Connect with us

Districts

ಸುಮಲತಾ ಬೆನ್ನಿಗೆ ನಿಂತ ಕಾಂಗ್ರೆಸ್ಸಿನ ಮೊದಲ ವಿಕೆಟ್ ಪತನ

Published

on

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ನಿಂತ ಕೈ ಕಾರ್ಯಕರ್ತರ ಮೇಲೆ ಕ್ರಮಕ್ಕೆ ಕಾಂಗ್ರೆಸ್ ಮುಂದಾಗಿದ್ದು, ಸುಮಲತಾ ಬೆನ್ನಿಗೆ ನಿಂತ ಕಾಂಗ್ರೆಸ್ಸಿನ ಮೊದಲ ವಿಕೆಟ್ ಪತನವಾಗಿದೆ.

ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಹಿಂಡವಾಳು ಅವರನ್ನು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ ಘೋರ್ಪಡೆ ಅವರು ಆದೇಶ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಚ್ಚಿದಾನಂದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸುತ್ತಿದ್ದರು. ಇದರಿಂದ ಸಚ್ಚಿದಾನಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಪತ್ರದ ಮೂಲಕ ಆದೇಶ ನೀಡಿದ್ದಾರೆ.

ಪತ್ರದಲ್ಲಿ ಏನಿದೆ?
ಮಂಡ್ಯ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀ ಸಚ್ಚಿದಾನಂದ ಹಿಂಡವಾಳು, ಮಂಡ್ಯ ತಾಲೂಕು ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿರುವ ದೂರಗಳು ಬಂದಿರುವ ಹಿನ್ನೆಲೆಯಲ್ಲಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ.