Connect with us

Bengaluru City

ಸಿಎಂ ಭೇಟಿಯಾದ ಅಖಂಡ ಶ್ರೀನಿವಾಸ್- ಗಲಭೆ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹ

Published

on

– ಭದ್ರತೆ ಹೆಚ್ಚಳಕ್ಕೂ ಸಿಎಂ ಬಳಿ ಮನವಿ
– ಕಾಂಗ್ರೆಸ್ ಬಿಡೋ ಮಾತೇ ಇಲ್ಲ

ಬೆಂಗಳೂರು: ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಭೇಟಿ ಮಾಡಿದ್ದಾರೆ.

ಘಟನೆಯ ಬಳಿಕ ಮೊದಲ ಬಾರಿಗೆ ಶಾಸಕ ಅರವಿಂದ ಲಿಂಬಾವಳಿ ಜೊತೆ ಬಂದು ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾದ ಅಖಂಡ, ಗಲಭೆ ಕುರಿತು ಬಿಎಸ್‍ವೈ ಜೊತೆ ಚರ್ಚೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಸಿಎಂ ಬಿಎಸ್‍ವೈಗೆ ಅಖಂಡ ವಿವರಣೆ ನೀಡಿದ್ದಾರೆ.

ಈ ಗಲಭೆ ಪ್ರಮುಖ ಕಾರಣ ಯಾರು, ಗಲಭೆ ನಡೆದ ದಿನದಿಂದ ಇಲ್ಲಿವರೆಗೂ ಆಗಿರುವ ಬೆಳವಣಿಗೆ, ಪ್ರಕರಣದ ಕುರಿತು ತನಿಖೆ ಬಗ್ಗೆ ಚರ್ಚೆ ಮಾಡಿದ್ದಾರೆ. ಎಸ್‍ಡಿಪಿಐ ಸಂಘಟನೆಯ ಕೈವಾಡ ಹಾಗೂ ಸ್ಥಳೀಯ ನಾಯಕರ ಆಂತರಿಕ ಭಿನ್ನಾಭಿಪ್ರಾಯ ಸೇರಿದಂತೆ ಹಲವು ವಿಷಯಗಳ ಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬುದರ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ, ಭದ್ರತೆ ಹೆಚ್ಚಳಕ್ಕೆ ಮನವಿ ಮಾಡಿದ್ದೇನೆ. ಸಿಬಿಐ ತನಿಖೆ ಮಾಡಿಸುವಂತೆ ಕೇಳಿಕೊಂಡಿದ್ದೇನೆ. ತನಿಖೆ ಬಳಿಕ ಪರಿಶೀಲಿಸಿ ನೋಡೋದಾಗಿ ಸಿಎಂ ಹೇಳಿದ್ದಾರೆ. ಯಾರೇ ಇದ್ರೂ ತಪ್ಪಿತಸ್ಥರನ್ನು ಬಂಧಿಸಲು ಮನವಿ ಮಾಡಿದ್ದೇನೆ ಎಂದರು.

ನನಗೆ ಸರ್ಕಾರ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ. ನನ್ನ ಮನೆಗೆ ಭದ್ರತೆ ಕೊಟ್ಟಿದ್ದಾರೆ. ಭದ್ರತೆ ವಿಚಾರದಲ್ಲಿ ಸರ್ಕಾರ ಸ್ಪಂದಿಸಿಲ್ಲ ಎಂದು ಇದೇ ವೇಳೆ ಅಖಂಡ ಆರೋಪ ಮಾಡಿದರು. ಮೊನ್ನೆ ಸಿಎಂ ಜೊತೆ ಫೋನಲ್ಲಿ ಮಾತಾಡಿದ್ದೆ. ನಮ್ಮನೆ ಅಕ್ಕ-ಪಕ್ಕ ಮನೆ, ವಾಹನಗಳನ್ನು ಸುಟ್ಟಿದ್ದಾರೆ. ಇವರಿಗೆಲ್ಲ ಪರಿಹಾರ ಕೊಡಲು ಸಿಎಂಗೆ ಮನವಿ ಮಾಡಿಕೊಂಡಿದ್ದೇನೆ. ಅಪರಾಧಿಗಳು ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿದ್ರೂ ಶಿಕ್ಷೆ ಆಗಲೇಬೇಕು ಎಂದು ಕಟುವಾಗಿ ಹೇಳಿದರು.

ಇದೇ ವೇಳೆ ಮಾಜಿ ಶಾಸಕ ಪ್ರಸನ್ನಕುಮಾರ್ ಮತ್ತೆ ಕಾಂಗ್ರೆಸ್ ಸೇರೋ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅಖಂಡ,ಪ್ರಸನ್ನಕುಮಾರ್ ಕಾಂಗ್ರೆಸ್ ಸೇರೋ ವಿಷಯ ನನಗೆ ಗೊತ್ತೇ ಇಲ್ಲ. ನನ್ನ ಗಮನಕ್ಕೂ ಬಂದಿಲ್ಲ. ಪ್ರಸನ್ನಕುಮಾರ್ ಸೇರ್ಪಡೆಯಿಂದ ನನಗೆ ತೊಂದರೆ ಇಲ್ಲ. ಕಾಂಗ್ರೆಸ್ಸಿಗೆ ಯಾರು ಬೇಕಾದರೂ ಬರಬಹುದು. ಪ್ರಸನ್ನಕುಮಾರ್ ಕಾಂಗ್ರೆಸ್ ಸೇರೋ ವಿಷಯ ಅಧ್ಯಕ್ಷರಿಗೆ ಬಿಟ್ಟಿದು ಎಂದು ತಿಳಿಸಿದರು.

ಆದರೆ ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ಸೇರಲು ಬಯಸಿರುವ ವಿಷಯ ಅಖಂಡ ಶ್ರೀನಿವಾಸ್ ಗಮನಕ್ಕೆ ತಂದಿರೋದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಈ ಹಿಂದೆ ತಿಳಿಸಿದ್ದರು. ಪ್ರಸನ್ನಕುಮಾರ್ ಸೇರ್ಪಡೆಗೆ ಅಖಂಡ ವಿರೋಧ ಇಲ್ಲ ಅಂದಿದ್ದರು. ಆದರೆ ಈಗ ಪ್ರಸನ್ನಕುಮಾರ್ ಮತ್ತೆ ಬರೋ ವಿಷಯ ನನಗೆ ಗೊತ್ತಿಲ್ಲ ಎಂದು ಅಖಂಡ ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಡಿಕೆಶಿ ಸುಳ್ಳು ಹೇಳಿದ್ರಾ?, ಸುಳ್ಳೇ ಹೇಳಿದ್ರೂ ಯಾಕೆ ಹೇಳಿದ್ರು ಎಂಬ ಪ್ರಶ್ನೆ ಮೂಡಿದೆ.

ನಾನು ಕಾಂಗ್ರೆಸ್ ಬಿಡಲ್ಲ. ನಮ್ಮ ತಂದೆಯೂ ಕಾಂಗ್ರೆಸ್ಸಿನಲ್ಲೇ ಇದ್ದಿದ್ದು. ಹೀಗಾಗಿ ನಾನು ಕಾಂಗ್ರೆಸ್ ಪಕ್ಷ ಬಿಡೋ ಮಾತೇ ಇಲ್ಲ. ನನ್ನ ರಕ್ತದಲ್ಲಿ ಇರೋದು ಕಾಂಗ್ರೆಸ್. ನನ್ನ ರಕ್ಷಣೆಗೆ ಸರ್ಕಾರ ಸೇರಿದಂತೆ ನಮ್ಮ ಪಕ್ಷದ ನಾಯಕರು ಬರಬೇಕು. ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಸೇರಿದಂತೆ ಡಿಕೆ ಶಿವಕುಮಾರ್ ನನ್ನ ರಕ್ಷಣೆಗೆ ಬರಬೇಕು. ನನ್ನ ಮೇಲೆ ಯಾರಿಂದಲೂ ಒತ್ತಡ ಇಲ್ಲ, ಯಾವ ಒತ್ತಡವೂ ಇಲ್ಲ ಎಂದರು.

ಬಿಜೆಪಿ ಶಾಸಕರ ಜೊತೆ ಸಿಎಂ ಭೇಟಿಗೆ ಬಂದ ವಿಚಾರದ ಕುರಿತು ಸ್ಪಷ್ಟನೆ ನೀಡಿದ ಅವರು, ನಮ್ಮ ಭೋವಿ ಸಮಾಜದ ಮುಖಂಡರ ಜೊತೆ ನಾನು ಸಿಎಂ ಭೇಟಿಗೆ ಆಗಮಿಸಿದೆ. ನಮ್ಮ ಸಮಾಜದ ಮುಖಂಡರು ಇದ್ದರು. ಅರವಿಂದ ಲಿಂಬಾವಳಿ ಭೋವಿ ಜನಾಂಗದ ಶಾಸಕರು. ನಮ್ಮ ಜನಾಂಗದ ಶಾಸಕರ ಜೊತೆ ನಾನು ಬಂದಿದ್ದೇನೆ. ಭೋವಿ ಜನಾಂಗದ ಅಧ್ಯಕ್ಷ ಮಾಕಳಿ ರವಿಯವರು ಬಂದಿದ್ದಾರೆ. ಅವರ ಜೊತೆಯಲ್ಲಿ ನಾನು ಬಂದು ಸಿಎಂ ಭೇಟಿ ಮಾಡಿದ್ದೇನೆ ಅಷ್ಟೇ ಎಂದರು.

Click to comment

Leave a Reply

Your email address will not be published. Required fields are marked *