Wednesday, 20th November 2019

ಅಧಿವೇಶನಕ್ಕೆ ಹಾಜರಾಗುವಂತೆ ಶಾಸಕರಿಗೆ ವಿಪ್ ಜಾರಿ – ಅತೃಪ್ತ ಶಾಸಕರಿಗೆ ವಿಪ್ ಜಾರಿಯಾಗುತ್ತಾ?

ಬೆಂಗಳೂರು: ಶುಕ್ರವಾರದಿಂದ ಅಧಿವೇಶನ ಆರಂಭವಾಗಲಿದ್ದು ದೋಸ್ತಿ ಸರ್ಕಾರದ ಎಲ್ಲ ಶಾಸಕರಿಗೆ ವಿಪ್ ಜಾರಿಯಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.

15ನೇ ವಿಧಾನಸಭೆಯ 4ನೇ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಸರ್ಕಾರ ಪರ ಕಡ್ಡಾಯವಾಗಿ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿದೆ. ಅಲ್ಲದೇ ಗೈರು ಹಾಜರಾದರೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಸಂವಿಧಾನದ ಅನುಚ್ಛೇದ-10 (ಪಕ್ಷಾಂತರ ನಿಷೇಧ ಕಾಯ್ದೆ)ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿದೆ.

ಅತೃಪ್ತ ಶಾಸಕರು ಇಂದು ಸಂಜೆಯಷ್ಟೇ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಕೆ ಮಾಡಲಾಗಿದ್ದು, ಸ್ಪೀಕರ್ ಅವರು ರಾಜೀನಾಮೆ ಸ್ವೀಕರಿಸಿದ್ದಾರೆ. ಆದರೆ ಸದ್ಯ ವಿಪ್ ಜಾರಿ ಆಗಿರುವುದರಿಂದ ಯಾವ ರೀತಿ ವಿಪ್ ನೀಡುತ್ತಾರೆ ಹಾಗೂ ಅತೃಪ್ತ ಶಾಸಕರು ಸದನಕ್ಕೆ ಗೈರಾದರೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

ಪಕ್ಷಾಂತರ ಕಾಯ್ದೆ ಏನು ಹೇಳುತ್ತೆ?
ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ.

ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತೋ ಅಲ್ಲಿವರೆಗೆ ಹುದ್ದೆಗಳನ್ನ ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸುವುದಿಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದು.

ವಿಪ್ ಅನ್ವಯವಾಗುತ್ತಾ?
ರಾಜೀನಾಮೆ ಅಂಗೀಕಾರವಾಗದ ಶಾಸಕರಿಗೆ ವಿಪ್ ಅನ್ವಯವಾಗುತ್ತದೋ ಇಲ್ಲವೋ ಎನ್ನುವುದು ಇನ್ನು ಗೊಂದಲದಲ್ಲಿದೆ. ರಾಜೀನಾಮೆ ಅಂಗೀಕಾರವಾಗುವವರೆಗೂ ವಿಪ್ ಅನ್ವಯವವಾಗುತ್ತದೆ ಎಂದು ಕೆಲ ಕಾನೂನು ಪಂಡಿತರು ಹೇಳಿದ್ದಾರೆ. ಆದರೆ ಈ ಪ್ರಕರಣದಲ್ಲಿ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಸ್ಪೀಕರ್ ರಾಜೀನಾಮೆಯನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ ನಾವು ರಾಜೀನಾಮೆಯನ್ನು ನೀಡಿದ್ದರೂ ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡಲು ತಡ ಮಾಡುತ್ತಿದ್ದಾರೆ ಎಂದು ಅತೃಪ್ತ ಶಾಸಕರು ದೂರು ನೀಡಿದ್ದಾರೆ. ಹೀಗಾಗಿ ಈ ಅರ್ಜಿಯ ವಿಚಾರಣೆ ಶುಕ್ರವಾರ ನ್ಯಾಯಾಲಯದಲ್ಲಿ ಬರುವ ಕಾರಣ ಏನು ನಡೆಯಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.

Leave a Reply

Your email address will not be published. Required fields are marked *