Connect with us

ಸಿಡಿ ಕೇಸ್‌ – ಮಹಾನಾಯಕ ಆಯ್ತು, ಈಗ ಮಹಾನಾಯಕಿಯನ್ನು ಎಳೆದು ತಂದ ಬಿಜೆಪಿ

ಸಿಡಿ ಕೇಸ್‌ – ಮಹಾನಾಯಕ ಆಯ್ತು, ಈಗ ಮಹಾನಾಯಕಿಯನ್ನು ಎಳೆದು ತಂದ ಬಿಜೆಪಿ

ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಇನ್ನೊಂದು ಟ್ವಿಸ್ಟ್ ಕೂಡ ಸಿಕ್ಕಿದೆ. ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆಯಂತೆ ಮಹಾನಾಯಕ ಯಾರು ಎನ್ನುವ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಶುರುವಾಗಿದೆ.

ಜಾರಕಿಹೊಳಿ ಬ್ರದರ್ಸ್ ಹಲವು ಕಾರಣಗಳಿಂದ ಸಿಡಿ ಹಿಂದಿನ ಆ ಮಹಾನಾಯಕರ ಹೆಸರನ್ನು ಬಹಿರಂಗಪಡಿಸಲು ಹಿಂದೇಟು ಹಾಕಿದ್ದರೂ ಬಿಜೆಪಿ ಮಾತ್ರ ಪರೋಕ್ಷವಾಗಿ ಮಹಾನಾಯಕನ ಜೊತೆ ಮಹಾನಾಯಕಿಯ ಸುಳಿವನ್ನು ಬಿಟ್ಟುಕೊಟ್ಟಿದೆ. ಡಿಕೆ ಶಿವಕುಮಾರ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ ಹೇಳಿಕೆಗಳ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದೆ. ಇವರೇ ಮಹಾನ್ ನಾಯಕ, ನಾಯಕಿ ಎಂಬ ಸುದ್ದಿ ಹಬ್ಬಿದೆ ಎಂದು ಟ್ವೀಟಿಸಿದೆ.

ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಕೂಡ ತಾನೇನು ಕಮ್ಮಿ ಇಲ್ಲ ಎಂಬಂತೆ ಯತ್ನಾಳ್ ಹೇಳಿಕೆ ಆಧಾರದ ಮೇಲೆ ಬಿಎಸ್‍ವೈ ಮತ್ತು ವಿಜಯೇಂದ್ರರನ್ನು ಗುರಿಯಾಗಿಸಿಕೊಂಡು ಟ್ವೀಟೇಟು ನೀಡಿದೆ. ಇದ್ರಿಂದ ಎಸ್‍ಐಟಿ ತನಿಖೆಗೆ ಎಷ್ಟು ಅನುಕೂಲವಾಗುತ್ತೋ ಗೊತ್ತಿಲ್ಲ. ಆದರೆ ರಾಜ್ಯದ ಜನರಿಗಂತೂ ಪುಕ್ಕಟ್ಟೆ ಮನರಂಜನೆ ನೀಡಿದೆ.

ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಮಹಾನಾಯಕರು ಬಿಜೆಪಿಯಲ್ಲಿ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ. ಇದರಲ್ಲಿ ನಾನು ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವೇಳೆ, ಸುಮ್‍ಸುಮ್ನೆ ಯಾರನ್ನೋ ಸಿಲುಕಿಸೋ ತಂತ್ರ ಬೇಡ. ಇವರೇ ಮಹಾನಾಯಕ.. ಮಹಾನಾಯಕಿ ಎಂದು ಹೇಳುವುದು ಸರಿಯಲ್ಲ ಸರಿಯಲ್ಲ ಎಂದು ಎಂಎಲ್‍ಸಿ ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದೆ. ಮಹಾನಾಯಕ ಯಾರು ಎನ್ನುವುದು ತನಿಖೆ ಮೂಲಕ ಹೊರಬೀಳಲಿ ಎಂದು ವಿಶ್ವನಾಥ್ ಹೇಳಿದ್ದಾರೆ.

ಬಿಜೆಪಿ ಟ್ವೀಟ್ ನಂ.1 – ಸಿಡಿ ಘಟನೆಯ ಹಿಂದೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುವ ಭ್ರಷ್ಟಾಚಾರ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾ ನಾಯಕ ಕೂಡ ತನ್ನನ್ನು ಸಿಲುಕಿಸಲು ಕುತಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ.

ಬಿಜೆಪಿ ಟ್ವೀಟ್ ನಂ.2 – ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ. ಗೊತ್ತಾಗುತ್ತಿಲ್ಲ ಎಂದು ಮಹಾನಾಯಕಿಯೊಬ್ಬರು ಹೇಳಿದ್ದಾರೆ. ಏನಿದೆಲ್ಲಾ..? ಬೆಂಕಿ ಇಲ್ಲದೇ ಹೊಗೆಯಾಡುವುದೇ..? ಪಕ್ಷ ತೊರೆದವರ ವಿರುದ್ಧ ಕಾಂಗ್ರೆಸ್ ಹಗೆತನ ಸಾಧಿಸುತ್ತಿದೆ.

ಕಾಂಗ್ರೆಸ್ ಟ್ವೀಟ್ ನಂ.1 – ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಭ್ರಷ್ಟಾಚಾರ ಆರೋಪಿ ಮಹಾನಾಯಕ ಎನ್ನುತ್ತಾ ಬಿಎಸ್‍ವೈ ಅವರತ್ತ ಏಕೆ ಪರೋಕ್ಷವಾಗಿ ಗುರಿ ಇಡ್ತಿದ್ದೀರಿ? ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ ವಿಜಯೇಂದ್ರ ಸಿಡಿ ಫ್ಯಾಕ್ಟರಿ ಮೂಲಕ ಬ್ಲಾಕ್‍ಮೇಲ್ ಮಾಡಲಾಗುತ್ತಿದೆ ಎಂಬ ಮಾತನ್ನು ನೀವೂ ಪರೋಕ್ಷವಾಗಿ ಹೇಳುತ್ತಾ ಬಿಎಸ್‍ವೈ ಮುಕ್ತ ಬಿಜೆಪಿ ಅಭಿಯಾನ ಮುಂದುವರೆಸುತ್ತಿದ್ದೀರಾ?

ಕಾಂಗ್ರೆಸ್ ಟ್ವೀಟ್ ನಂ.2 – ನಿಮ್ಮ ಶ್ರೀನಿವಾಸ್ ಪ್ರಸಾದ್ ಹೇಳಿದಂತೆ ಇದು ವಾಮಮಾರ್ಗದ ಸರ್ಕಾರ. ನಿಮ್ಮವರೇ ಹೇಳಿದಂತೆ ಇದು ಬ್ಲಾಕ್‍ಮೇಲ್ ಸಂಪುಟ. ಹನಿಟ್ರ್ಯಾಪ್ ಮೂಲಕ ಆಪರೇಷನ್ ಕಮಲ. ಯತ್ನಾಳ್ ಹೇಳಿದಂತೆ ಬಿಎಸ್‍ವೈ ಫ್ಯಾಮಿಲಿ ಸರ್ಕಾರ. ಬಿಜೆಪಿಯವರೇ `ದಂಡ’ದ ಸರ್ಕಾರಕ್ಕೆ `ಮಾನ’ ಎಲ್ಲಿದೆ? ತಾಕತ್ತಿದ್ದರೇ ಆಪರೇಷನ್ ಕಮಲದ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಬನ್ನಿ.

Advertisement
Advertisement