Thursday, 25th April 2019

ಕಾಂಗ್ರೆಸ್-ಜೆಡಿಎಸ್ ಜಂಟಿ ಸುದ್ದಿಗೋಷ್ಠಿಗೆ ಮಂಡ್ಯದ ಕೈ ಮುಖಂಡರು ಗೈರು!

– ಮಾರ್ಚ್ 25ಕ್ಕೆ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ
– ದಯಮಾಡಿ ಯಾರೂ ಯಾರ ಬಗ್ಗೆಯೂ ಮಾತಾಡಬೇಡಿ

ಮಂಡ್ಯ: ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿಯಾಗಿ ನಡೆಸಿದ್ದ ಸುದ್ದಿಗೋಷ್ಠಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಪ್ರಮುಖ ಕಾಂಗ್ರೆಸ್ ನಾಯಕರು ಗೈರಾಗಿದ್ದು, ಮೈತ್ರಿಯಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.

ನಗರದಲ್ಲಿ ಇಂದು ನಡೆಸಿದ್ದ ಜಂಟಿ ಸುದ್ದಿಗೋಷ್ಠಿಗೆ ಮಾಜಿ ಸಚಿವ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇಗೌಡ, ಮಧು ಮಾದೇಗೌಡ ಸೇರಿದಂತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಎಲ್ಲ ಕಾಂಗ್ರೆಸ್ ಮುಖಂಡರೂ ಗೈರಾಗಿದ್ದರು.

ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು, ನಿಖಿಲ್ ಕುಮಾರಸ್ವಾಮಿ ಮಾರ್ಚ್ 25ರಂದು ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಬಳಿಕ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತರಲು ಎರಡೂ ಪಕ್ಷಗಳ ಮುಖಂಡರ ಜೊತೆ ಚರ್ಚಿಸಲಾಗಿದೆ. ಸಿಎಂ ಕುಮಾರಸ್ವಾಮಿ, ಹಲವು ಸಚಿವರು ಸೇರಿದಂತೆ ಎರಡೂ ಪಕ್ಷಗಳ ರಾಜ್ಯಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

ನಾಮ ಪತ್ರ ಸಲ್ಲಿಸುವ ವೇಳೆ 8 ವಿಧಾನಸಭಾ ಕ್ಷೇತ್ರದಿಂದ 2 ಲಕ್ಷ ಕಾರ್ಯಕರ್ತರು ಸೇರಲಿದ್ದಾರೆ. ಜಿಲ್ಲೆಯಲ್ಲಿ ಅಸಮಾಧಾನಗೊಂಡಿರೊ ಕಾರ್ಯಕರ್ತರ ಮನವೊಲಿಕೆ ಕೆಲಸ ನಡೆಯುತ್ತಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಸರಿಪಡಿಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಎಂದರು.

ಕಾಂಗ್ರೆಸ್‍ನ ಮಾಜಿ ಶಾಸಕರ ಜೊತೆ ಮಾತನಾಡುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಮಾಜಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರ ಮನೆ ಬಾಗಿಲಿಗೆ ನಾನೇ ಹೋಗಿ ಕರೆತರುತ್ತೇನೆ. ದಯಮಾಡಿ ಯಾರೂ ಯಾರ ಬಗ್ಗೆಯೂ ಮಾತನಾಡಬೇಡಿ ಎಂದು ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಯಾರೂ ಯಾರ ಬಗ್ಗೆಯೂ ಮಾತನಾಡಲ್ಲ ಎಂದರು.

Leave a Reply

Your email address will not be published. Required fields are marked *