Connect with us

Bengaluru City

ಜೆಡಿಎಸ್ ಬಂಡಾಯ ಶಾಸಕರ ವಿರುದ್ಧ ‘ಕೈ’ನಲ್ಲೇ ಬಂಡಾಯ- ಖರ್ಗೆಗೆ ದೂರು

Published

on

ಬೆಂಗಳೂರು: ಜೆಡಿಎಸ್‍ನ 7 ಬಂಡಾಯ ಶಾಸಕರ ವಿರುದ್ಧ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿ ಟಿಕೆಟ್‍ಗಾಗಿ ಲಾಭಿ ನಡೆಸಿದ್ದಾರೆ.

ಬಂಡಾಯ ಶಾಸಕರಿಗೆ ಅವರ ಕ್ಷೇತ್ರದಲ್ಲೇ ಟಿಕೆಟ್ ಕೊಡ್ತೀವಿ ಅಂತ ಸಿಎಂ ಹೇಳಿದ್ದಾರೆ. ಹಾಗಿದ್ರೆ ನಾವು ಲೆಕ್ಕಕ್ಕಿಲ್ವಾ? ಅಂತ ಖರ್ಗೆ ಅವರ ಬಳಿ ಅಳಲು ತೋಡಿಕೊಂಡಿದ್ದಾರೆ. ತಮ್ಮ ಬೆಂಬಲಿಗರ ಮಾತಿಗೆ ಕಟ್ಟುಬಿದ್ದಿರೋ ಖರ್ಗೆ, ಟಿಕೆಟ್ ನಿಮಗೇ ಕೊಡಿಸ್ತೀನಿ ಅಂತ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಪುಲಿಕೇಶಿ ನಗರದಲ್ಲಿ ಖರ್ಗೆ ಆಪ್ತ ಬಸವಲಿಂಗಪ್ಪ ಅವರ ಪುತ್ರ ಮಾಜಿ ಶಾಸಕ ಪ್ರಸನ್ನಕುಮಾರ್ ಟಿಕೆಟ್‍ಗೆ ಲಾಭಿ ನಡೆಸ್ತಿದ್ದಾರೆ. ಇದೇ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸ್ಪರ್ಧೆ ಮಾಡ್ತಾರೆ ಅಂತ ಹೇಳಲಾಗ್ತಿದೆ. ಪರಮೇಶ್ವರ್ ಸ್ಪರ್ಧೆ ಮಾಡಿದ್ರೆ ಓಕೆ. ಒಂದು ವೇಳೆ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ಕೊಡೋದಾದ್ರೆ ನಾವು ಕಾಂಗ್ರೆಸ್‍ನಿಂದ ಬಂಡಾಯ ಏಳ್ಬೇಕಾಗುತ್ತೆ ಅಂತ ಬಸವಲಿಂಗಪ್ಪ ಖರ್ಗೆ ಬಳಿ ಹೇಳಿದ್ದಾರೆ ಅಂತ ಗೊತ್ತಾಗಿದೆ.

ಇನ್ನು ಗಂಗಾವತಿಯಲ್ಲಿ ಹೆಚ್.ಜಿ.ರಾಮುಲು ಪುತ್ರ ಹೆಚ್.ಆರ್.ಶ್ರೀನಾಥ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಜೆಡಿಎಸ್ ಬಂಡಾಯ ಶಾಸಕ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಹಾಗೇ ಹಗರಿಬೊಮ್ಮನಹಳ್ಳಿಯಲ್ಲಿ ಮತ್ತೊಬ್ಬ ತಮ್ಮ ಅಪ್ತನಿಗೆ ಟಿಕೆಟ್ ನೀಡಬೇಕು ಎಂದು ಖರ್ಗೆ ನಿರ್ಧರಿಸಿದ್ದಾರೆ ಅಂತ ಗೊತ್ತಾಗಿದೆ. ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಬಂಡಾಯ ಶಾಸಕರನ್ನ ರಾಹುಲ್‍ಗಾಂಧಿ ಜೊತೆ ಭೇಟಿ ಮಾಡಿಸಿ ಟಿಕೆಟ್ ಕೊಡಿಸೋ ಭರವಸೆ ನೀಡಿದ್ರು.