Connect with us

Bengaluru City

ಉಮೇಶ್ ಜಾಧವ್ ಅನರ್ಹತೆ – ವಿಚಾರಣೆ ಅಂತ್ಯಗೊಳಿಸಿ ತೀರ್ಪು ಕಾಯ್ದರಿಸಿದ ಸ್ಪೀಕರ್

Published

on

– ಮೊದಲ ಬಾರಿಗೆ ಶಾಸಕರಿಗೆ ಮತ ನೀಡಿದ ಮತದಾರರಿಗೆ ಪ್ರಶ್ನಿಸುವ ಅವಕಾಶ

ಬೆಂಗಳೂರು: ಉಮೇಶ್ ಜಾಧವ್ ವಿರುದ್ಧದ ಕಾಂಗ್ರೆಸ್‍ನ ಅನರ್ಹತೆ ಅರ್ಜಿಯ ವಿಚಾರಣೆ ಇಂದು ನಡೆಯಿತು. ಸ್ಪೀಕರ್ ಎದುರು ಉಮೇಶ್ ಜಾಧವ್ ಪರ ಸಂದೀಪ್ ಪಾಟೀಲ್, ಕಾಂಗ್ರೆಸ್ ಪರ ಶಶಿಕಿರಣ್ ವಾದ ಮಂಡಿಸಿದರು. ವಾದ ಆಲಿಸಿದ ಸ್ಪೀಕರ್ ತೀರ್ಪು ಕಾಯ್ದಿರಿಸಿದ್ದಾರೆ.

ಸ್ಪೀಕರ್ ಯಾವುದೇ ತೀರ್ಪು ನೀಡಿದರು ಅದಕ್ಕೆ ತಲೆಬಾಗುತ್ತೇನೆ ಎಂದು ಉಮೇಶ್ ಜಾಧವ್ ಹೇಳಿದ್ದು, ರಾಜೀನಾಮೆ ಅಂಗೀಕಾರ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಜಾಧವ್ ಅವರಿಗೆ ಬಿಜೆಪಿ ಬಿ-ಫಾರಂ ನೀಡಿದೆ. ಇತ್ತ ಚಿಂಚೋಳಿಯಲ್ಲಿ ಉಮೇಶ್ ಜಾದವ್ ವಿರುದ್ಧ ಪರ ವಿರೋಧ ಎದ್ದಿದ್ದು, ಬೈಲಹೊಂಗಲದ ಮಾಜಿ ಶಾಸಕ ಜಗದೀಶ್ ಮೆಟಗುಡ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇತಿಹಾಸದಲ್ಲಿ ಮೊದಲ ಬಾರಿಗೆ ಎಂಬಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕ ಉಮೇಶ್ ಜಾಧವ್ ಅವರಿಗೆ ಮತ ನೀಡಿದ್ದ ಮತದಾರರಿಗೆ ಶಾಸಕರನ್ನು ಪ್ರಶ್ನೆ ಮಾಡಲು ಅವಕಾಶ ನೀಡಿದ್ದರು. ಚಿಂಚೋಳಿ ಮತಕ್ಷೇತ್ರದ ಮತದಾರರ ಶಿವಕುಮಾರ್ ಎಂಬವರು ಮಾತನಾಡಿ, ಉಮೇಶ್ ಜಾದವ್ ಅವರಿಗೆ ಮತ ಹಾಕಿದ್ದೇವೆ. ಮತ ಹಾಕಿ ಗೆಲ್ಲಿಸಿದ ನಮಗೆ ಹೇಳದೆ ಹೇಗೆ ರಾಜೀನಾಮೆ ನೀಡಿದ್ದಿರಿ ಎಂದು ಪ್ರಶ್ನೆ ಮಾಡಿದರು.

ಸವಿತಾ ಸಜ್ಜನ್ ಎಂಬವರು ಮಾತನಾಡಿ, ಚುನಾವಣೆಯಲ್ಲಿ ಗೆದ್ದ ಬಳಿಕ ಜಾದವ್ ಅವರು ಕೈಗೆ ಸಿಗುತ್ತಿಲ್ಲ. ಎಲ್ಲ ಮತದಾರರ ಬಳಿ ಕೇಳಿ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಆದರೆ ಅವರು ಯಾರ ಬಳಿ ಕೇಳದೆ ರಾಜೀನಾಮೆ ನೀಡಿದ್ದಾರೆ. ಅವರು ಹಣದ ಅಮಿಷಕ್ಕೆ ಬಲಿಯಾಗಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಈ ಬಗ್ಗೆ ಮಾಧ್ಯಮ, ಜನ ಹೇಳಿದ್ದಾರೆ ಎಂದರು. ತಕ್ಷಣ ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ಇದಕ್ಕೆ ಏನಾದ್ರೂ ಸಾಕ್ಷಿ ಇದೀಯಾ ಎಂದು ಪ್ರಶ್ನಿಸಿದರು. ಅಲ್ಲದೇ ಮಾಧ್ಯಮದಲ್ಲಿ ಬಂದಿದ್ದು ಎಲ್ಲ ಸರಿ ಅಲ್ಲ ತಿಳಿಸಿದ್ರು.

ಬಳಿಕ ಮಾತನಾಡಿದ ಶಾಸಕ ಜಾಧವ್ ಅವರು, ನನಗೆ ಮತ ಹಾಕಿ ಗೆಲ್ಲಿಸಿ ಇಲ್ಲಿಗೆ ಬಂದ ನಿಮಗೆಲ್ಲರಿಗೂ ಧನ್ಯವಾದ. ಕಳೆದ 6-8 ತಿಂಗಳಲ್ಲಿ ಏನೆಲ್ಲ ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದನ್ನು ನಾನು ಈಗ ಹೇಳಲ್ಲ. ಸ್ಪೀಕರ್ ನೀವು ಏನು ತೀರ್ಮಾನ ತೆಗೆದುಕೊಂಡರು ನಾನು ಅದಕ್ಕೆ ಬದ್ಧನಾಗಿರುತ್ತೇನೆ ಎಂದರು.

ವಾದ ಪ್ರತಿವಾದ ಬಳಿಕ ಮಾತನಾಡಿದ ಸ್ಪೀಕರ್, ಸದ್ಯದ ತಿಳುವಳಿಕೆಯಲ್ಲಿ ಈ ಪ್ರಕರಣದ ಬಗ್ಗೆ ತೀರ್ಪು ನೀಡಲು ನನಗೆ ಇನ್ನು ಕಾಲಾವಕಾಶ ಬೇಕಿದೆ. ತಜ್ಞರ ಜತೆ ಚರ್ಚೆ ಮಾಡಬೇಕಿದೆ. ಅದ್ದರಿಂದ ಜಾಧವ್ ಸದಸ್ಯತ್ವ ಅನರ್ಹ ಪ್ರಕರಣವನ್ನು ಮುಂದೂಡುತ್ತೇನೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ನೀಡಿರುವ ಪ್ರಕರಣ ಮುಂದೂಡಿಕೆ ಮಾಡಲಾಗಿದೆ. ನಮ್ಮ ಮುಂದೇ ಹೈಕೋರ್ಟ್ ವಿಭಾಗಿಯ ಪೀಠದ ತೀರ್ಪು ಇದ್ದು, ಎಲ್ಲಾ ನೋಡಿ ತೀರ್ಮಾನ ಮಾಡುತ್ತೇನೆ. ಯಾವಾಗ ಅಂಗೀಕಾರ ಆಗುತ್ತೆ ಎಂಬುದಕ್ಕೆ ಟೈಮ್ ಬಾಂಡ್ ಹೇಳಲು ಆಗಲ್ಲ. ಸಂವಿಧಾನದ 10 ನೇ ಪರಿಚ್ಛೇದದ ಅನ್ವಯ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿರುವ ಅನರ್ಹತೆ ಕುರಿತ ನಿಯಮಗಳು ನೂನ್ಯತೆಯಿಂದ ಕೂಡಿದೆ. ಅದರ ಬದಲಾವಣೆ ಆಗುವ ಅಗತ್ಯವಿದೆ. ನಾನು ಈಗ ಅನರ್ಹತೆಗೊಳಿಸಿದರೂ ಚಿಂಚೋಳಿಯಿಂದ ಉಮೇಶ್ ಜಾಧವ್ ಮತ್ತೆ ಸ್ಪರ್ಧೆ ಮಾಡುವ ಅವಕಾಶ ಕಾನೂನಿನಲ್ಲಿದೆ. ಈ ಹಿನ್ನೆಲೆಯಲ್ಲಿ ಕಾಯಿದೆಯ ಬದಲಾವಣೆಯ ಅಗತ್ಯವಿದೆ ಎಂಬುವುದರ ಪರ ನಾನೀದ್ದೇನೆ ಎಂದರು.