Connect with us

Bengaluru City

ಕೋವಿಡ್ ಸಂತ್ರಸ್ತರ ಸಂಕಟದ ಸಮಯದಲ್ಲಿ ನೆರವಿಗೆ ಧಾವಿಸದ ಕಾಂಗ್ರೆಸ್ಸಿನಿಂದ ಮೊಸಳೆ ಕಣ್ಣೀರು: ಗಣೇಶ್ ಕಾರ್ಣಿಕ್

Published

on

Share this

ಬೆಂಗಳೂರು: ತಾವು ಆಯ್ಕೆಯಾದ ಕ್ಷೇತ್ರದ ಜನರ ಸಹಾಯಕ್ಕೆ ಕೋವಿಡ್ ಸಂಕಟದ ಸಂದರ್ಭದಲ್ಲಿ ಧಾವಿಸದ ಕಾಂಗ್ರೆಸ್ಸಿನ ಮಹಾನ್ ನಾಯಕರುಗಳು ಈಗ ಡೆತ್ ಆಡಿಟ್‍ನ ಕುರಿತಾಗಿ ಮಾತನಾಡುತ್ತ ರಾಜ್ಯಾದ್ಯಂತ ಪ್ರವಾಸ ಮಾಡುವ ಹೇಳಿಕೆ ನೀಡಿರುವುದು ರಾಜಕೀಯ ಸೋಗಲಾಡಿತನಕ್ಕೆ ಒಂದು ಸ್ಪಷ್ಟ ನಿದರ್ಶನವಾಗಿದೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಟೀಕಿಸಿದ್ದಾರೆ.

ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಸಂತ್ರಸ್ತ ಜನರ ನೆರವಿಗೆ ಧಾವಿಸದ ಕಾಂಗ್ರೆಸ್ ಕೇವಲ ಟ್ವಿಟರ್ ಅಭಿಯಾನದ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಟೀಕಿಸುವುದಕ್ಕಷ್ಟೇ ಸೀಮಿತವಾಗಿದ್ದುದು ಅವರ ರಾಜಕೀಯ ಬೇಜವಾಬ್ದಾರಿತನಕ್ಕೆ ಉದಾಹರಣೆಯಾಗಿದೆ. ತಾವು ಆಯ್ಕೆಗೊಂಡ ಕ್ಷೇತ್ರಗಳನ್ನೂ ಭೇಟಿ ಮಾಡದಿರುವ ಅವರ ಹೊಣೆಗೇಡಿತನದಿಂದ ಜನರು ಬೇಸತ್ತಿದ್ದು, ಈಗ ರಾಜಕೀಯ ಕಾರಣಕ್ಕಾಗಿ ಅವರ ರಾಜ್ಯ ಪ್ರವಾಸದ ಚಿಂತನೆ ಮೊಸಳೆ ಕಣ್ಣೀರಿಟ್ಟಂತಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್‍ಗೆ ಸಂಬಂಧಪಟ್ಟಂತೆ ಪ್ರತಿಯೊಂದು ಪ್ರಕರಣವೂ ಆಧಾರ್ ಸಂಖ್ಯೆಯೊಂದಿಗೆ ದಾಖಲಿಸಲ್ಪಟ್ಟಿದ್ದು, ಪ್ರತಿಯೊಂದು ಕೋವಿಡ್ ಸಾವು ಸರಕಾರಿ ಅಂಕಿ ಅಂಶಗಳಲ್ಲಿ ಲಭ್ಯವಿರುವ ಸಾಮಾನ್ಯ ಸಂಗತಿಯು ಕೂಡ ಕಾಂಗ್ರೆಸ್ ಮಹಾ ನಾಯಕರಿಗೆ ಅರ್ಥವಾಗದಿರುವುದು ದೊಡ್ಡ ದುರಂತ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೋವಿಡ್ ಸಂತ್ರಸ್ತರ ಮತ್ತು ಕೋವಿಡ್‍ನಿಂದ ಮೃತಪಟ್ಟವರ ವಿವರಗಳನ್ನು ಅತ್ಯಂತ ವ್ಯವಸ್ಥಿತವಾಗಿ ಪತ್ತೆ ಹಚ್ಚಿ ದಾಖಲಿಸಲಾಗುತ್ತಿದ್ದು, ಈ ಎಲ್ಲಾ ಅಂಕಿಅಂಶಗಳು ಅಂತರ್ಜಾಲದಲ್ಲಿ ಲಭ್ಯವಿರುತ್ತವೆ ಎಂದರು. ಇದನ್ನೂ ಓದಿ: ಜಮ್ಮು ವಾಯು ನೆಲೆ ಮೇಲೆ ಡ್ರೋನ್ ದಾಳಿ – 2 ಸ್ಫೋಟ, ಇಬ್ಬರಿಗೆ ಗಾಯ

ಕೇಂದ್ರ ಸರ್ಕಾರ ಕೋವಿಡ್‍ನಿಂದ ನಿಂದ ಹೆತ್ತವರನ್ನು ಕಳೆದುಕೊಂಡ ಅನಾಥ ಮಕ್ಕಳಿಗಾಗಿ ನೀಡಿರುವ ವಿಶೇಷ ಯೋಜನೆ ಹಾಗೂ ಕರ್ನಾಟಕದಲ್ಲಿ ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿ ಕೋವಿಡ್‍ನಿಂದಾಗಿ ಮೃತಪಟ್ಟಲ್ಲಿ ಆ ಕುಟುಂಬದ ರಕ್ಷಣೆಗಾಗಿ ನೀಡಿರುವ ವಿಶೇಷ ಆರ್ಥಿಕ ಸಹಾಯದಿಂದ ವಿಚಲಿತರಾಗಿರುವ ಕಾಂಗ್ರೆಸ್ ಮುಖಂಡರು ಡೆತ್ ಆಡಿಟ್ ಎನ್ನುವ ಪ್ರಹಸನದೊಂದಿಗೆ ರಾಜ್ಯ ಪ್ರವಾಸ ಮಾಡಲು ಹೊರಟಿರುವುದು ಊರು ಸೂರೆಗೊಂಡ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಆಗಿದೆ ಎಂದು ವ್ಯಂಗ್ಯವಾಡಿದರು.

ಕೋವಿಡ್ ಮಹಾಮಾರಿಯ ಎರಡನೇ ಅಲೆಯ ಪ್ರಾರಂಭದ ದಿನಗಳಲ್ಲಿ ಲಸಿಕೆ ಮತ್ತು ಲಸಿಕಾ ಅಭಿಯಾನದ ಬಗ್ಗೆ ಹಾಗೂ ಯುದ್ಧೋಪಾದಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೆಲಸ ಮಾಡಿವೆ. ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಜನಮಾನಸದಲ್ಲಿ ಸಂದೇಹ ಮೂಡಿಸಿ ಕೋವಿಡ್ ನಿಯಂತ್ರಣದ ಚಟುವಟಿಕೆಗಳಿಗೆ ತೊಂದರೆ ಉಂಟು ಮಾಡಿರುವ ಕಾಂಗ್ರೆಸ್ಸಿನ ಕ್ಷುಲ್ಲಕ ಪ್ರವೃತ್ತಿಯನ್ನು ನಾಡಿನ ಜನತೆ ಗಂಭೀರವಾಗಿ ಪರಿಗಣಿಸಿದ್ದು ಒಂದು ರಾಜಕೀಯ ಪಕ್ಷದ ಈ ರೀತಿಯ ಬೇಜವಾಬ್ದಾರಿ ವರ್ತನೆಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು.

 

ಸರಕಾರ ನೀಡುವ ಸಂಸದರ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಲಸಿಕಾ ಅಭಿಯಾನಕ್ಕೆ ನೀಡುವ ಕಾಂಗ್ರೆಸ್ಸಿನ ಪೊಳ್ಳು ಘೋಷಣೆ ಈಗಾಗಲೇ ಅವರ ಡೋಂಗಿತನವನ್ನು ಬಯಲುಗೊಳಿಸಿದೆ. ಇದಕ್ಕೆ ವಿರುದ್ಧವಾಗಿ ಭಾರತೀಯ ಜನತಾ ಪಾರ್ಟಿಯ ಲಕ್ಷಾಂತರ ಕಾರ್ಯಕರ್ತರ ಸೇವಾ ಹೀ ಸಂಘಟನ್‍ನ ಜನಪರ ಸೇವಾ ಕಾರ್ಯಕ್ರಮಗಳು ಜನಮಾನಸದಲ್ಲಿ ಸದಭಿಪ್ರಾಯವನ್ನು ಮೂಡಿಸಿದ್ದು ಕಷ್ಟಕಾಲದಲ್ಲಿ ರಕ್ಷಣೆಗೆ ಧಾವಿಸಿರುವ ಭಾಜಪವನ್ನು ನಾಡಿನ ಜನತೆ ಪುರಸ್ಕರಿಸುತ್ತಿರುವುದು ಕಾಂಗ್ರೆಸ್ಸಿನ ಮಹಾ ನಾಯಕರುಗಳ ನಿದ್ರೆಕೆಡಿಸಿದ್ದು ಈ ರೀತಿಯ ಬೂಟಾಟಿಕೆಯ ಹೇಳಿಕೆಗಳನ್ನು ನೀಡುವಂತೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಡೆತ್ ಆಡಿಟ್ ಸೋಗಲಾಡಿತನದ ನಾಟಕ. ಪ್ರಹಸನ ಒಂದು ಹಾಸ್ಯಾಸ್ಪದ ಘಟನೆಯಾಗಿದ್ದು ನಾಡಿನ ಜನತೆಯ ಗಮನವವನ್ನು ದಾರಿ ತಪ್ಪಿಸುವ ಒಂದು ವ್ಯರ್ಥ ಪ್ರಯತ್ನ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಟೀಕಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement