ಜಂಬೂ ಸವಾರಿಗೆ ಪುಷ್ಪಾರ್ಚನೆ – ಪ್ರೋಟೋಕಾಲ್‌ನಲ್ಲಿ ಸಿಎಂ ಪತ್ನಿ ಹೆಸರು ಇರಲಿಲ್ಲ: ಸಚಿವ ಯತೀಂದ್ರ

2 Min Read

ಮೈಸೂರು: ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅವರು ಮೊದಲ ಬಾರಿಗೆ ಜಂಜೂಸವಾರಿಗೆ ಪುಷ್ಪಾರ್ಚನೆ ಮಾಡಿದ್ದು, ದಸರಾ (Dasara) ಕೂಡ ಯಶಸ್ವಿಯಾಗಿ ನೆರವೇರಿದೆ. ಆದ್ರೆ ದಸರಾದಲ್ಲಿ ನಡೆದ ಕೆಲ ಘಟನೆಗಳ ಬಗ್ಗೆ ಈಗ ಅಪಸ್ವರ ಎದ್ದಿದೆ. ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿದ್ದು, ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು, ಶಿಷ್ಟಾಚಾರ ಪಟ್ಟಿಯಲ್ಲಿ ಮುಖ್ಯಮಂತ್ರಿಗಳ ಪತ್ನಿ ಹೆಸರು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶಿಷ್ಟಾಚಾರದಲ್ಲಿ ಪಟ್ಟಿಯಲ್ಲಿ ಸಿಎಂ ಪತ್ನಿ ಹೆಸರು ಇರಲಿಲ್ಲ. ಆದ್ರೂ ಸಿಎಂ ಪತ್ನಿ ಉಷಾ ಶಿವಕುಮಾರ್‌ (Usha Shivakumar) ಅವರು ಪುಷ್ಪಾರ್ಚನೆ ಮಾಡಿರುವುದು ತಪ್ಪೇನಿಲ್ಲ. ಅವರು ದೇವಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಅಷ್ಟೇ. ಸರ್ಕಾರದ ಕೆಲಸವನ್ನೇನು ಮಾಡಿಲ್ವಲ್ಲ? ಹೀಗಾಗಿ ಶಿಷ್ಟಾಚಾರ ಉಲ್ಲಂಘನೆಯಾದ್ರೂ ತಪ್ಪೇನಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇನ್ನೂ ನಂದಿ ಕಂಬ ಪೂಜೆ ವೇಳೆ ಸಚಿವರನ್ನ ತಡೆದ ವಿಚಾರ ಕುರಿತು ಮಾತನಾಡಿ, ಸಚಿವರನ್ನ ತಡೆಯಬಾರದಿತ್ತು. ಐಜಿಪಿ ದರ್ಜೆಯ ಅಧಿಕಾರಿ ಯಾಕೆ ಈ ರೀತಿ ಮಾಡಿದ್ರು ಗೊತ್ತಿಲ್ಲ. ಪೊಲೀಸರು ಓವರ್ ಬೋರ್ಡ್ ಆಗಿ ವರ್ತಿದ್ದಾರೆ. ಸರ್ಕಾರ ತನಿಖೆಗೆ ಸೂಚನೆ ನೀಡಿದೆ, ತನಿಖೆ ನಡೆಯುತ್ತಿದೆ. ಶಿಷ್ಟಾಚಾರದ ಪ್ರಕಾರ ಮಂತ್ರಿಗಳನ್ನ ತಡೆಯಬಾರದಿತ್ತು ಎಂದಿದ್ದಾರೆ.

ಸಚಿವರನ್ನ ತಡೆಯಲು ಯಾರಾದರೂ ಸೂಚನೆ ಕೊಟಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ನಮಗೆ ಗೊತ್ತಿಲ್ಲ. ಈ ವಿಚಾರವಾಗಿಯೇ ತನಿಖೆ ನಡೆಯುತ್ತಿದೆ. ತನಿಖಾ ತಂಡದ ಮುಂದೆ ಅಧಿಕಾರಿ ಉತ್ತರ ಕೊಡುತ್ತಾರೆ. ಮೂವರು ಕೂಡ ದಲಿತ ಸಚಿವರು. ಸಚಿವರಾದ ಬಾಲಕೃಷ್ಣ, ಪುಟ್ಟರಂಗಶೆಟ್ಟಿ ಅವರನ್ನೂ ತಡೆದಿದ್ರು. ನಾನೇ ಸಿಎಂಗೆ ಹೇಳಿ ಬಿಡಿಸಿದ್ದೇನೆ ಎಂದು ಹೇಳಿದ್ದಾರೆ.

ದಸರಾ ಸರ್ಕಾರಿ ಜಾಹಿರಾತಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಫೋಟೊ ಹಾಕದ ವಿಚಾರ ಕುರಿತು ಮಾತನಾಡಿ, ಪ್ರತಿ ಬಾರಿ ಉಸ್ತುವಾರಿ ಸಚಿವರ ಫೋಟೊ ಹಾಕಿಲ್ಲ. ನಾನು ಇದನ್ನ ಪರಿಶೀಲನೆ ಮಾಡಿದ್ದೇನೆ. ಆದರೆ ಈ ಬಾರಿ ಮಹಾರಾಜರ ಫೋಟೊ ಹಾಕಿದ್ದಾರೆ. ಮಹಾರಾಜರು ಒಂದು ಪಕ್ಷದಲ್ಲಿದ್ದಾರೆ. ಹೀಗಾಗಿ ಕಾರ್ಯಕರ್ತರು ಉಸ್ತುವಾರಿ ಸಚಿವರ ಫೋಟೋ ಯಾಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Share This Article
Exit mobile version