Sunday, 25th August 2019

Recent News

ಬಾಟ್ಲಿ ಪೆಟ್ಟು ತಿಂದು ಅಪೋಲೋ ಆಸ್ಪತ್ರೆ ಸೇರಿದ ಆನಂದ್ ಸಿಂಗ್?

ಬೆಂಗಳೂರು: ಆಪರೇಷನ್ ಕಮಲದಿಂದ ಪಕ್ಷದ ಶಾಸಕರನ್ನು ರಕ್ಷಿಸಲು ಮುಂದಾಗಿ ರೆಸಾರ್ಟ್ ಸೇರಿದ್ದ ಕಾಂಗ್ರೆಸ್ ಶಾಸಕರ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದ್ದು, ಪೆಟ್ಟು ತಿಂದ ಶಾಸಕ ಆನಂದ್ ಸಿಂಗ್ ಅವರನ್ನು ನಗರದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆನಂದ್ ಸಿಂಗ್ ಬೆಂಬಲಿಗ ರಘುನಾಥ್, ಸಾಹೇಬ್ರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ನನಗೆ ಲಭ್ಯವಾಯಿತು. ಆದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆದರೆ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ. ಆನಂದ್ ಸಿಂಗ್ ಅವರು ಯಾರನ್ನು ಭೇಟಿ ಮಾಡಲ್ಲ ಎಂದು ಹೇಳಿದ್ದಾರೆ. ಸದ್ಯ ಅವರೊಂದಿಗೆ ಕೆಲ ಸ್ನೇಹಿತರು ಮಾತ್ರ ಅವರೊಂದಿಗೆ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಪೋಲೋ ಆಸ್ಪತ್ರೆಯ 6ನೇ ಮಹಡಿಯ 6002 ಕೊಠಡಿಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಬೆಳಗ್ಗೆ 7.05 ಗಂಟೆ ಸಮಯದಲ್ಲಿ ಆಸ್ಪತ್ರೆಗೆ ಆಗಮಿಸಿ ಒಳರೋಗಿಯಾಗಿ ದಾಖಲಾಗಿರುವುದು ಆಸ್ಪತ್ರೆಯ ದಾಖಲಾತಿಯಲ್ಲಿ ಇದೆ ಎಂಬ ಮಾಹಿತಿ ಲಭಿಸಿದೆ. ಡಾ. ಚಂದ್ರ ಅವರು ಶಾಸಕ ಆನಂದ್ ಸಿಂಗ್ ಅವರಿಗೆ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ. ದಾಖಲಾತಿಯಲ್ಲಿ ಆನಂದ್ ಸಿಂಗ್ ಅವರ ತಲೆಗೆ ಗಾಯವಾಗಿರುವುದನ್ನು ಚಿಕಿತ್ಸೆ ನೀಡಿ ನಮೂದಿಸಿದ್ದಾರೆ. ಈಗಾಗಲೇ ಅಪೋಲೋ ಆಸ್ಪತ್ರೆಗೆ ಶೇಷಾದ್ರಿಪುರಂ ಪೊಲೀಸರು ಕೂಡ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ ಎಂಬುವುದು ಖಚಿತವಾಗಿದೆ.

ಇತ್ತ ಸಚಿವ ಡಿಕೆ ಶಿವಕುಮಾರ್ ಅವರು ಶಾಸಕರ ನಡುವೆ ಬಾಟ್ಲಿ ಜಗಳ ನಡೆದಿದೆ ಎಂಬುವುದನ್ನು ನಿರಾಕರಿಸಿದ್ದಾರೆ. ಅವೆಲ್ಲವೂ ಸುಳ್ಳು. ಮಾರಾಮಾರಿನೂ ಇಲ್ಲ, ಬಾಟ್ಲಿಯೂ ಇಲ್ಲ. ಯಾವ ಹೊಡೆದಾಟನೂ ಇಲ್ಲ. ಸ್ವಲ್ಪ ಹೊತ್ತಲ್ಲೇ ಅವರಿಬ್ಬರು ಬಂದು ಮಾತಾಡ್ತಾರೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಸಚಿವ ಡಿಕೆಶಿ ಅವರ ಸಹೋದರ ಸಂಸದ ಡಿಕೆ ಸುರೇಶ್ ಸೇರಿದಂತೆ ಹಲವು ಬೆಂಬಲಿಗರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಏನಿದು ಘಟನೆ: ಕಾಂಗ್ರೆಸ್ ರಾಜ್ಯ ಉಸ್ತುವಾರಿಯಾದ ವೇಣುಗೋಪಾಲ್ ಅವರೊಂದಿಗೆ ಇಂದು ಸಭೆ ನಿಗದಿ ಆದ ಕಾರಣ ಶಾಸಕರು ರೆಸಾರ್ಟ್ ನಲ್ಲಿಯೇ ಉಳಿದ್ದಿದ್ದರು. ಕಾಂಗ್ರೆಸ್ ಶಾಸಕರ ಸಭೆ ನಡೆಸಿ ಗೈರಾದ ಶಾಸಕರಿಗೆ ನೋಟಿಸ್ ಕೂಡ ನೀಡಿದ್ದರು. ಬಳಿಕ ಶನಿವಾರ ರಾತ್ರಿ ಎಲ್ಲಾ ಶಾಸಕರಿಗೆ ಪಾರ್ಟಿ ಏರ್ಪಡಿಸಲಾಗಿತ್ತು. ಈ ವೇಳೆ ಬೆಳಗಿನ ಜಾವ 3 ಗಂಟೆಗೆ ಶಾಸಕರ ಪಾರ್ಟಿ ವೇಳೆ ನಡೆದ ಮಾತಿಗೆ ಮಾತು ಬೆಳೆದು ಕಂಪ್ಲಿ ಶಾಸಕ ಗಣೇಶ್ ಅವರು ಆನಂದ್ ಸಿಂಗ್ ತಲೆಗೆ ಬಾಟಲಿನಿಂದ ಏಟು ನೀಡಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *