Saturday, 18th January 2020

Recent News

ಜನರ ಸಿಂಪಥಿಯನ್ನು ಕಳೆದುಕೊಂಡು ಕಾಂಗ್ರೆಸ್ ಈ ಮಟ್ಟಕ್ಕೆ ಇಳಿದಿದೆ: ಸಂಸದೆ ಶೋಭಾ

ಚಿಕ್ಕಮಗಳೂರು: ಕಾಂಗ್ರೆಸ್ ಜನರ ಸಿಂಪಥಿಯನ್ನು ಕಳೆದುಕೊಂಡು ಈ ಮಟ್ಟಕ್ಕೆ ಇಳಿದಿದೆ. ಇಂತದ್ದನ್ನು ಮಾಡಿ-ಮಾಡಿಯೇ ಅವರು ಜನರ ಸಿಂಪಥಿಯನ್ನು ಕಳೆದುಕೊಂಡಿರೋದು. ಇಂದು ಕಾಂಗ್ರೆಸ್ಸಿನ ನಾಯಕರ ಮೇಲೆ ಜನರಿಗೆ ಸಿಂಪಥಿ ಇಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಕಾನೂನಿನಂತೆ ಬಂಧನ ಆಗಿರಬಹುದು. ನಿರಂತರವಾದ ಅಧ್ಯಯನ ಹಾಗೂ ತನಿಖೆಯನ್ನು ಸಂಸ್ಥೆಗಳು ಮಾಡಿವೆ. ಅದರ ಆಧಾರದಲ್ಲಿ ಅವರ ಬಂಧನವಾಗಿರಬಹುದು. ದೇಶದ 70 ವರ್ಷದ ಇತಿಹಾಸದಲ್ಲಿ ಇಂತಹ ಹಲವು ಬಂಧನಗಳಾಗಿವೆ. ತನಿಖೆಗಳು ಆಗಿವೆ. ಇಡಿ ಅಥವಾ ಸಿಬಿಐ ಯಾವುದು ಕೂಡ ನಾವು ಹುಟ್ಟು ಹಾಕಿದ್ದಲ್ಲ. ಇವೆಲ್ಲಾ ಹುಟ್ಟು ಹಾಕೋಕೆ ಅವರೇ ಕಾರಣ ಎಂದರು.

ಇಂದು ಕಾಂಗ್ರೆಸ್ ಮಾಡುತ್ತಿರುವ ಹೋರಾಟ ಯಾರ ಪರ ಎಂದು ಅರ್ಥ ಆಗುತ್ತಿಲ್ಲ. ಯಾರ ಪರ ನಿಂತಿದ್ದಾರೆ? ಯಾಕಾಗಿ ನಿಲುತ್ತಾರೆ? ಈ ಹಿಂದೆ ಅವರು ಮಾಡಿದ ಎಲ್ಲಾ ಬಂಧನ ರಾಜಕೀಯ ಪ್ರೇರಿತನಾ? ರಾಜಕೀಯ ಪ್ರೇರಿತವಾಗಿಯೇ ಯುಪಿಎ ಕಾಲದಲ್ಲಿ ಬಂಧನವಾಗಿದೇಯಾ? ಇದಕ್ಕೆಲ್ಲಾ ಕಾಂಗ್ರೆಸ್ ಉತ್ತರ ಕೊಡುವ ಜಾಗದಲ್ಲಿದೆ. ಯಾರು ಪ್ರಶ್ನೆ ಕೇಳುತ್ತಿದ್ದಾರೆ, ಅವರೇ ಉತ್ತರ ಹೇಳಬೇಕು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಡಿಕೆಶಿ ಸಾಮಾನ್ಯ ವ್ಯಕ್ತಿಯಲ್ಲ. ಪ್ರಭಾವಿ ಮುಖಂಡ. ಸುಮ್ಮನೆ ಅವರ ಬಂಧನವಾಗಲ್ಲ. ದೊಡ್ಡ ವ್ಯಕ್ತಿ, ಮಂತ್ರಿಯಾದವರ ಬಂಧನವಾಗುತ್ತೆ ಎಂದು ಅದರ ಹಿಂದೆ ಬಲವಾದ ಸಾಕ್ಷಿ ಇರುತ್ತೆ. 70 ವರ್ಷದಲ್ಲಿ ಈ ದೇಶವನ್ನು ಹೇಗೆ ಲೂಟಿ ಮಾಡಿದರು, ಯುಪಿಯ ಅವಧಿಯಲ್ಲಿ ಯಾವ-ಯಾವ ಇಲಾಖೆಯಲ್ಲಿ ಎಷ್ಟು ಲೂಟಿ ಮಾಡಿದರು, ಅದೆಲ್ಲದರ ಸಾಕ್ಷಿಗಳು ಇಂದು ನಮ್ಮ ಕಣ್ಣ ಮುಂದಿದೆ. ಹಲವರಿಗೆ ಶಿಕ್ಷೆಯಾಗಿದೆ. ಮತ್ತೆ ಹಲವರಿಗೆ ಶಿಕ್ಷೆಯಾಗುವ ಹಂತದಲ್ಲಿದೆ. ಕಾಂಗ್ರೆಸ್ ಯಾರನ್ನಾದರೂ ಸಮರ್ಥನೆ ಮಾಡಿಕೊಳ್ಳುತ್ತೆ ಅಥವಾ ಅವರನ್ನವರು ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದರೆ ಇದು ವ್ಯವಸ್ಥೆ ಅಣಕ ಎಂದು ಶೋಭಾ ಹೇಳಿದರು.

Leave a Reply

Your email address will not be published. Required fields are marked *