Connect with us

Latest

ಸಂವಿಧಾನದ ಮೇಲೆ ಪ್ರಮಾಣ, ರಕ್ತದಾನ ಶಿಬಿರ ಏರ್ಪಡಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

Published

on

ಭುವನೇಶ್ವರ: ಧಾರ್ಮಿಕ ಸಾಂಪ್ರದಾಯದ ಪ್ರಕಾರ ಮದುವೆಯಾಗದೇ ಜೋಡಿಯೊಂದು ವಿಭಿನ್ನ ರೀತಿಯಲ್ಲಿ ವಿವಾಹವಾಗಿ ಸುದ್ದಿಯಾಗಿದೆ.

ಓಡಿಶಾದ ಗಂಜಾಂ ಜಿಲ್ಲೆಯ ನವ ಜೋಡಿ ಧಾರ್ಮಿಕ ಸಾಂಪ್ರದಾಯವನ್ನು ಬದಿಗೊತ್ತಿ ಭಾರತೀಯ ಸಂವಿಧಾನದ ಮೇಲೆ ಪ್ರಮಾಣ ಮಾಡಿ ನವ ದಾಂಪತ್ಯಕ್ಕೆ ಕಾಲಿರಿಸಿದೆ. ಮಾತ್ರವಲ್ಲದೆ ವಿಜ್ರಂಭಣೆಗೆ ಮಾರು ಹೋಗದೆ ರಕ್ತದಾನ ಶಿಬಿರವನ್ನು ಏರ್ಪಡಿಸಿ ಸಮಾಜಮುಖಿ ಕಾರ್ಯ ಮಾಡುವ ಮೂಲಕ ವಿವಾಹವಾಗಿದ್ದಾರೆ.

ಔಷಧೀಯ ಸಂಸ್ಥೆಯ ಉದ್ಯೋಗಿಯಾಗಿರುವ 31 ವರ್ಷದ ಬಿಪ್ಲಾಬ್ ಕುಮಾರ್ ಹಾಗೂ ಸಹಾಯಕ ನರ್ಸ್ ಆಗಿರುವ 23 ವರ್ಷದ ಅನಿತಾ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತರರಂತೆ ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ಅತಿಥಿಗಳ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ನಿವೃತ್ತ ಸರ್ಕಾರಿ ನೌಕರ ಬಿಡಿಯುತ್ ಪ್ರಭಾ ರಾತ್ ಅವರು ನವ ದಂಪತಿಗೆ ಪ್ರಮಾಣವಚನವನ್ನು ಬೋಧಿಸಿದ್ದಾರೆ. ನಮ್ಮ ವಿವಾಹವು ಜಾತಿಗಳನ್ನು ಹೊಂದಿಸದೆ, ಮಂತ್ರಗಳನ್ನು ಪಠಿಸದೆ ವಿಭಿನ್ನವಾಗಿ ನಡೆದಿದೆ ಎಂದು ದಂಪತಿ ತಿಳಿಸಿದ್ದಾರೆ.

ಸಮಾಜಕ್ಕೆ ಮಾದರಿಯಾಗುವಂತೆ ಮಗನ ವಿವಾಹ ಮಾಡಬೇಕೆಂದು ನಿರ್ಧರಿಸಿದ್ದೆ. ನಾನು ಪುರೋಹಿತರು ಮಂತ್ರಗಳನ್ನು ಹೇಳುವ ಸಾಂಪ್ರದಾಯಿಕ ವಿವಾಹಗಳನ್ನು ನಂಬುವುದಿಲ್ಲ ಎಂದು ಮದುಮಗನ ತಂದೆ, ನಿವೃತ್ತ ಸರ್ಕಾರಿ ನೌಕರರಾದ ಮೋಹನ್ ರಾವ್ ವಿವರಿಸಿದ್ದಾರೆ.

ಮದುಮಗಳು ಅನಿತಾ ಸಹ ಈ ಕುರಿತು ಸಂತಸ ವ್ಯಕ್ತಪಡಿಸಿದ್ದು, ವಿಭಿನ್ನ ರೀತಿಯಲ್ಲಿ ಹಾಗೂ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಮದುವೆಯಾಗಿದ್ದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ರಕ್ತದಾನ ಶಿಬಿರದ ಕುರಿತು ಮಾತನಾಡಿದ ಮದುಮಗ ಬಿಪ್ಲಾಬ್, ನಮ್ಮ ವಿವಾಹವನ್ನು ಸ್ಮರಣೀಯವಾಗಿಸಲು ರಕ್ತದಾನ ಶಿಬಿರವನ್ನು ಆಯೋಜಿಸಿದ್ದೆವು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ 36 ಯುನಿಟ್(1 ಯುನಿಟ್ 525 ಎಂ.ಎಲ್.) ರಕ್ತವನ್ನು ಸಂಗ್ರಹಿಸಲಾಗಿದೆ. ಹ್ಯೂಮನಿಸ್ಟ್ ಮತ್ತು ವೈಚಾರಿಕವಾದಿ ಸಂಸ್ಥೆ(ಎಚ್‍ಆರ್‍ಒ) ಹಾಗೂ ಸ್ವಯಂ ಸೇವಕ ರಕ್ತದಾನಿಗಳ ಸಂಘ(ಎವಿಬಿಡಿ) ದಂಪತಿಯ ಪ್ರಯತ್ನವನ್ನು ಶ್ಲಾಘಿಸಿವೆ.