Tuesday, 16th July 2019

ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾಂಗ್ರೆಸ್ ಕಾರಣ: ಎಚ್‍ಡಿಡಿ ಅಸಮಾಧಾನ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯವರು ಬೆಳೆಯಲು ಕಾಂಗ್ರೆಸ್‍ವನರೇ ಕಾರಣ. ಇದನ್ನು ನಾನು ಎಳೆ ಎಳೆಯಾಗಿ ಬಿಡಿಸಿ ಹೇಳಬಲ್ಲೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮೈತ್ರಿ ಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್‍ನಿಂದ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್‍ನವರು ನಮ್ಮ ಬಗ್ಗೆ ಅಪಪ್ರಚಾರ ಮಾಡಿದರು. ಆದರೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಇದ್ದಾಗ ದೆಹಲಿಗೆ ಬಂದು ನಿಮ್ಮ ಮಗ ಮುಖ್ಯಮಂತ್ರಿಯಾಗಬೇಕು ಅಂತ ನನ್ನ ಬಳಿ ಕೇಳಿಕೊಂಡರು. ಈ ಸರ್ಕಾರ ನಿಮ್ಮದು. ಕಾಂಗ್ರೆಸ್‍ನವರೇ ಕುಮಾರಸ್ವಾಮಿ ಅವರನ್ನು ಸಿಎಂ ಆಗಬೇಕು ಅಂತ ಕೇಳಿಕೊಂಡರು ಎಂದು ಹೇಳಿದರು.

ದೇಶದ ಐಕ್ಯತೆಗೆ ಮುಸ್ಲಿಮರ ಕೊಡುಗೆ ಅಪಾರ. ನಾನು ಪ್ರಧಾನಿಯಾದ 10 ತಿಂಗಳಿಗೆ ಕಾಶ್ಮೀರಕ್ಕೆ ಹೋಗಿದ್ದೆ. ಈ ವೇಳೆ ಭಾರತದ ಸೇನೆಗೆ ಮುಸ್ಲಿಂ ಸೇರಬಾರದು ಎನ್ನುವ ಆದೇಶವನ್ನು ಕಿತ್ತು ಹಾಕಿದೆ. ನಾನು ಆಕಸ್ಮಿಕವಾಗಿ ಪ್ರಧಾನಿಯಾದೆ ಹಾಗೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಿಲ್ಲ ಅಂತ ಕೆಲವರು ದೂರುತ್ತಾರೆ. ಆದರೆ ಅವರು ನನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ ಎಂದು ಗುಡುಗಿದರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ ಅವರನ್ನು ಕನಕಪುರದಲ್ಲಿ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿದೆ. ನಂತರ ಕನಕಪುರದಲ್ಲಿ ಅಭಿನಂದನಾ ಸಮಾರಂಭ ಮಾಡಿದೆವು. ರಾಮಕೃಷ್ಣ ಹೆಗ್ಡೆ ಅವರ ಆಡಳಿತದ ವೇಳೆ ಓರ್ವ ಮುಸ್ಲಿಂ ಲಾರಿ ಡ್ರೈವರ್ ಅಪಘಾತದಲ್ಲಿ ತೀರಿಕೊಂಡಿದ್ದರು. ಆತನ ಪತ್ನಿ ರಾಮಕೃಷ್ಣ ಹೆಗ್ಡೆ ಅವರ ಬಳಿಗೆ ಬಂದು ಸಹಾಯ ಕೇಳಿದ್ದಳು. ಆಗ ನಾನು ಮಹಿಳೆಗೆ ಮಾಶಾಸನ ಕೊಡಿಸಿದೆ. ಇಂತಹ ಅನೇಕ ಕಾರ್ಯಗಳನ್ನು ನಾನು ಮಾಡಿದ್ದು, ಉದಾಹರಣೆ ಕೊಡಬಲ್ಲೆ ಎಂದರು.

ಸಿಎಂ ಕುಮಾರಸ್ವಾಮಿ ಅಲ್ಪಸಂಖ್ಯಾತರ ಪರ ಇಲ್ಲ ಅಂತ ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ ಎಂದ ಅವರು, ಈ ಹಿಂದೆ ನಾವು ಬಿಜೆಪಿ ಜೊತೆ ಹೋಗಿದ್ವಿ ಅಂತ ಕೆಲವರು ಅಸಮಾಧಾನಗೊಂಡಿದ್ದರು. ಏನೇ ಆದರೂ ನಮ್ಮ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ ಹಾಗೂ ಪಕ್ಷಕ್ಕೆ ಯಾವತ್ತು ಸಮಸ್ಯೆ ಕೊಡುವುದಿಲ್ಲ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್, ಬಿಜೆಪಿ ಮಾತ್ರ ಇವತ್ತು ಈಗಲೂ ಇದೆ. ಆದರೆ ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ಪ್ರಾದೇಶಿಕ ಪಕ್ಷದ ಮುಖ್ಯಮಂತ್ರಿಗಳು ಬಂದಿದ್ದರು. ಎಲ್ಲರನ್ನೂ ಒಟ್ಟಿಗೆ ಕೂಡಿಸುವ ಕೆಲಸವನ್ನು ಡ್ಯಾನಿಶ್ ಅಲಿ ಮಾಡಿದರು. ಅಲ್ಲಿಂದಲೇ ಪ್ರಾದೇಶಿಕ ಪಕ್ಷಗಳು ಒಟ್ಟಿಗೆ ಹೋಗುವ ಸಂದೇಶ ಗೊತ್ತಾಯಿತು. ಬಿಜೆಪಿ, ಆರ್ ಎಸ್‍ಎಸ್ ತತ್ವ ಮೆಟ್ಟಿ ನಿಲ್ಲಲು ಎಲ್ಲಾ ಪ್ರಾದೇಶಿಕ ಪಕ್ಷದ ನಾಯಕರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಂದಿದ್ದರು. ಇದರಿಂದಾಗಿ ದೇಶದಲ್ಲಿ ಕಳೆದ 6-7 ತಿಂಗಳಿಂದ ಬೇರೆ ಬೇರೆ ವಿದ್ಯಮಾನವೇ ನಡೆದಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನಂತರ ಯಾರು ಆ ಸ್ಥಾನದಲ್ಲಿ ಎನ್ನುವುದಕ್ಕೆ ದೇಶದ ಮತದಾರರು ಉತ್ತರ ಕೊಡಬೇಕು. ದೇಶಕ್ಕೆ ಒದಗಿರುವ ಸಂಕಷ್ಟ ಪರಿಹಾರಕ್ಕೆ ಪ್ರತಿಕ್ಷಣವೂ ನಾನು ಯೋಚನೆ ಮಾಡುತ್ತೇನೆ. ನಾನು ಪ್ರಧಾನಿಯಾಗಿದ್ದಾಗ ಶಾಂತಿಯುತ ಚುನಾವಣೆ ನಡೆಸಿದೆ ಎಂದರು.

ತಾಜ್ ಹೊಟೇಲ್ ಮೇಲೆ ಬಾಂಬ್ ಹಾಕಿದ್ದು ನನ್ನ ದೇಶದ ಮುಸ್ಲಿಮರು ಅಲ್ಲ. ನನ್ನ ದೇಶದ ಮುಸ್ಲಿಮರನ್ನ ತಪ್ಪಾಗಿ ತಿಳಿದುಕೊಳ್ಳಬೇಡಿ. ಪಾಕಿಸ್ತಾನದಿಂದ ಸಮುದ್ರ ಮೂಲಕ ಬಂದು ಬಾಂಬ್ ಹಾಕಿ ಹೋದರು. ಇದಕ್ಕೆ ದೇಶದ ಮುಸ್ಲಿಂಮರಿಗೆ ಆರೋಪ ಮಾಡಬೇಡಿ. ನಾನು ಎಲ್ಲಾ ದೇವಸ್ಥಾನ ಹಾಗೂ ಅಜ್ಮೀರಕ್ಕೆ ಹೋಗುತ್ತೇನೆ. 1998ರಲ್ಲಿ ನನ್ನನ್ನ ಸೋಲಿಸಿದರು. ಇತ್ತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬೆಂಬಲ ಕೊಡುತ್ತೇನೆ ಅಂತ ಹೇಳಿದರು. ಆಗ ನಾನು ಅಧಿಕಾರದ ಹಿಂದೆ ಹೋಗಲಿಲ್ಲ. ಇಳಿವಯಸ್ಸಿನಲ್ಲೂ ಕೆಲಸ ಮಾಡುತ್ತಿದ್ದೇನೆ. ದೇಶದ ಆಡಳಿತ, ವಿದ್ಯಮಾನ ನೋಡಿದರೆ ನನಗೆ ನೋವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *