Friday, 19th July 2019

Recent News

ಕಾಂಗ್ರೆಸ್ ಸಿಎಲ್‍ಪಿ ಸಭೆ: ಏನೇನು ಚರ್ಚೆ ಆಯ್ತು? ಇನ್‍ಸೈಡ್ ಸ್ಟೋರಿ ಇಲ್ಲಿದೆ

ಬೆಂಗಳೂರು: ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದ್ದು, ಈ ವೇಳೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರಿಗೆ ಶಾಸಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಮೊದಲ ಸಿಎಲ್‍ಪಿ ಸಭೆ ಇಂದು ನಡೆದಿದ್ದು, ಸಭೆಯಲ್ಲಿ ಬಜೆಟ್ ಮಂಡನೆಯಿಂದಾದ ಗೊಂದಲದ ಜೊತೆಗೆ ಸಭಾಪತಿ ಸ್ಥಾನ ಜೆಡಿಎಸ್‍ಗೆ ಬಿಟ್ಟುಕೊಡುವ ವಿಚಾರ, ಸಂಪುಟ ವಿಸ್ತರಣೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ನಿಗಮ ಮಂಡಳಿ ನೇಮಕ, ಪೆಟ್ರೋಲ್, ವಿದ್ಯುತ್ ದರ ಏರಿಕೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ನೀವು ತಲೆ ಅಲ್ಲಾಡಿಸುತ್ತೀರಿ. ಡಿಸಿಎಂ ಹುದ್ದೆ, ಅಧಿಕಾರ ಬರುತ್ತೆ ಹೋಗುತ್ತೆ. ಆದ್ರೆ ನಮಗೆ ಪಕ್ಷ ಮುಖ್ಯವಾಗುತ್ತದೆ. ಕಾಂಗ್ರೆಸ್ ಪಕ್ಷದ ಬುಡ ಅಲುಗಾಡದಂತೆ ನೋಡಿಕೊಳ್ಳಿ ಎಂದು ಕೈ ಶಾಸಕರು ಪರಮೇಶ್ವರ್ ಅವರನ್ನು ಪ್ರಶ್ನಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಬಗ್ಗೆ ಒಂದೇ ಒಂದು ವಿಷಯ ಪ್ರಸ್ತಾಪಕ್ಕೆ ಮಾಡದ್ದಕ್ಕೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ಕೆಟ್ಟ ಸಂದೇಶ ರವಾನೆ ಆಗುತ್ತದೆ. ಬಜೆಟ್ ಉತ್ತರದಲ್ಲಿ ಇದನ್ನ ಸರಿಪಡಿಸಬೇಕು. ಕಾಂಗ್ರೆಸ್ ನಾಯಕರ ಜೊತೆಗೆ ಸಮಾಲೋಚನೆ ಮಾಡದೇ ಪೆಟ್ರೋಲ್ ಸೆಸ್ ಏರಿಕೆ ಮಾಡಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಹೀಗಿರುವಾಗ ನಮ್ಮ ಸರ್ಕಾರದಲ್ಲೇ ಸೆಸ್ ಬೆಲೆ ಏರಿಕೆಗೆ ಸಮ್ಮತಿ ನೀಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಕ್ಕೆ ಪೆಟ್ರೋಲ್ ಮೇಲಿನ ಸೆಸ್ ಗೆ ಸಾವಿರ ಕೋಟಿ ಹೊರೆಯಾಗಬಹುದು. ಹಾಗಂತ ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದು ಸರಿಯಿಲ್ಲ. ಇದನ್ನು ವಾಪಾಸ್ ಪಡೆಯಬೇಕು. ಈ ಬಗ್ಗೆ ಸಿಎಂ ಗಮನ ಸೆಳೆಯಲು ಕಾಂಗ್ರೆಸ್ ನಾಯಕರು ತೀರ್ಮಾನಿಸಬೇಕು. ಇನ್ನೂ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ಇದ್ದ ಏಳು ಕೆಜಿ ಅಕ್ಕಿಯನ್ನು ಕೊಡಬೇಕು. ಎರಡು ಕೆಜಿ 700 ಕೋಟಿ ರೂಪಾಯಿ ಹೆಚ್ಚಳವಾಗುತ್ತದೆ. ಅದು ಸರ್ಕಾರಕ್ಕೆ ಅಷ್ಟೊಂದು ಹೊರೆಯಾಗೋದಿಲ್ಲ. ಐದು ಕೆಜಿ ಯಿಂದ ಎರಡು ಕೆಜಿ ಗೆ ಇಳಿಸಿರೋದು ಸರಿಯಲ್ಲ. ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗೆ ಈ ರೀತಿ ಕತ್ತರಿ ಹಾಕಿದ್ದು ಸರಿಯೇ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರನ್ನು ಶಾಸಕರು ಪ್ರಶ್ನಿಸಿದ್ದಾರೆ. ನಾಳೆ ಬಜೆಟ್ ಮೇಲೆ ಸಿಎಂ ಉತ್ತರ ಕೊಡುವಾಗ ಇವೆಲ್ಲವನ್ನು ಹೇಳಬೇಕು. ಈ ಬಗ್ಗೆ ಕಾಂಗ್ರೆಸ್ ನಾಯಕರು ಒಟ್ಟಾಗಿ ಸಿಎಂ ಗಮನಕ್ಕೆ ತರಬೇಕು ಅಂತ ಶಾಸಕರು ಆಗ್ರಹಿಸಿದ್ದಾರೆ.

ಈ ವೇಳೆ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಭಾಗದ ಶಾಸಕರಿಂದ ಅಸಮಾಧಾನ ವ್ಯಕ್ತವಾಗಿದೆ. ಪೆಟ್ರೋಲ್ ಏರಿಕೆ ಬಗ್ಗೆ ನಾವೇ ಕೇಂದ್ರ ಸರ್ಕಾರದ ಹೋರಾಟ ಮಾಡಿದ್ವಿ. ಈಗ ನಾವೇ ಹೆಚ್ಚಳ ಮಾಡಿದ್ರೆ ನಾವು ಹೇಗೆ ಮುಂದೆ ಹೋರಾಟ ಮಾಡೋದು? ಜನ ಸಾಮಾನ್ಯರಿಗೆ ಹೊರೆ ಆಗುವಂತೆ ವಿದ್ಯುತ್ ಬೆಲೆ ಏರಿಕೆ ಮಾಡಿದ್ದು ಸರಿಯಲ್ಲ. ಹಿಂಗೆ ಆದ್ರೆ ನಾವು ಜನರ ಬಳಿ ಹೋಗೋದು ಹೇಗೆ ಅಂತ ಶಾಸಕರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಸಭೆಯ ಮಧ್ಯೆ ಕೆಪಿಸಿಸಿ ಅಧ್ಯಕ್ಷ, ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೊರನಡೆದಿದ್ದರು.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಕೆ ಪಾಟೀಲ್, ಸಿಎಂ ಹಾಗೂ ಸಿದ್ದರಾಮಯ್ಯಗೆ ಬರೆದ ಪತ್ರದ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಆಗಿದೆ. ಬಜೆಟ್ ನಲ್ಲಿ ಉತ್ತರ ಕರ್ನಾಟಕ ಹಾಗೂ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿರುವ ಬಗ್ಗೆ ತಿಳಿಸಿದ್ದೇನೆ. ನನ್ನ ಅನಿಸಿಕೆಯನ್ನ ಸಭೆಯಲ್ಲಿ ತಿಳಿಸಿದ್ದು, ಅದನ್ನು ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂಪೂರ್ಣ ಕರ್ನಾಟಕಕ್ಕೆ ಒಳ್ಳೆಯಾದಾಗುವ ಕುರಿತು ನಿರ್ಧಾರ ಮಾಡ್ತಾರೆ ಅನ್ನೋ ಭರವಸೆ ಇದೆ. ನನ್ನ ಅನಿಸಿಕೆಯನ್ನು ಬಹುತೇಕ ಶಾಸಕರು ಕೂಡ ಒಪ್ಪಿಕೊಂಡ್ರು. ರೈತರ ಸಾಲಮನ್ನಾ ಎಲ್ಲಾ ಭಾಗದ ರೈತರಿಗೂ ಆಗಬೇಕು ಅನ್ನೊ ವಿಚಾರವನ್ನ ತಿಳಿಸಿದ್ದೇನೆ. ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಳ ವಿಚಾರವನ್ನೂ ಪ್ರಸ್ತಾಪ ಮಾಡಿದ್ದು, ಅದನ್ನ ಕಡಿಮೆ ಮಾಡಬೇಕು ಅಂತ ತಿಳಿಸಿದ್ದೇವೆ ಅಂತ ಹೇಳಿದ್ರು.

ಮುಂದಿನ ಚುನಾವಣೆಗೆ ಶಿಸ್ತಿನಿಂದ ಕೆಲಸ ಮಾಡಲು ಸೂಚನೆ ಮಾಡಲಾಗಿದೆ. ಪರಿಷತ್ ಸಭಾಪತಿ ಸ್ಥಾನ ಬೇಗ ಮಾಡಬೇಕು ಅನ್ನೋದನ್ನ ಕೆಲವರು ಹೇಳಿದ್ದಾರೆ. ನಮ್ಮ ರಾಷ್ಟ್ರೀಯ ಕಾರ್ಯದರ್ಶಿ ಬಂದಿದ್ದಾರೆ. ಅವರು ಈ ಬಗ್ಗೆ ಚರ್ಚೆ ಮಾಡ್ತಾರೆ. ಮುಂದಿನ ಚುನಾವಣೆಗೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಅಂತ ಇದೇ ವೇಳೆ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಆರ್ ವಿ ದೇಶಪಾಂಡೆ, ಕೆ ಜೆ ಜಾರ್ಜ್, ಪುಟ್ಟರಂಗಶೆಟ್ಟಿ, ಹ್ಯಾರೀಸ್, ತನ್ವೀರ್ ಸೇಠ್, ಎಚ್ ಎಂ ರೇವಣ್ಣ,ಸೋಮಶೇಖರ್ ರಾಜಶೇಖರ್ ಪಾಟೀಲ್, ಸಚಿವೆ ಜಯಮಾಲ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಐವಾನ್ ಡಿಸೋಜಾ, ಬಿಸಿ ಪಾಟೀಲ್, ಎಸ್ ಆರ್ ಪಾಟೀಲ್, ಶಿವಶಂಕರ್ ರೆಡ್ಡಿ, ಪ್ರಿಯಾಂಕ ಖರ್ಗೆ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

One thought on “ಕಾಂಗ್ರೆಸ್ ಸಿಎಲ್‍ಪಿ ಸಭೆ: ಏನೇನು ಚರ್ಚೆ ಆಯ್ತು? ಇನ್‍ಸೈಡ್ ಸ್ಟೋರಿ ಇಲ್ಲಿದೆ

Leave a Reply

Your email address will not be published. Required fields are marked *