Tuesday, 25th February 2020

370ನೇ ವಿಧಿ ರದ್ದು ಬೆಂಬಲಿಸಿ, ಸ್ವಪಕ್ಷದ ವಿರುದ್ಧವೇ ಗುಡುಗಿದ ‘ಕೈ’ ಕಟ್ಟಾಳು ಹೂಡಾ

ನವದೆಹಲಿ: ಭಾರತ ಸರ್ಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ್ದನ್ನು ಕಾಂಗ್ರೆಸ್ ಕಟ್ಟಾಳು, ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲದೆ ಸ್ವಪಕ್ಷದ ವಿರುದ್ಧವೇ ಗುಡುಗಿದ್ದಾರೆ.

ಹರ್ಯಾಣದ ರೋಹ್ಟಕ್‍ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿಧಿ 370ನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಸರ್ಕಾರ ಸರಿಯಾದ ನಿರ್ಧಾರವನ್ನೇ ಕೈಗೊಂಡಿದೆ. ನಾವು ಅದನ್ನು ಒಪ್ಪಿಕೊಳ್ಳಬೇಕು. ಆದರೆ ಈ ನಿರ್ಧಾರವನ್ನು ನಮ್ಮ ಹಲವು ಸಹೋದ್ಯೋಗಿಗಳು ವಿರೋಧಿಸುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ನನ್ನ ಪಕ್ಷ ಕಾಂಗ್ರೆಸ್ ಸಣ್ಣ ಪ್ರಮಾಣದಲ್ಲಿ ದಾರಿ ತಪ್ಪಿದೆ. ಇದು ಹಳೇ ಕಾಂಗ್ರೆಸ್ ಆಗಿ ಉಳಿದಿಲ್ಲ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೆಲವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಅಂತಹ ವ್ಯಕ್ತಿಗಳ ಜೊತೆಗೆ ನಾನು ಬೆಂಬಲ ನೀಡುವುದಿಲ್ಲ. ದೇಶಭಕ್ತಿ, ಆತ್ಮಗೌರವದ ವಿಚಾರದಲ್ಲಿ ನಾನು ಯಾವುದೇ ಕಾರಣಕ್ಕೂ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಗುಡುಗಿದ್ದಾರೆ.

ಹರ್ಯಾಣ ವಿಧಾನಸಭಾ ಚುನಾವಣೆಯು ಇದೇ ವರ್ಷ ನವೆಂಬರ್ ನಲ್ಲಿ ನಡೆಯಲಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಭರ್ಜರಿ ಪ್ರಜಾರ ಆರಂಭಿಸಿವೆ. ಈ ಬೆನ್ನಲ್ಲೇ ಭೂಪೇಂದ್ರ ಸಿಂಗ್ ಹೂಡಾ ಅವರು ಸ್ವಪಕ್ಷ ಕಾಂಗ್ರೆಸ್ ವಿರುದ್ಧವೇ ಕಿಡಿಕಾರಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಹರ್ಯಾಣದಲ್ಲಿ ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ಹಾಗೂ ವಿವಿಧ ಹುದ್ದೆ ನಿಭಾಯಿಸಿರುವ ಭೂಪೇಂದ್ರ ಸಿಂಗ್ ಹೂಡಾ ಅವರು 4 ದಶಕಗಳಿಂದ ಕಾಂಗ್ರೆಸ್‍ನಲ್ಲಿದ್ದಾರೆ.

ಈ ಹಿಂದೆ ಕಾಂಗ್ರೆಸ್‍ನ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಅವರು, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತೇನೆ. ಈ ಮೂಲಕ ಭಾರತವು ಸಂಪೂರ್ಣ ಏಕೀಕರಣವಾಗಲಿದೆ. ಆದರೆ ಸಾಂವಿಧಾನಿಕ ಪ್ರಕ್ರಿಯೆಯನ್ನು ಅನುಸರಿಸಿದ್ದರೆ ಚೆನ್ನಾಗಿರುತ್ತಿತ್ತು. ಆಗ ಯಾವುದೇ ಪ್ರಶ್ನೆಗಳನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಅದೇನೇ ಇದ್ದರೂ, ಇದು ನಮ್ಮ ದೇಶದ ಹಿತಾಸಕ್ತಿ ಮತ್ತು ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Leave a Reply

Your email address will not be published. Required fields are marked *