Connect with us

Bengaluru City

ಮೈಸೂರು ಮೇಯರ್‌ ಚುನಾವಣೆ – ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆದ ಹೆಚ್‍ಡಿಡಿ

Published

on

– ಮೇಯರ್ ಚುನಾವಣೆಯಲ್ಲಿ ಬಿಗ್ ಟ್ವಿಸ್ಟ್
– ಜೆಡಿಎಸ್ ಕೇಳದಿದ್ರೂ ಕಾಂಗ್ರೆಸ್ ಬೆಂಬಲ
– ಗದ್ದುಗೆ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಶಾಕ್

ಬೆಂಗಳೂರು/ಮೈಸೂರು: ರಾಜಕೀಯ ಚದುರಂಗದಾಟದಲ್ಲಿ ಯಾವಾಗ ಯಾರು ಯಾವ ಪಾನ್ ಮೂವ್ ಮಾಡಿ, ಯಾರನ್ನು ಕಟ್ಟಿ ಹಾಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಇಂದು ಮೈಸೂರಿನಲ್ಲಿ ನಡೆದ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯೇ ಸಾಕ್ಷಿ.

ಕ್ಷಣ ಕ್ಷಣಕ್ಕೂ ಟ್ವಿಸ್ಟ್‌ಗಳನ್ನು ಪಡೆದುಕೊಂಡ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮತದಾನ ನಡೆಯುವಾಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಬಿಜೆಪಿಗೆ ಬಿಗ್ ಶಾಕ್ ನೀಡಿವೆ.

ಮೇಯರ್ ಆಗಿ ಜೆಡಿಎಸ್‍ನ ರುಕ್ಮಿಣಿ ಮಾದೇಗೌಡ, ಉಪಮೇಯರ್ ಆಗಿ ಕಾಂಗ್ರೆಸ್‍ನ ಅನ್ವರ್ ಬೇಗ್ ಆಯ್ಕೆ ಆಗಿದ್ದಾರೆ. ಬೆಳಗ್ಗೆಯಿಂದಲೂ ಬಿಜೆಪಿಗೆ ಜೆಡಿಎಸ್ ಬೆಂಬಲಿಸಬಹುದು, ಮೇಯರ್ ಸ್ಥಾನ ಬಿಜೆಪಿ ಪಾಲಾಗಬಹುದು, ಉಪಮೇಯರ್ ಸ್ಥಾನ ಜೆಡಿಎಸ್ ತೆಗೆದುಕೊಳ್ಳಬಹುದು ಎಂಬ ವಾತಾವರಣ ಇತ್ತು. ಮಾಜಿ ಸಿಎಂ ಕುಮಾರಸ್ವಾಮಿ ನಡೆಯೂ ಇದಕ್ಕೆ ಇಂಬು ನೀಡುವಂತೆ ಇತ್ತು.

ತಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಕಣಕ್ಕಿಳಿಯುತ್ತೇವೆ ಎನ್ನುತ್ತಲೇ, ಕಾಂಗ್ರೆಸ್ ಸಹವಾಸ ಬೇಡ ಎಂದು ಕುಮಾರಸ್ವಾಮಿ ಗರಂ ಆಗಿ ಹೇಳಿದ್ದರು. ಈ ಹೇಳಿಕೆಯಿಂದ ಕುಮಾರಸ್ವಾಮಿ ಬಿಜೆಪಿಯನ್ನು ಬೆಂಬಲಿಸಬಹುದು ಎನ್ನಲಾಗಿತ್ತು.

ಮೂರು ಪಕ್ಷಗಳು ಸಹ ಮೇಯರ್, ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಇತ್ತ ಕೊನೆ ಕ್ಷಣದವರೆಗೂ ಮೇಯರ್‌ ಗಿರಿಗೆ ಪ್ರಯತ್ನಿಸಿದ್ದ ಕಾಂಗ್ರೆಸ್, ಇದು ಸಾಧ್ಯವಿಲ್ಲ ಎಂದು ಅರಿತೊಡನೆ ತನ್ನ ಕಾರ್ಯತಂತ್ರವನ್ನು ಏಕಾಏಕಿ ಬದಲು ಮಾಡಿತು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್ ಬೆಂಬಲ ಕೇಳದೇ ಇದ್ದರೂ ಆ ಪಕ್ಷದ ಮೇಯರ್ ಅಭ್ಯರ್ಥಿಗೆ ಕಾಂಗ್ರೆಸ್ ತನ್ನೆಲ್ಲಾ ಮತಗಳನ್ನು ಹಾಕಿತು.

ಅದರಲ್ಲೂ ಅಚ್ಚರಿ ಏನೆಂದರೆ ಕಾಂಗ್ರೆಸ್, ತನ್ನ ಅಭ್ಯರ್ಥಿಗೆ ಮತ ಹಾಕಲಿಲ್ಲ. ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಕೂಡ ಜೆಡಿಎಸ್‍ಗೆ ವೋಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಸದಸ್ಯರು, ಕಾಂಗ್ರೆಸ್‍ನ ಉಪಮೇಯರ್ ಅಭ್ಯರ್ಥಿ ಅನ್ವರ್ ಬೇಗ್‍ಗೆ ಮತ ಹಾಕಿದರು. ಈ ರೀತಿ ಚುನಾವಣೆ ನಡೆಯುತ್ತದೆ ಎಂದು ಬಿಜೆಪಿ ಊಹಿಸಿಯೇ ಇರಲಿಲ್ಲ. ಮೇಯರ್, ಉಪಮೇಯರ್ ಇಬ್ಬರಿಗೂ ತಲಾ 43 ಮತಗಳು ಬಿದ್ದವು. ಬಿಜೆಪಿ ಮೇಯರ್ ಅಭ್ಯರ್ಥಿಗೆ ಸುನಂದಾಗೆ 26 ಮತಗಳಷ್ಟೇ ಬಿತ್ತು.

ಎಚ್‌ಡಿಡಿ ತಂತ್ರಗಾರಿಕೆ:
ಒಂದು ಕಡೆ ಜೆಡಿಎಸ್ ಸದಸ್ಯರನ್ನು ಸೆಳೆಯಲು ಸಿದ್ದರಾಮಯ್ಯ ವಿಫಲರಾದರು ಎಂಬ ಮಾತುಗಳು ಕೇಳಿ ಬರುತ್ತಿದ್ದರೆ ಇನ್ನೊಂದು ಕಡೆ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಕೆಪಿಸಿಸಿ ಅಧ್ಯಕ್ಷ ಒಳ ಒಪ್ಪಂದ ಮಾಡಿಕೊಂಡು ಸಿದ್ದರಾಮಯ್ಯಗೆ ಬಿಗ್ ಶಾಕ್ ಕೊಟ್ಟಿದ್ದಾರೆ ಎಂಬ ಸುದ್ದಿಯೂ ರಾಜಕೀಯ ವಲಯದಿಂದ ಬರುತ್ತಿದೆ.

ನಿನ್ನೆ ರಾತ್ರಿಯಿಂದಲೇ ದೇವೇಗೌಡರ ಜೊತೆಗೆ ಡಿ.ಕೆ. ಶಿವಕುಮಾರ್ ಸಂಪರ್ಕ ಹೊಂದಿದ್ದರೆಂದು ಹೇಳಲಾಗುತ್ತಿದೆ. ಮೈಸೂರಿನಲ್ಲೇ ಬೀಡು ಬಿಟ್ಟಿದ್ದ ಕುಮಾರಸ್ವಾಮಿ, ಬಿಜೆಪಿಗೆ ಬೆಂಬಲ ಕೊಡಲು ಮುಕ್ತ ಮನಸ್ಸು ಮಾಡಿದ್ದರು ಎನ್ನಲಾಗಿತ್ತು. ಆದರೆ ಇವತ್ತು ಬೆಳ್ಳಂಬೆಳಗ್ಗೆ ಕುಮಾರಸ್ವಾಮಿಗೆ ದೇವೇಗೌಡರು ಸಂದೇಶವೊಂದನ್ನು ರವಾನಿಸಿದ್ದರು. ಅದರನ್ವಯ ಎರಡು ಪಕ್ಷಗಳಿಂದ ಅಂತರ ಕಾಯ್ದುಕೊಂಡು, ಅಭ್ಯರ್ಥಿ ಕಣಕ್ಕಿಳಿಸಿ ಅಂತಿಮವಾಗಿ ಕಾಂಗ್ರೆಸ್ ಬೆಂಬಲ ಪಡೆದುಕೊಂಡರು. ದೇವೇಗೌಡರ ಈ ತಂತ್ರಗಾರಿಕೆಯಿಂದ ಇವತ್ತು ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಬೀಗಿದೆ.

ಈ ತಂತ್ರಗಾರಿಕೆಯಿಂದ ಮೇಯರ್ ಸ್ಥಾನವೂ ಸಿಕ್ಕಿತು. ಜಾತ್ಯಾತೀತ ಪಟ್ಟವೂ ಉಳಿಯಿತು. ಸಿದ್ದರಾಮಯ್ಯಗೆ ಪಾಠವೂ ಕಲಿಸಿದಂತಾಯ್ತು. ಈ ಮೂಲಕ ಒಂದೇ ಕಲ್ಲಿಗೆ ಮೂರು ಹಕ್ಕಿಗಳನ್ನು ಎಚ್‌ಡಿಡಿ ಹೊಡೆದಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ.

ಬಿಜೆಪಿ ಜೊತೆ ಹೋದ್ರೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಹೊಡೆತ ಬೀಳುವ ಸಾಧ್ಯತೆಯಿತ್ತು. ಹೀಗಾಗಿ ಬಿಜೆಪಿ ಬೆಂಬಲಿಸಲು ಮುಂದಾಗಿದ್ದ ಹೆಚ್‍ಡಿಕೆಗೆ ಹೆಚ್‍ಡಿಡಿ ಬ್ರೇಕ್ ಹಾಕಿದ್ದಾರೆ. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಬೆಂಬಲ ಪಡೆಯಲು ಹೆಚ್‍ಡಿಡಿ ಗ್ರೀನ್ ಸಿಗ್ನಲ್ ನೀಡಿದ್ದರು.

ಪಟ್ಟ ಸಾಧಿಸಿದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ವಿರುದ್ಧ ಹಠ ಸಾಧಿಸಿದ ತೃಪ್ತಿ ಸಿಕ್ಕಿದೆ. ಆದರೆ ಪರಸ್ಪರ ತೊಡೆತಟ್ಟಿದ್ದರೂ ಸಿದ್ದು-ಹೆಚ್‍ಡಿಕೆಗೆ ಅವಕಾಶವಾದಿಗಳು ಎಂಬ ಹಣೆಪಟ್ಟಿ ಬಂದಿದೆ. ಮೈಸೂರು ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದಿಂದ ಕಮಲಕ್ಕೆ ಮೇಯರ್‌ ಪಟ್ಟ ತಪ್ಪಿದರೂ ಭವಿಷ್ಯದಲ್ಲಿ ಇದನ್ನೇ ಪಕ್ಷದ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ.

Click to comment

Leave a Reply

Your email address will not be published. Required fields are marked *