Connect with us

ಟೂಲ್‍ಕಿಟ್ ರಚಿಸಿ ಕಾಂಗ್ರೆಸ್‍ನಿಂದ ಭಾರತದ ವಿರುದ್ಧ ವಿಶ್ವಮಟ್ಟದಲ್ಲಿ ಅಪಪ್ರಚಾರ – ಬಿಜೆಪಿ

ಟೂಲ್‍ಕಿಟ್ ರಚಿಸಿ ಕಾಂಗ್ರೆಸ್‍ನಿಂದ ಭಾರತದ ವಿರುದ್ಧ ವಿಶ್ವಮಟ್ಟದಲ್ಲಿ ಅಪಪ್ರಚಾರ – ಬಿಜೆಪಿ

– ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ
– ಇದು ಬಿಜೆಪಿಯವರೇ ಸೃಷ್ಟಿಸಿದ ಟೂಲ್‍ಕಿಟ್ : ಕಾಂಗ್ರೆಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕೊರೊನಾ ವಿಚಾರದಲ್ಲಿ ಕಾಂಗ್ರೆಸ್ ಟೂಲ್ ಕಿಟ್ ರಚಿಸಿ ವಿಶ್ವಮಟ್ಟದಲ್ಲಿ ಅಪಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಕೊರೊನಾ ಸಂದರ್ಭದಲ್ಲಿ ಪಕ್ಷಬೇಧ ಮರೆತು ದೇಶದ ಜೊತೆ ಇರಬೇಕಾದ ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಟೂಲ್ ಕಿಟ್ ರಚಿಸಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಗಂಭೀರ ಆರೋಪ ಮಾಡಿದ್ದಾರೆ.

ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಲಾಕ್‍ಡೌನ್ ಯಶಸ್ವಿಯಾಗಿದ್ದರಿಂದ ಕಾಂಗ್ರೆಸ್ ನಾಯಕರಿಗೆ ಮೋದಿ ವಿರುದ್ಧ ಅಪಪ್ರಚಾರ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ಅಲೆಯ ಆರಂಭದಲ್ಲಿ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿ ಜನರಲ್ಲಿ ಭಯ ಮೂಡಿಸಿದರು. ಇದರಿಂದಾಗಿ ಲಸಿಕೆ ಪಡೆದುಕೊಳ್ಳಲು ಜನ ಹಿಂದೇಟು ಹಾಕಿದರು ಎಂದು ಬಿಜೆಪಿ ಆರೋಪಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಟೂಲ್ ಕಿಟ್ ವಿಚಾರ ಈಗ ಟ್ರೆಂಡಿಂಗ್ ಟಾಪಿಕ್ ಆಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಆರೋಪ ಪ್ರತ್ಯರೋಪ ಮಾಡುತ್ತಿದ್ದಾರೆ.

ಬಿಜೆಪಿ ಆರೋಪ ಏನು? ಟೂಲ್ ಕಿಟ್‍ನಲ್ಲಿ ಏನಿದೆ?
ಕೋವಿಡ್ ವೈರಸ್‍ನ ಹೊಸ ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳದೇ ಇದ್ದರೂ ‘ಭಾರತದ ತಳಿ’ ಅಥವಾ ಮೋದಿ ತಳಿ’ ಎನ್ನುವಂತೆ ಪ್ರಚಾರ ಮಾಡಬೇಕು. ಪ್ರಧಾನಿಯವರ ಖ್ಯಾತಿಗೆ ಧಕ್ಕೆ ತರಬೇಕು ಮತ್ತು ಜನಪ್ರಿಯತೆಯನ್ನು ಕುಗ್ಗಿಸಲು ಸಾಮಾಜಿಕ ಜಾಲತಾಣವನ್ನು ಬಳಸಬೇಕು.

ಭಾರತದಲ್ಲಿರುವ ವಿದೇಶಿ ಪತ್ರಕರ್ತರು ಮೋದಿ ಮತ್ತು ಅವರ ಕೆಟ್ಟ ನಿರ್ವಹಣೆಯ ಬಗ್ಗೆ ವರದಿ ಮಾಡುವಂತೆ ನೋಡಿಕೊಳ್ಳಬೇಕು. ಪರಿಚಯದಲ್ಲಿರುವ ಆಸ್ಪತ್ರೆಯಲ್ಲಿ ಬೆಡ್ ಬುಕ್ ಮಾಡಬೇಕು. ಈ ಮೂಲಕ ಕೃತಕ ಅಭಾವ ಸೃಷ್ಟಿಸಿ ಬೆಡ್ ಕೊರತೆಯಾಗುವಂತೆ ಮಾಡಬೇಕು.

ಕೋವಿಡ್ ಸಾವು ಮತ್ತು ಶವಸಂಸ್ಕಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿದೇಶಿ ಮಾಧ್ಯಮಗಳಲ್ಲಿ ಬಳಕೆಯಾಗಿರುವ ಚಿತ್ರಗಳನ್ನು ಬಳಸಬೇಕು. ಈ ರೀತಿಯ ಚಿತ್ರಗಳು ಸ್ಥಳೀಯ ಪತ್ರಕರ್ತರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು.

ಕಾಂಗ್ರೆಸ್ ತಿರುಗೇಟು:
ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದ್ದು ಇದು ಬಿಜೆಪಿಯವರೇ ಸೃಷ್ಟಿಸಿದ ಟೂಲ್ ಕಿಟ್. ಕೊರೊನಾ ನಿಯಂತ್ರಣ ಮಾಡಲು ವಿಫಲವಾದ ಕೇಂದ್ರ ಸರ್ಕಾರ ನಕಲಿ ಟೂಲ್ ಕಿಟ್ ರಚಿಸಿದೆ. ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿದ್ದಕ್ಕೆ ನಮ್ಮ ವಿರುದ್ಧ ಈ ಸುಳ್ಳು ಆರೋಪ ಮಾಡಿದೆ ಎಂದು ತಿರುಗೇಟು ನೀಡಿದೆ.

ಈ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಿದ ಕಾಂಗ್ರೆಸ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ವಕ್ತಾರ ಸಂಬಿತ್ ಪಾತ್ರ, ಕೇಂದ್ರ ಸಚಿವೆ ಸ್ಮೃತಿ  ಇರಾನಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

Advertisement
Advertisement