Friday, 15th November 2019

ದಶರಥನ ಅರಮನೆಯಲ್ಲಿದ್ದ 10 ಸಾವಿರ ಕೋಣೆಗಳಲ್ಲಿ ಶ್ರೀರಾಮ ಹುಟ್ಟಿದ್ದೆಲ್ಲಿ – ಮಣಿಶಂಕರ್ ಅಯ್ಯರ್ ಪ್ರಶ್ನೆ

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ದಶರಥ ಮಹಾರಾಜನ ಅರಮನೆಯಲ್ಲಿದ್ದ 10 ಸಾವಿರ ಕೋಣೆಗಳಲ್ಲಿ ಭಗವಾನ್ ಶ್ರೀರಾಮ ಹುಟ್ಟದ್ದೆಲ್ಲಿ ಎಂದು ಪ್ರಶ್ನೆಯನ್ನು ಮಾಡುವ ಮೂಲಕ ಮತ್ತೆ ವಿವಾದವನ್ನು ಎಳೆದುಕೊಂಡಿದ್ದಾರೆ.

ಎಸ್‍ಡಿಪಿಐ (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ಆಯೋಜಿಸಿದ್ದ ‘ಬಾಬರಿ ಮಸೀದಿಯ ಹೆಸರಲ್ಲಿ ಒಂದು ಸಂಜೆ’ ಎಂಬ ಕಾರ್ಯಕ್ರಮದಲ್ಲಿ ಮಣಿಶಂಕರ್ ಅಯ್ಯರ್ ಭಾಗಿಯಾಗಿದ್ದರು. ಸಮಾರೋಪ ಭಾಷಣದಲ್ಲಿ ಮಣಿಶಂಕರ್ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಣಿಶಂಕರ್ ಅಯ್ಯರ್ ಹೇಳಿದ್ದೇನು?
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವಂತಿದ್ದರೆ ಕಟ್ಟಿ. ಆದ್ರೆ ರಾಮಮಂದಿರವನ್ನ ಇಲ್ಲಿಯೇ ಕಟ್ಟುತ್ತೇವೆ ಎಂದು ನೀವು ಹೇಗೆ ಹೇಳುತ್ತೀರಿ. ದಶರಥ ಮಹಾರಾಜನ ಅರಮನೆಯಲ್ಲಿ 10 ಸಾವಿರ ಕೋಣೆಗಳಿದ್ದವು ಎಂದು ಹೇಳಲಾಗುತ್ತದೆ. ಹಾಗಾದರೆ ಭಗವಾನ್ ಶ್ರೀರಾಮ ಇದೇ ಕೋಣೆಯಲ್ಲಿ ಜನಿಸಿದ್ದ ಎಂದು ನೀವು ಹೇಗೆ ಹೇಳುತ್ತಿರಿ ಎಂದು ಪ್ರಶ್ನೆ ಮಾಡಿದರು. ಇದೊಂದು ಕಥೆಯಾಗಿದ್ದು, ಭಗವಾನ್ ಶ್ರೀರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದು ಅಂತಾ ನಂಬಿದ್ದರಿಂದ ಮಂದಿರ ಕಟ್ಟಬೇಕೆಂದು ಹೇಳುತ್ತೀರಿ. ಸದ್ಯ ಈ ಸ್ಥಳದಲ್ಲಿ ಈಗಾಗಲೇ ಒಂದು ಮಸೀದಿ ಇದೆ. ಮೊದಲು ಮಸೀದಿಯನ್ನು ಧ್ವಂಸಗೊಳಿಸಿ, ಇದೇ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಬೇಕು. ಹಾಗಾದ್ರೆ ಹಿಂದೂಸ್ಥಾನದಲ್ಲಿ ಅಲ್ಲಾಹನ ಮೇಲೆ ನಂಬಿಕೆ ಇರಿಸೋದು ತಪ್ಪಾಗುತ್ತದೆ ಎಂದರ್ಥ ಎಂದು ಹೇಳಿದ್ದಾರೆ.

ಮಣಿಶಂಕರ್ ಅಯ್ಯರ್ ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಲ್ಲಿರುತ್ತಾರೆ. 2017, ಡಿಸೆಂಬರ್ ನಲ್ಲಿ ಗುಜರಾತ್ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರ ವಿರುದ್ಧ ‘ನೀಚ’ ಎಂಬ ಪದವನ್ನು ಬಳಕೆ ಮಾಡಿದ್ದರು. ನೀಚ ಎಂಬ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ ಚುನಾವಣೆಯಲ್ಲಿ ಜಯಶಾಲಿಯಾಗಿತ್ತು.

2014ರ ಲೋಕಸಭೆ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಚಾಯ್ ವಾಲಾ ಎಂದು ಟೀಕೆ ಮಾಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ. ಚಹಾ ಮಾರುವುದಕ್ಕೆ ಸೂಕ್ತ ವ್ಯಕ್ತಿ ಎಂದಿದ್ದರು. ಇದನ್ನು ಬಳಸಿಕೊಂಡಿದ್ದ ಬಿಜೆಪಿ `ಚಾಯ್ ಪೇ ಚರ್ಚಾ’ ಹೆಸರಿನಲ್ಲಿ ಹೊಸ ಅಭಿಯಾನ ಹುಟ್ಟು ಹಾಕಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿ ಜನ ಮಾನಸದಲ್ಲಿ ಉಳಿದುಕೊಳ್ಳುವ ಮೂಲಕ ಯಶಸ್ವಿಯಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *