Sunday, 21st July 2019

ಚುನಾವಣೆ ಡ್ಯೂಟಿಗೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಸಿಆರ್‌ಪಿಎಫ್‌ ಪೇದೆ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಸಿಆರ್‌ಪಿಎಫ್‌ನ ಕಾನ್ಸ್​ಟೇಬಲ್ ಓರ್ವ ತನ್ನ ಪತ್ನಿಯನ್ನೇ ಕೊಂದ ಘಟನೆ ಛತ್ತೀಸ್‍ಗಢದ ಜಗ್ದಲ್‍ಪುರದಲ್ಲಿ ನಡೆದಿದೆ.

ಕೋಬ್ರಾ ಬೆಟಾಲಿಯನ್‍ನ ಕಾನ್ಸ್​ಟೇಬಲ್ ಗುರುವೀರ್ ಸಿಂಗ್ ಕೊಲೆ ಮಾಡಿದ ಆರೋಪಿ. ಗುರುವೀರ್ ಸಿಂಗ್ ಸಿಆರ್‌ಪಿಎಫ್‌ನ 201 ಕೋಬ್ರಾ ಬೆಟಾಲಿಯನ್‍ನ ಹೆಡ್ ಕ್ವಾಟ್ರಸ್‍ನಲ್ಲಿ ಪತ್ನಿಯ ಜೊತೆ ವಾಸವಾಗಿದ್ದರು. ಮಾರ್ಚ್ 16ರಂದು ಕರ್ತವ್ಯಕ್ಕೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಕೋಪಗೊಂಡು ಪತ್ನಿ ಅನುಪ್ರಿಯ ಗೌತಮ್‍ಳನ್ನು ಕತ್ತು ಹಿಸುಕಿ ಕಾನ್ಸ್​ಟೇಬಲ್ ಹತ್ಯೆ ಮಾಡಿದ್ದಾನೆ. ಬಳಿಕ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ಮತ್ತು ವಿಚಾರಣೆ ಬಳಿಕ ನಿಜ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 301 ಹಾಗೂ 201ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *