Wednesday, 20th November 2019

‘ಕೈ’ ಬಿಟ್ಟು ‘ಕಮಲ’ ಹಿಡಿದ ಎ.ಮಂಜುಗೆ ಹಾಸನ ಬಿಜೆಪಿ ಟಿಕೆಟ್!

ಹಾಸನ: ಹಲವು ದಿನಗಳಿಂದ ಕಾಂಗ್ರೆಸ್ ಮೈತ್ರಿ ಧರ್ಮದ ಅಭ್ಯರ್ಥಿಯಾಗಿ ದೇವೇಗೌಡರೇ ಹಾಸನದಲ್ಲಿ ಸ್ಪರ್ಧೆ ಮಾಡಬೇಕು ಇಲ್ಲವಾದರೆ ನಮ್ಮ ಬೆಂಬಲ ಇರುವುದಿಲ್ಲ ಎನ್ನುತ್ತಿದ್ದ ಮಾಜಿ ಸಚಿವ ಎ.ಮಂಜು ಅವರು ಕೊನೆಗೂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಇಂದು ಸಂಜೆ ವೇಳೆಗೆ ದಿಢೀರ್ ಎಂದು ಹಾಸನದ ಆರ್ ಪುರಂ ನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಎ.ಮಂಜು ಅವರು, ತರಾತುರಿಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದರು. ಆ ಮೂಲಕ ಅಧಿಕೃತವಾಗಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾದರು.

ಹಾಸನ ಶಾಸಕ ಪ್ರೀತಂ ಗೌಡ ಅವರು ಬಿಜೆಪಿ ಶಾಲು ಹೊದಿಸಿ, ಪಕ್ಷದ ಬಾವುಟ ನೀಡಿ ಸ್ವಾಗತ ನೀಡಿದರು. ನಾಳೆ ರಾಜ್ಯ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಮಂಜು ಅವರ ಸೇರ್ಪಡೆ ಬಗ್ಗೆ ಘೋಷಣೆಯಾಗಲಿದೆ. ಇದರೊಂದಿಗೆ ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿಯಿಂದ ಎ.ಮಂಜು ಅವರು ಸ್ಪರ್ಧೆ ಮಾಡುವುದು ಖಚಿತವಾಗಿದೆ. ಅಲ್ಲದೇ ಪಕ್ಷದಿಂದ ಟಿಕೆಟ್ ಸಿಗುವುದು ಖಚಿತ ಎಂಬ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ.

ಬಿಜೆಪಿ ಪಕ್ಷ ಸದಸ್ಯತ್ವವನ್ನು ಆನ್ ಲೈನ್‍ನಲ್ಲಿ ಅಂದರೆ ಬಿಜೆಪಿ ಪಕ್ಷದ ನಂಬರಿಗೆ ಮಿಸ್ ಕಾಲ್ ಕೋಡುವ ಮೂಲಕ ಎ. ಮಂಜು ಅವರು ಸದಸ್ಯತ್ವ ಪಡೆದುಕೊಂಡಿದ್ದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಎ.ಮಂಜು ಅವರು, ನಾನು ಈಗಾಗಲೇ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರಿಗೆ ರಾಜೀನಾಮೆ ಪತ್ರವನ್ನ ಫ್ಯಾಕ್ಸ್ ಮಾಡಿದ್ದೇನೆ. ನಾನು ಕಾಂಗ್ರೆಸ್ ಬಿಡಲು ದೇವೇಗೌಡರ ಕುಟುಂಬ ರಾಜಕಾರಣವೇ ಕಾರಣ. ತಮ್ಮ ಮೊಮ್ಮಕ್ಕಳಿಗೆ ಸ್ಥಾನ ಕಲ್ಪಿಸಲು ದೇವೇಗೌಡರು ಮುಂದಾಗಿದ್ದಾರೆ ಎಂದು ಆರೋಪ ಮಾಡಿದರು.

ಬಳಿಕ ಮಾತನಾಡಿದ ಶಾಸಕ ಪ್ರೀತಂ ಗೌಡ ಅವರು, ಹಾಸನದಲ್ಲಿ ಈ ಬಾರಿ ಬಿಜೆಪಿ ಗೆಲ್ಲಿಸಲು ಶತ ಪ್ರಯತ್ನ ಮಾಡುತ್ತೇವೆ. ಪಕ್ಷ ಸಂಘಟನೆ ಮಾಡಲು ಲೋಕಸಭಾ ಚುನಾವಣೆ ಗೆಲ್ಲಲು ಮಾಜಿ ಸಚಿವ ಎ,ಮಂಜು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರನ್ನು ಬಿಜೆಪಿಗೆ ಸ್ವಾಗತ ಮಾಡುತ್ತೇನೆ. ಜೆಡಿಎಸ್ ಗೆ ಪರ್ಯಾಯವಾಗಿ ನಿಲ್ಲಲು ಮಾಜಿ ಸಚಿವ ಎ,ಮಂಜು ಬಿಜೆಪಿಗೆ ಆಗಮಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ದ್ವಿಗುಣವಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *