕ್ ಧರಿಸದೇ ಪದೇ ಪದೇ ನಿಯಮ ಉಲ್ಲಂಘನೆ ಮಾಡುತ್ತಾರೆ. ಅಂತಹವರು ದಂಡ ಕಟ್ಟಲಿ ಎಂದರು.

ಕೊರೊನಾ ವ್ಯಕ್ತಿಯನ್ನ ಹಿಂಸಿಸುತ್ತದೆ. ಅಲ್ಲದೇ ಇದು ಜನರ ಸುತ್ತಮುತ್ತಲಿನವರಿಗೂ ಹರಡುತ್ತದೆ. ಹೀಗಾಗಿ ರಾಷ್ಟ್ರೀಯ ವಿಪತ್ತು ಅಡಿಯಲ್ಲಿ ಕ್ರಮ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ದಂಡ ಇಳಿಸಲು ಸಾಧ್ಯವಾಗಲ್ಲ. 200 ರೂಪಾಯಿ ಇದ್ದಾಗ ಸಾಕಷ್ಟು ಜನ ನಿಯಮ ಉಲ್ಲಂಘಿಸುತ್ತಿದ್ದರು. ಇಂತಹ ಕೊರೊನಾ ಕಾಲದಲ್ಲಿ ಜನರು ಕೂಡ ಸಹಕಾರ ನೀಡಲೇಬೇಕು ಎಂದು ಬಿಬಿಎಂಪಿ ಕಮಿಷನರ್ ಹೇಳಿದರು.

ಕೊರೊನಾ ಟೆಸ್ಟ್‌ಗೆ ಸ್ಯಾಂಪಲ್ ಕೊಡುತ್ತಾರೆ, ನಂತರ ಅವರೇ ನಾಪತ್ತೆಯಾಗುತ್ತಾರೆ. ಪೂರ್ವ ವಲಯದಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ಬರೋಬ್ಬರಿ 874 ಜನರು ನಾಪತ್ತೆಯಾಗಿದ್ದಾರೆ. ಇವರಿಂದಲೇ ಕೊರೊನಾ ಚೈನ್ ಲಿಂಕ್ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವರು ತಪ್ಪು ವಿಳಾಸ ಕೊಟ್ಟು ಮೊಬೈಲ್ ನಂಬರ್ ಸ್ವಿಚ್ ಆಪ್ ಮಾಡಿಕೊಳ್ಳುತ್ತಾರೆ. ಈ ಕೇಸ್‍ಗಳ ಮಾಹಿತಿ ಈಗ ಪೊಲೀಸ್ ಇಲಾಖೆಗೆ ಹೋಗಲಿದೆ. ಪೊಲೀಸ್ ಇಲಾಖೆ ವತಿಯಿಂದ ಪಾಸಿಟಿವ್ ಕೇಸ್ ಜಾಲ ಪತ್ತೆ ಮಾಡಲಾಗುತ್ತದೆ ಎಂದರು.

ಕೊರೊನಾ ಟೆಸ್ಟ್ ನಲ್ಲಿ ಬದಲಾವಣೆ ಮಾಡಲಾಗಿದೆ. ಈಗ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಬೇಕಾಗಿಲ್ಲ. ಬೀದಿ ಬೀದಿಗೆ ಟೆಸ್ಟ್ ಮಾಡಿಸಲಾಗುತ್ತದೆ. ಪ್ರತಿದಿನ ಕೇಸ್‍ಗಳ ಸಂಖ್ಯೆ ಹೆಚ್ಚಾದರೂ ಕೊರೊನಾ ಟೆಸ್ಟ್ ಮಾತ್ರ ಕಡಿಮೆ ಮಾಡಲ್ಲ. ನಮ್ಮ ಟೆಸ್ಟ್ ನಿತ್ಯ ಏರಿಕೆಯಾಗುತ್ತಲೇ ಇದೆ. ಪ್ರಧಾನ ಮಂತ್ರಿಗಳ ಸೂಚನೆ ಮೇರೆಗೆ 40 ಸಾವಿರಕ್ಕೆ ಕೋವಿಡ್ ಸೋಂಕು ಪರೀಕ್ಷೆ ಹೆಚ್ಚಳ ಮಾಡಲಾಗುತ್ತಿದೆ.

ರಾಟ್ ಕಿಟ್, ಆರ್‌ಟಿಪಿಸಿಆರ್ ಟೆಸ್ಟ್ ಕಿಟ್‍ಗಳಿಗೆ ಕೊರತೆ ಇಲ್ಲ. ರಾಜ್ಯ ಸರ್ಕಾರವೂ ಕೊಡುತ್ತಿದೆ, ಬಿಬಿಎಂಪಿಯೂ ಟೆಂಡರ್ ಕರೆದಿದೆ. ಇದಕ್ಕಾಗಿ ಹೆಚ್ಚಿನ ಸಿಬ್ಬಂದಿನ್ನೂ ನೇಮಕ ಮಾಡಲು ಅವಕಾಶ ಇದೆ. ಯಾರ‍್ಯಾರಿಗೆ ಟೆಸ್ಟ್ ಮಾಡಬೇಕು ಎಂಬ ಟಾರ್ಗೆಟ್ ಇದೆ. ಬೇರೆ ಬೇರೆ ಖಾಯಿಲೆ ಇರುವವರು, ಉಸಿರಾಟದ ಸಮಸ್ಯೆ, ಕಂಟೈನ್‍ಮೆಂಟ್ ಪ್ರದೇಶದ ಜನ, ವಯಸ್ಸಾದವರನ್ನು ಟೆಸ್ಟ್ ಮಾಡಿದರೆ ದಿನಕ್ಕೆ 40 ಸಾವಿರ ಆಗಲಿದೆ. ಪೂರ್ವ ವಲಯದಲ್ಲಿ ಶೇ.13.11 ಪಾಸಿಟಿವ್ ರೇಟ್ ಇದೆ. ಶೇ.13.11 ನಿಂದ ಶೇ.5ಕ್ಕೆ ಇಳಿಸಬೇಕಿದೆ. ಎಂದು ಮಂಜುನಾಥ್ ಪ್ರಸಾದ್ ಹೇಳಿದರು.

Click to comment

Leave a Reply

Your email address will not be published. Required fields are marked *