Connect with us

Corona

ಗಂಗಮ್ಮನಿಗೆ ಕಲಾವಿದರ ಕಲ್ಯಾಣ ವೇದಿಕೆ ನೆರವು- ಗಾಯನ ಕಲಾವಿದರಿಗೆ ಆಹಾರ ಕಿಟ್ ವಿತರಣೆ

Published

on

– ವಾದ್ಯಗೋಷ್ಠಿ ನಡೆಸಲು ಅನುಮತಿ ನೀಡುವಂತೆ ಮನವಿ

ಕೊಪ್ಪಳ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾವಿರಾರು ಕೂಲಿ ಕಾರ್ಮಿಕರು ಬಡವರು, ಕಲಾವಿದರು ಸೇರಿದಂತೆ ಆರ್ಥಿಕವಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಗಾಯನ ವೃತ್ತಿ ಅವಲಂಬಿತರು ಪರದಾಡುತ್ತಿದ್ದಾರೆ. ಇದೀಗ ಅಂತಹರನ್ನು ಗುರುತಿಸಿ ಕಲ್ಯಾಣ ವೇದಿಕೆಯ ಕೊಪ್ಪಳ ಜಿಲ್ಲಾ ಘಟಕದಿಂದ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ.

ಲಾಕ್‍ಡೌನ್ ಬಳಿಕ ಸಾರ್ವಜನಿಕ ಸಭೆ, ಸಮಾರಂಭ, ಮದುವೆ, ಕಲ್ಯಾಣದಂತಹ ಕಾರ್ಯಕ್ರಮಗಳಲ್ಲಿ ಗಾಯನ ಕಛೇರಿಗೆ ಅವಕಾಶಗಳಿಲ್ಲದಂತಾಗಿದೆ. ಇದರಿಂದ ಗಾಯನ ವೃತ್ತಿ ಅವಲಂಬಿತರು ಪರದಾಡುತ್ತಿದ್ದರು. ಇದನ್ನು ಮನಗಂಡ ಜಿಲ್ಲಾ ಕಲಾವಿದರ ಕಲ್ಯಾಣ ವೇದಿಕೆ ಬಡ ಕಲಾವಿದರನ್ನು ಗುರುತಿಸಿ ಆಹಾರ ಸಾಮಗ್ರಿಗಳ ಕಿಟ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಎಸ್.ಗಂಗಮ್ಮ ಅವರಿಗೆ ಆಹಾರದ ಕಿಟ್ ನೀಡುವ ಮೂಲಕ ಕಲಾವಿದರ ಕಲ್ಯಾಣ ವೇದಿಕೆ ನೆರವಾಗಿದೆ. ಅಲ್ಲದೇ ಸಂಘಟನೆಯ ಪ್ರಮುಖರು, ಜಿಲ್ಲೆಯ ಇತರ ಕಲಾವಿದರಿಗೆ ಇದನ್ನ ವಿಸ್ತರಿಸುವ ಬಗ್ಗೆ ನಿರ್ಣಯ ಕೈಗೊಂಡರು. ಈ ಸಂದರ್ಭದಲ್ಲಿ ಕಲಾವಿದರ ಕಲ್ಯಾಣ ವೇದಿಕೆಯ ಜಿಲ್ಲಾಧ್ಯಕ್ಷರು ಶ್ರೀ ವಿಜಯ್ ವಿಶ್ವ ಕರ್ಮ, ಉಪಾಧ್ಯಕ್ಷರು ಶ್ರೀ ಮಾಜಿದ್ ಖಾನ್, ಕಾರ್ಯದರ್ಶಿಗಳು ಶ್ರೀ ಅಮರೇಶ್ ಜವಳಿ, ಸಹ ಕಾರ್ಯದರ್ಶಿ ಶ್ರೀ ಪ್ರಸಾದ್ ಬನ್ನಿಗಿಡದ್ ಹಾಗೂ ಜಿಲ್ಲಾ ಖಜಾಂಚಿ ಶ್ರೀ ಮಿಮಿಕ್ರಿ ಮಾರೇಶ್ ಪಾಲ್ಗೊಂಡಿದ್ದರು.

ಅಲ್ಲದೇ ಜಿಲ್ಲಾಧಿಕಾರಿಗಳಿಗೆ ಮದುವೆ ಸಮಾರಂಭಗಳಲ್ಲಿ ವಾದ್ಯಗೋಷ್ಠಿ ನಡೆಸಲು ಅನುಮತಿ ನೀಡುವಂತೆ ಜಿಲ್ಲಾ ಕಲಾವಿದರ ಕಲಾ ಸಾಂಸ್ಕೃತಿಕ ಸಂಸ್ಥೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಪತ್ರದಲ್ಲಿ ಏನಿದೆ?
“ದೇಶದಲ್ಲಿ ಕೊರೊನಾ ಆಕ್ರಮಣದಿಂದ ಲಾಕ್‍ಡೌನ್ ಉಂಟಾಗಿ ಎಲ್ಲರೂ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅದರಲ್ಲೂ ಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ಕೊಪ್ಪಳ ಜಿಲ್ಲೆಯ ವಾದ್ಯಗೋಷ್ಠಿ ಕಲಾವಿದರು ಮೂರು ತಿಂಗಳಿನಿಂದ ಯಾವುದೇ ಕಾರ್ಯಕ್ರಮಗಳಿಲ್ಲದೆ ತಮ್ಮ ಕುಟುಂಬ ನಡೆಸಲು ಕಷ್ಟಕರವಾಗಿದೆ. ಸರ್ಕಾರವೂ ಈ ವಾದ್ಯಗೋಷ್ಠಿ ಕಲಾವಿದರಿಗೆ ಯಾವುದೇ ತರಹದ ಆರ್ಥಿಕ ನೆರವು ನೀಡಿರುವುದಿಲ್ಲ. ಆದ್ದರಿಂದ ನೀವು ಕಲಾವಿದರ ಜೀವನೋಪಾಯಕ್ಕಾಗಿ ಮದುವೆ, ಸಮಾರಂಭಗಳಲ್ಲಿ ವಾದ್ಯಗೋಷ್ಠಿಯನ್ನು ಮಾಡಲು ಅನುಮತಿ ಮಾಡಿಕೊಡಬೇಕೆಂದು” ಪತ್ರದಲ್ಲಿ ಮನವಿ ಮಾಡಿಕೊಂಡಿದೆ.