Tuesday, 21st May 2019

Recent News

ಕ್ಷೇತ್ರ ಬದಲಾವಣೆಗೆ ಮುಂದಾದ ರಮ್ಯಾ!

ಬೆಂಗಳೂರು: ಮಾಜಿ ಸಂಸದೆ, ಸ್ಯಾಂಡಲ್ ವುಡ್ ನ ಮೋಹಕ ತಾರೆ, ಮಂಡ್ಯ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸಿದ್ದ ಚಿತ್ರ ನಟಿ ಹಾಗೂ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ 2014 ರ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ರು.

ಈಗ 2019 ರ ಲೋಕಸಭಾ ಚುನಾವಣಾ ಸಿದ್ಧತೆ ಆರಂಭಿಸಿರುವ ರಮ್ಯಾ ಬೆಂಗಳೂರಿನ ಎರಡು ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಎರಡರಲ್ಲಿ ಒಂದು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಉತ್ತರದಲ್ಲಿ ಒಕ್ಕಲಿಗರು ದೊಡ್ಡ ಪ್ರಮಾಣದಲ್ಲಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ಅಲ್ಪ ಸಂಖ್ಯಾತ ಸಮುದಾಯದವರು ನಿರ್ಣಾಯಕ ಪ್ರಮಾಣದಲ್ಲಿವೆ. ಇವೆರಡು ತಮ್ಮ ಗೆಲುವಿಗೆ ಪೂರಕವಾಗಬಹುದು ಎಂಬುದು ರಮ್ಯ ಅವರ ಲೆಕ್ಕಾಚಾರ ಎನ್ನಲಾಗುತ್ತಿದೆ.

ಮಂಡ್ಯದಲ್ಲಿ ಏಳಕ್ಕೆ ಏಳು ವಿಧಾನಸಭಾ ಸ್ಥಾನ ಜೆಡಿಎಸ್ ವಶವಾಗಿದೆ. ಲೋಕಸಭೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆದರೂ ಮಂಡ್ಯ ಲೋಕಸಾಭಾ ಕ್ಷೇತ್ರ ಜೆಡಿಎಸ್ ಗೆ ಸಿಗುವ ಸಾಧ್ಯತೆ ಇದೆ. ಇವೆಲ್ಲವನ್ನು ಮೀರಿ ಕಳೆದ ನಾಲ್ಕು ವರ್ಷದಲ್ಲಿ ರಮ್ಯಾ ಮಂಡ್ಯದ ಕಡೆ ತಲೆ ಹಾಕಿಲ್ಲ. ನೂರಾರು ಸಂಖ್ಯೆಯಲ್ಲಿ ರೈತರ ಆತ್ಮಹತ್ಯೆ ಆದಾಗಲು ಕಷ್ಟ ಕೇಳಿಲ್ಲ. ರಮ್ಯಾರ ವರ್ತನೆಯಿಂದ ಬೇಸತ್ತ ಮಂಡ್ಯ ಜನರ ಮನಸ್ಸಿನಲ್ಲಿ ರಮ್ಯಾ ಮೊದಲಿನಿಂತೆ ಮನೆ ಮಗಳು ಎಂಬ ಪ್ರೀತಿಯನ್ನು ಉಳಿಸಿಕೊಂಡಿಲ್ಲ. ಈ ಎಲ್ಲಾ ವಿಷಯ ಸ್ವತಃ ಮಾಜಿ ಸಂಸದೆ ರಮ್ಯಾ ಅವರಿಗು ಗೊತ್ತು. ಆದ್ದರಿಂದ ಬೆಂಗಳೂರಿನತ್ತ ಮುಖ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಆದರೆ ಅವರ ಆಸೆಯಂತೆ ಬೆಂಗಳೂರಿನ ಲೋಕಸಭಾ ಕ್ಷೇತ್ರದ ಟಿಕೆಟ್ ರಮ್ಯಾಗೆ ಸಿಗುತ್ತಾ? ಸಿಕ್ಕರು ಗೆಲುವು ಸಾಧ್ಯಾನಾ? ಎಲ್ಲವನ್ನು ಕಾಲವೇ ನಿರ್ಧರಿಸಲಿದೆ.

Leave a Reply

Your email address will not be published. Required fields are marked *