Thursday, 16th August 2018

Recent News

ಕಾಂಗ್ರೆಸ್ – ಜೆಡಿಎಸ್‍ನದ್ದು ಅಪವಿತ್ರ ಮೈತ್ರಿ, ಕಿಚಡಿ ಸರ್ಕಾರ: ಶೆಟ್ಟರ್

ಹುಬ್ಬಳ್ಳಿ: ಕಾಂಗ್ರೆಸ್ ಜೆಡಿಎಸ್ ನದ್ದು ಅಪವಿತ್ರ ಮೈತ್ರಿ ಅನೈತಿಕವಾಗಿ ಮಾಡಿರುವ ಕಿಚಡಿ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

ಜನಾದೇಶದ ವಿರುದ್ಧ ಕಾಂಗ್ರೆಸ್, ಜೆಡಿಎಸ್ ನಡೆದುಕೊಂಡಿರುವುದು ಖಂಡನೀಯ. ಇವತ್ತು ಕರ್ನಾಟಕಕ್ಕೆ ಕರಾಳ ದಿನ. ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಮಂಡಿಯೂರಿದ್ದು ಜನರ ಆಕ್ರೋಶಕ್ಕೆ ಈ ಸರ್ಕಾರ ತುತ್ತಾಗುತ್ತೆ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರ ಹಂಚಿಕೆ ವಿಚಾರದಲ್ಲಿ ಗೊಂದಲ ಆಗಿದೆ. ಕೆಲವೇ ತಿಂಗಳಲ್ಲಿ ಸರ್ಕಾರದ ಪತನ ಪ್ರಾರಂಭವಾಗುತ್ತದೆ. ಅಪವಿತ್ರ ಮೈತ್ರಿಯಿಂದಾದ ಸರ್ಕಾರ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಮಾತು ಕೊಟ್ಟಂತೆ ನಡೆದುಕೊಳ್ಳಲಿ. ನಿಜವಾದ ಗಟ್ಸ್ ಇದ್ರೆ ರೈತರ ಸಾಲಮನ್ನಾ ಮಾಡಲಿ. ಈಗ ಸಬೂಬು ಹೇಳುತ್ತಿರುವುದು ಬೇಜವಾಬ್ದಾರಿಯ ಲಕ್ಷಣ. ಭರವಸೆ ಕೊಟ್ಟಂತೆ ನಡೆದುಕೊಳ್ಳದಿದ್ದರೆ ಜನರ ಕ್ಷಮಾಪಣೆ ಕೇಳಲಿ ಎಂದು ಆಗ್ರಹಿಸಿದರು.

ಕುಮಾರಸ್ವಾಮಿಯವರಿಗೆ ರೈತರ ಬಗ್ಗೆ ಕಳಕಳಿಯಿಲ್ಲ, ಮುಖ್ಯಮಂತ್ರಿ ಆಗುವ ಹಪಾಹಪಿ ಮಾತ್ರ ಇದೆ. ರೈತರ ಸಾಲಮನ್ನಾ ಮಾಡದಿದ್ದರೆ ಕುಮಾರಸ್ವಾಮಿಯವರಿಗೆ ಪ್ರಮಾಣವಚನ ತೆಗೆದುಕೊಳ್ಳುವ ನೈತಿಕ ಹಕ್ಕಿಲ್ಲ. ಈ ಸರ್ಕಾರದ ಅಸ್ತಿತ್ವದ ಬಗ್ಗೆ ಪ್ರಶ್ನಾರ್ಹ ಚಿಹ್ನೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕಕ್ಕೂ ಪ್ರಾತಿನಿಧ್ಯ ಸಿಗುವ ಲಕ್ಷಣವಿಲ್ಲ. ಸಿಎಂ, ಡಿಸಿಎಂ ಇಬ್ಬರೂ ದಕ್ಷಿಣ ಕರ್ನಾಟಕದವರು. ಉತ್ತರ ಕರ್ನಾಟಕಕ್ಕೆ ಮೊದಲಿನಿಂದ ನಡೆದು ಬಂದ ಅನ್ಯಾಯ ಈಗಲೂ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲವು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಹಿಂದೆಯೂ ನಮ್ಮ ಸಂಪರ್ಕದಲ್ಲಿದ್ದರು, ಆದರೆ ಧೈರ್ಯವಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮ್ಮ ಶಾಸಕರನ್ನು ಗೃಹಬಂಧನದಲ್ಲಿ ಇಟ್ಟಿದ್ದಾರೆ. ಅವರೆಲ್ಲಾ ರೆಸಾರ್ಟ್‍ನಿಂದ ಹೊರಗಡೆ ಬರಲಿ, ಆಮೇಲೆ ಚಿತ್ರಣ ಬದಲಾಗಲಿದೆ. ನಮ್ಮನ್ನು ಆಪರೇಷನ್ ಮಾಡಿ ಎಂದು ಅವರೇ ಬರುತ್ತಾರೆ. ಬಹುತೇಕ ಶಾಸಕರಿಗೆ ಕಾಂಗ್ರೆಸ್‍ನಲ್ಲಿರಲು ಮನಸ್ಸಿಲ್ಲ ಎಂದು ಗಂಭೀರ ಆರೋಪ ಮಾಡಿದರು.

Leave a Reply

Your email address will not be published. Required fields are marked *