Wednesday, 20th November 2019

ಮೈತ್ರಿ ಸರ್ಕಾರದಲ್ಲಿ ಲೆಟರ್ ಪಾಲಿಟಿಕ್ಸ್ – ಕೈ ಹಿರಿಯ ನಾಯಕರಿಂದ ಪತ್ರ ಸಮರ

ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಸಂಬಂಧ ಸರ್ಕಾರದ ನಿಲುವು ಖಂಡಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಎಚ್‍ಕೆ ಪಾಟೀಲ್ ಪತ್ರದ ಮೇಲೆ ಪತ್ರ ಬರೆದಿದ್ದರು. ಇದೀಗ ಕುಡಿಯುವ ನೀರಿನ ವಿಚಾರವಾಗಿ ಮತ್ತೊಂದು ಪತ್ರ ಬರೆದಿದ್ದಾರೆ.

ರಾಜ್ಯದ ಬಡ ಜನರಿಗೆ ಶುದ್ಧ ಕುಡಿಯುವ ನೀರನ್ನು ಕಡಿಮೆ ದರದಲ್ಲಿ ನೀಡಬೇಕು ಎಂದು ಸಿಎಂ ಕುಮಾರಸ್ವಾಮಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಸದ್ಯ ಸರ್ಕಾರ ಪ್ರತಿ ಲೀಟರ್ ನೀರಿಗೆ 10 ಪೈಸೆ ನಿಗದಿ ಮಾಡಿದೆ. ಅದನ್ನು 25 ಪೈಸೆಗೆ ಹೆಚ್ಚಿಸಲು ಮುಂದಾಗಿರುವುದು ಸರಿಯಲ್ಲ. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧ ಎಂದು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಮತ್ತೊಬ್ಬ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರು ಕೂಡ ಪತ್ರ ಸಮರ ಶುರು ಮಾಡಿಕೊಂಡಿದ್ದಾರೆ. ಬಿಬಿಎಂಪಿ ಕಸದ ಗುತ್ತಿಗೆ ವಿಚಾರದಲ್ಲಿ ಟಿಪಿಎಸ್ ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆ ಕಳೆದ 7 ವರ್ಷದಲ್ಲಿ 246 ಕೋಟಿ ರೂ. ಅವ್ಯವಹಾರ ನಡೆಸಿದೆ. ಕಸದ ಗುತ್ತಿಗೆ ಪಡೆದು ಬೋಗಸ್ ಬಿಲ್ ಸೃಷ್ಟಿಸಿ ನೂರಾರು ಕೋಟಿ ರೂ. ಲೂಟಿ ಹೊಡೆದಿದ್ದಾರೆ. ಪಾಲಿಕೆ ಎಂಜಿನಿಯರ್ಸ್ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ಕೂಡಲೇ ತನಿಖೆ ನಡೆಸಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *