Friday, 20th September 2019

ಮೈತ್ರಿ ಸರ್ಕಾರ ಕೊಂದು ಸಮಾಧಿ ಮಾಡಿದ್ದು ಹೆಚ್‍ಡಿಕೆ-ಸಿದ್ದರಾಮಯ್ಯ: ಹೆಚ್.ವಿಶ್ವನಾಥ್

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಮಾಜಿ ಸಿಎಂಗಳಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಸೇರಿ ಕೊಂದು ಸಮಾಧಿ ಮಾಡಿದರು. ಇದೀಗ ನೀ ಕೊಂದೆ, ನೀನು ಕೊಂದೆ ಎಂದು ಪರಸ್ಪರ ಆರೋಪ ಮಾಡುತ್ತಿದ್ದಾರೆ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಗಿದ ಅಧ್ಯಾಯವಾಗಿದ್ದು, ಸರ್ಕಾರ ಬೀಳಲು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರೇ ಕಾರಣ. ಈ ಸಂದರ್ಭದಲ್ಲಿ ದೇವೇಗೌಡರು ಬಗ್ಗೆ ಏನೂ ಮಾತನಾಡಲ್ಲ. ದೇವೇಗೌಡರು ಈ ದೇಶ ಮತ್ತು ರಾಜ್ಯದ ಹಿರಿಯ ಮುತ್ಸದಿಗಳು. ಮೈತ್ರಿ ವಿಚಾರದಲ್ಲಿಯೂ ದೇವೇಗೌಡರ ಬಗ್ಗೆ ಮಾತನಾಡಲ್ಲ. ಹಾಗಾಗಿ ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಜಾರಿಕೊಂಡರು.

ದೆಹಲಿಯ ಕರ್ನಾಟಕ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರ ಜೊತೆ ಮಾತನಾಡುವ ವೇಳೆ ಹೆಚ್.ವಿಶ್ವನಾಥ್, ರಾಜ್ಯ ಕೈ ನಾಯಕರ ವಿರುದ್ಧ ಅವಾಚ್ಯ ಪದ ಬಳಸಿ ನಿಂದಿಸಿದ್ದರು. ಕಾಂಗ್ರೆಸ್ ತಾಯಿ ಎಂದು ಹೇಳುತ್ತಿದ್ದ ನೀವು ಯಾಕೆ ಪಕ್ಷವನ್ನು ಬಿಟ್ಟು ಹೋದ್ರಿ ಅಂತ ಕಾರ್ಯಕರ್ತೆಯರು ಕೇಳಿದ್ದರು. ಇದಕ್ಕೆ ಉತ್ತರ ನೀಡಿದ ಎಚ್.ವಿಶ್ವನಾಥ್ ಅವರು, ಕಾಂಗ್ರೆಸ್ ಉತ್ತಮ ಪಕ್ಷ. ಆದರೆ ಅಲ್ಲಿನ ನಾಯಕರು ಅಯೋಗ್ಯರು (ಕಾಂಗ್ರೆಸ್ ಇಸ್ ಗುಡ್. ಬಟ್ ಕಾಂಗ್ರೆಸ್ ಲೀಡರ್ಸ್ ಆರ್ ನಾಟ್ ಗುಡ್). ಕಾಂಗ್ರೆಸ್ ನಾಯರು ಅಯೋಗ್ಯ ಸೂ…? ಎಂದು ಅವಾಚ್ಯ ಪದ ಬಳಸಿ ಕಿಡಿಕಾರಿದ್ದರು.

ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯನವರೇ ಕಾರಣ ಎಂದು ದೇವೇಗೌಡರು ಆರೋಪಿಸಿದ್ದರು. ದೇವೇಗೌಡರ ಆರೋಪಕ್ಕೆ ತಿರುಗೇಟು ನೀಡಿದ್ದ ಸಿದ್ದರಾಮಯ್ಯನವರು, ಕುಮಾರಸ್ವಾಮಿಯವರ ಏಕಪಕ್ಷೀಯ ತೀರ್ಮಾನಗಳು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದರಿಂದ ಮೈತ್ರಿ ಸರ್ಕಾರ ಬಿದ್ದಿತು. ದೇವೇಗೌಡರು ಮತ್ತು ಕುಟುಂಬವರದ್ದು ನೀಚ ರಾಜಕಾರಣ ಎಂದು ಗುಡುಗಿದ್ದರು. ಇತ್ತ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾತ್ರ ಇಬ್ಬರು ದೊಡ್ಡ ನಾಯಕರು. ಹಾಗಾಗಿ ದೇವೇಗೌಡರು ಮತ್ತು ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *