Connect with us

Corona

ಕೋವಿಡ್ ನಿಯಂತ್ರಣದಲ್ಲಿ ರಾಜ್ಯಕ್ಕೆ ಕೊಡಗು ಮಾದರಿ

Published

on

ಮಡಿಕೇರಿ: ಮಾರ್ಚ್ ತಿಂಗಳಲ್ಲಿ ದೇಶಕ್ಕೆ ಎಂಟ್ರಿಯಾಗಿದ್ದ ಡೆಡ್ಲಿ ವೈರಸ್ ಈಗ ಪ್ರತೀ ಹಳ್ಳಿ ಹಳ್ಳಿಯಲ್ಲೂ ತನ್ನ ಕಬಂಧ ಬಾಹು ಚಾಚಿದೆ. ರಾಜ್ಯದಲ್ಲಿ ಎರಡೂವರೆ ಲಕ್ಷ ಕೊರೊನಾ ಕೇಸ್ ಗಳು ಬಂದಿದ್ದರೂ, ಕೊಡಗು ಜಿಲ್ಲೆಯಲ್ಲಿ ಮಾತ್ರ ಅತ್ಯಂತ ಕಡಿಮೆ ಪ್ರಕರಣಗಳು ದಾಖಲಾಗಿವೆ. ವೈರಸ್ ಚೀನಾದಲ್ಲಿ ಹುಟ್ಟಿ, ಎಲ್ಲಾ ದೇಶಗಳಿಗೂ ಹಬ್ಬುತ್ತಿದ್ದ ವೈರಸ್ ಭಾರತಕ್ಕೂ ಎಂಟ್ರಿ ಕೊಟ್ಟಿತ್ತು. ದೇಶದೆಲ್ಲೆಡೆ ಹರಡೋದಕ್ಕೆ ಅವಕಾಶ ನೀಡ್ಲೇಬಾರದು ಅಂತ ದೇಶವನ್ನೇ ಲಾಕ್‍ಡೌನ್ ಮಾಡಲಾಗಿತ್ತು.

ಆದರೂ ದೇಶವ್ಯಾಪಿ ಹರಡೋದಕ್ಕೆ ತುಂಬ ದಿನವೇನು ಬೇಕಾಗಲಿಲ್ಲ. ಆರಂಭದಲ್ಲಿ ಕಡಿಮೆ ಜನರಿಗೆ ಹರಡಿದ್ದ ಮಹಾಮಾರಿ ಇದೀಗ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರ ಮೈಹೊಕ್ಕಿಬಿಟ್ಟಿದೆ. ರಾಜ್ಯದ 30 ಜಿಲ್ಲೆಯನ್ನು ಗಮನಿಸಿದಾಗ ಕೊಡಗು ಜಿಲ್ಲೆಯಲ್ಲಿ ತೀರ ಕಡಿಮೆ ಜನರಿಗೆ ಹರಡಿದೆ. ಹಾಗಂತ ಕೊವಿಡ್ ಟೆಸ್ಟ್ ಮಾಡುವುದರಲ್ಲೇನು ಆರೋಗ್ಯ ಇಲಾಖೆ ಹಿಂದೆ ಬಿದ್ದಿಲ್ಲ. ಪ್ರತೀ ದಿನ ಜಿಲ್ಲೆಯಲ್ಲಿ ಐದು ನೂರಕ್ಕೂ ಹೆಚ್ಚು ಜನರ ಸ್ವ್ಯಾಬ್ ತೆಗೆದು ಪರಿಶೀಲನೆ ಮಾಡಲಾಗುತ್ತಿದೆ.

ಮೇ ತಿಂಗಳಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ಆರಂಭಿಸಿದ ದಿನದಿಂದ ಇದುವರೆಗೆ 26,247 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 24,747 ಜನರಿಗೆ ನೆಗೆಟಿವ್ ಬಂದಿದೆ. ಅಂದರೆ 1,279 ಜನರಿಗೆ ಮಾತ್ರ ಸೋಂಕು ಹರಡಿದೆ. ಕೇವಲ 17 ಜನರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಅವರು ಕೂಡ ತಡವಾಗಿ ಆಸ್ಪತ್ರೆಗೆ ತೋರಿಸಿದ್ದರಿಂದ ಸಾವನ್ನಪ್ಪಲು ಕಾರಣವಾಗಿದೆ. 1,020 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 252 ಆಕ್ಟೀವ್ ಕೇಸುಗಳಿವೆ. ಅಂದರೆ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಕಡಿಮೆ ಸಂಖ್ಯೆಯಲ್ಲಿ ಕೊರೊನಾ ರೋಗಿಗಳಿರುವುದು ಕೊಡಗಿಗೆ ಒಂದು ಹಿರಿಮೆಯಂತಾಗಿದೆ.

ಕೊಡಗು ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ ಮೂರು ತಿಂಗಳು ನಿರಂತರ ಮಳೆ ಸುರಿಯುತಿತ್ತು. ಇಡೀ ಜಿಲ್ಲೆ ಸಂಪೂರ್ಣ ಫ್ರಿಡ್ಜ್ ಎನ್ನೋ ರೀತಿ ಕೋಲ್ಡ್ ವಾತಾವರಣವಿತ್ತು. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಭಾರೀ ಕೊರೊನಾ ಮಹಾಮಾರಿ ಉಲ್ಭಣಗೊಳ್ಳುತ್ತೆ ಎನ್ನೋ ಆತಂಕವಿತ್ತು. ಆದರೆ ಆರೋಗ್ಯ ಇಲಾಖೆ ಪ್ರತೀ ಹಳ್ಳಿ ಹಳ್ಳಿಯಲ್ಲೂ ಆಂಟಿಜೆನ್ ಟೆಸ್ಟ್ ಮೂಲಕ ಕೊರೊನಾ ರೋಗ ಪತ್ತೆ ಹಚ್ಚಲು ಮುಂದಾಯಿತು. ಅಲ್ಲದೆ ಮಾಸ್ಕ್ ಧರಿಸುವಂತೆ ಜನರ ಮನವೊಲಿಸುವಲ್ಲಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಅರಿವು ಮೂಡಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಜೊತೆಗೆ ಜನರು ಕೂಡ ಕೊರೊನಾ ಟೆಸ್ಟ್‍ಗೆ ಯಾವುದೇ ಭಯ ಆತಂಕವಿಲ್ಲದೆ ಒಳಪಟ್ಟಿದ್ದಾರೆ. ಅಲ್ಲದೆ ಮನೆಯಲ್ಲೂ ಕಷಾಯಗಳನ್ನು ಮಾಡಿ ಸೇವಿಸಿ ದೇಹದಲ್ಲಿ ಉಷ್ಣತೆ ಹೆಚ್ಚಿಸಿಕೊಂಡು ಕೊರೊನಾ ಹತ್ತಿರ ಸುಳಿಯದಂತೆ ಮಾಡಿಕೊಂಡಿದ್ದಾರೆ ಎನ್ನೋದು ಜನರ ಅಭಿಪ್ರಾಯ. ಒಟ್ಟಿನಲ್ಲಿ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಉಲ್ಬಣಗೊಂಡಿದ್ದರು, ಕೊಡಗಿನಲ್ಲಿ ಮಾತ್ರ ನಿಯಂತ್ರಣದಲ್ಲಿದೆ. ಇದು ರಾಜ್ಯಕ್ಕೂ ಮಾದರಿ ಎಂದರೆ ತಪ್ಪಾಗಲಾರದು. ಆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗದಂತೆ ಜನರೇ ಎಚ್ಚೆತ್ತುಕೊಳ್ಳಬೇಕಿದೆ.

Click to comment

Leave a Reply

Your email address will not be published. Required fields are marked *