Monday, 19th August 2019

ಫಾರಿನ್‍ಗಾದ್ರೂ ಹೋಗಬಹುದಾಗಿತ್ತು, ಮುಂಬೈಗೆ ಹೋಗಿ ಈಗ ನಮ್ಮ ಪ್ರಾಣ ತಿಂತಾರೆ: ಸ್ಪೀಕರ್ ಅಸಮಾಧಾನ

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲಿನಲ್ಲಿ ವಾಸ್ತವ್ಯ ಹೊಂದಿರುವ ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಶಾಸಕರು ಸದನವನ್ನು ಸೋಮವಾರಕ್ಕೆ ಮುಂದೂಡುವ ಒತ್ತಾಯ ಮಾಡುವ ಸಂದರ್ಭದಲ್ಲಿ ಸ್ಪೀಕರ್ ಮಾತನಾಡಿ, ಹೋದವರು ಹೋದ್ರು ಫಾರಿನ್‍ಗಾದ್ರೂ ಹೋಗಬಹುದಾಗಿತ್ತು. ಮುಂಬೈಗೆ ಹೋಗಿ ನಮ್ಮ ಪ್ರಾಣ ತಿಂತಾರೆ ಎಂದು ಹೇಳಿದರು.

ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಗನ್ ಪಾಯಿಂಟ್‍ನಲ್ಲಿ ಹೇಳಿಕೆ ಪಡೆಯಲಾಗುತ್ತಿದೆ. ಅವರನ್ನು ಅಕ್ರಮ ಬಂಧನದಲ್ಲಿರಿಸಲಾಗಿದೆ ಎಂದು ಮೈತ್ರಿ ನಾಯಕರು ಆರೋಪಿಸಿದರು.

ಈ ಹೇಳಿಕೆಗಳನ್ನು ಸ್ಪೀಕಾರ ಮಾಡಲು ನಿರಾಕರಿಸಿದ ಸ್ಪೀಕರ್ ಅವರು ನನಗೆ ಅವರಿಂದ ಯಾವುದೇ ರೀತಿಯ ಮನವಿ ಬಂದಿಲ್ಲ. ಅಲ್ಲದೇ ಅವರ ಕುಟುಂಬದಿಂದಲೂ ಇದುವರೆಗೂ ಮನವಿ ಬಂದಿಲ್ಲ. ನಿಯಮಗಳ ಅನ್ವಯ ನನಗೆ ದೂರುಬಾರದೇ ಇದ್ದರೆ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂದರು.

ಒಂದು ವೇಳೆ ಶಾಸಕರು ಅಥವಾ ಅವರ ಕುಟುಂಬಸ್ಥರು ದೂರು ನೀಡಿದರೆ ನಾನು ಮುಂದುವರಿಯುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಮಾತನಾಡಿ, ಸುಮಾರು 30 ರಿಂದ 40 ವರ್ಷಗಳ ಕಾಲ ಅವರೊಂದಿಗೆ ಇದ್ದೇವೆ. ಅವರನ್ನು ಚುನಾವಣೆಗೆ ನಿಲ್ಲಿಸಿ ಅವರೊಂದಿಗೆ ಹೋರಾಟ ನಡೆಸಿ ಗೆಲ್ಲಿಸಿಕೊಂಡು ಬಂದಿದ್ದೇವೆ. ಆದರೆ ಇಂದು ಅವರು ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಫೋನ್ ಮಾಡಿ ಬರಲು ಹೇಳಿದ ಕಾರಣಕ್ಕೆ ನಾವು ಮುಂಬೈಗೆ ಭೇಟಿ ನೀಡಿದ್ದೇವು. ಆದರೆ ಅಲ್ಲಿನ ಸರ್ಕಾರ ಒಬ್ಬ ಸಚಿವರಿಗೆ ನೀಡುವ ಯಾವುದೇ ಗೌರವ ನೀಡಲಿಲ್ಲ ಎಂದು ಆರೋಪಿಸಿದರು. ಆದರೆ ಇದ್ಯಾವುದನ್ನು ನಿಯಮಗಳ ಅನ್ವಯ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಹೇಳಿದರು.

Leave a Reply

Your email address will not be published. Required fields are marked *