Tuesday, 20th August 2019

15 ಲಕ್ಷ ರೂ. ಕೊಟ್ರೆ ಬಿಜೆಪಿಗೆ ಮತ ಹಾಕಿ, ಇಲ್ಲಾಂದ್ರೆ ಕಾಂಗ್ರೆಸ್‍ಗೆ ಹಾಕಿ: ಅಜಯ್ ಸಿಂಗ್

ಕಲಬುರಗಿ: ಬಿಜೆಪಿಯವರು ದುಡ್ಡು, ಹೆಂಡ ನೀಡಿ ಮತ ಕೇಳುತ್ತಾರೆ. ಅವರು ಹದಿನೈದು ಲಕ್ಷ ರೂ. ಕೊಟ್ಟರೆ ಮಾತ್ರ ಬಿಜೆಪಿಗೆ ಮತ ಹಾಕಿ. ಇಲ್ಲ ಅಂದರೆ ಕಾಂಗ್ರೆಸ್‍ಗೆ ಹಾಕಿ ಎಂದು ಶಾಸಕ ಅಜಯ್ ಸಿಂಗ್ ಹೇಳಿದ್ದಾರೆ.

ಚಿಂಚೋಳಿಯಲ್ಲಿ ನಡೆದ ಬಂಜಾರ ಸಮಾವೇಶದಲ್ಲಿ ಮಾತನಾಡಿದ ಶಾಸಕರು, ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಲಂಬಾಣಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿದರು. ನಮ್ಮ ತಂದೆ ಧರಂಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನೀವು. ಇಲ್ಲಿನ ಜನರು ಹಾಗೂ ಕಾಂಗ್ರೆಸ್ ನಡುವೆ ಉತ್ತಮ ಸಂಬಂಧವಿದೆ. ಈ ಬಾರಿ ಕಾಂಗ್ರೆಸ್‍ಗೆ ಗೆಲುವು ತಂದುಕೊಡಬೇಕು ಎಂದು ಮತದಾರರಲ್ಲಿ ಕೇಳಿಕೊಂಡರು.

ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಅವಶ್ಯಕತೆ ಇತ್ತೇ? ಉಮೇಶ್ ಜಾಧವ್ ಅವರಿಂದ ಉಪ ಚುನಾವಣೆ ನಡೆಯುವಂತಾಯಿತು. ಈಗಾಗಲೇ ಬಿಜೆಪಿಯವರು ಶೇ.70ರಷ್ಟು ಹತಾಶರಾಗಿದ್ದಾರೆ. ರೋಡ್ ಶೋ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಕಾರ್ಯಕರ್ತರನ್ನು ನೋಡಿ ಅರ್ಧಕ್ಕೆ ಹೋದರು ಎಂದು ವ್ಯಂಗ್ಯವಾಡಿದರು.

2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ, ಮೋದಿ ಅಂತ ದೇಶದ ಜನರು ಕೂಗಿದ್ದರು. ಆದರೆ ಈಗ ಹಾಗಿಲ್ಲ, ಕಾಲ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಕಾಂಗ್ರೆಸ್ ಬಾವುಟ ದೇಶದಲ್ಲಿ ಹಾರಲಿದೆ. ಅದರಂತೆ ಚಿಂಚೋಳಿ ವಿಧಾನಸಭಾ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲ್ಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *