Connect with us

Districts

ಮೈತ್ರಿ ಸರ್ಕಾರ ಕರಾವಳಿಗೆ ಮೋಸ ಮಾಡಲ್ಲ: ಸಿಎಂ ಎಚ್‍ಡಿಕೆ

Published

on

ಉಡುಪಿ: ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಕರಾವಳಿ ಭಾಗಕ್ಕೆ ಯಾವುದೇ ರೀತಿಯ ಮೋಸ ಮಾಡುವುದಿಲ್ಲವೆಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಕೆಡಿಪಿ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಉಡುಪಿ ಜಿಲ್ಲೆಯ ಜನರಿಗೆ ಮೈತ್ರಿ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ತಲುಪಿಸುತ್ತದೆ. ಈಗಾಗಲೇ ಕರಾವಳಿಯಲ್ಲಿ ಹೊಸ ಕೈಗಾರಿಕೆ ಸ್ಥಾಪನೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಪರಿಸರ ವಿರೋಧಿ ಕೈಗಾರಿಕೆಗಳನ್ನು ಜಿಲ್ಲೆಗೆ ತರುವುದಿಲ್ಲ. ಜಿಲ್ಲೆಯ ಎಲ್ಲಾ ಗ್ರಾಮಕ್ಕೆ ವಿದ್ಯುತ್ ಪೂರೈಕೆಯಾಗಬೇಕು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ವಿಚಾರವೂ ಸಹ ಚರ್ಚೆಯಾಗಿದೆ. ಕಾರ್ಖಾನೆ ಪ್ರಾರಂಭಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಕಬ್ಬು ಬೆಳೆಯುವವರು ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಸಭೆಯಲ್ಲಿ ಮೀನುಗಾರಿಕೆ ಹಾಗೂ ಮೊಗವೀರರ ಬಗ್ಗೆಯೂ ಸುದೀರ್ಘ ಚರ್ಚೆಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಮಹಿಳಾ ವಸತಿನಿಲಯ ಸ್ಥಾಪನೆಗೆ ಬೇಡಿಕೆ ಬಂದಿದ್ದು, ಈ ವರ್ಷವೇ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ನಾಡಿನ ಪ್ರತಿ ಕುಟುಂಬಕ್ಕೆ ನದಿ ನೀರು ಪೂರೈಕೆ ಮಾಡುವ ಯೋಜನೆ ಹೊಂದಿದ್ದೇವೆ. ಕೇವಲ ಕುಡಿಯಲು ಮಾತ್ರ ನದಿ ನೀರು ಉಪಯೋಗವಾಗಬೇಕು. ಈ ಬಗ್ಗೆ ರಾಜ್ಯಾದ್ಯಂತ ಡಿಪಿಆರ್ ಸಿದ್ದವಾಗುತ್ತಿದೆ. ಮೊದಲು ವರಾಹಿ ನೀರನ್ನು ಎಲ್ಲಾ ಕಡೆ ತಲುಪುವ ಕಾರ್ಯ ಆಗಬೇಕು. ಆದಾದ ನಂತರ ಕಾರ್ಖಾನೆ ಬಗ್ಗೆ ಯೋಚಿಸುತ್ತೇವೆ. ಜಿಲ್ಲೆಯಲ್ಲಿ ಅಕ್ರಮ ಮರಳಿನ ಬಗ್ಗೆ ಚರ್ಚೆಯಾಗಿದ್ದು, ಜಿಲ್ಲೆಯ ಎಲ್ಲಾ ಶಾಸಕರು, ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಹಿರಿಯ ಮಟ್ಟದ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಯೂ ಸಭೆ ಕರೆಯುತ್ತೇನೆ. ಮುಂದಿನ 10 ದಿನಗಳ ಒಳಗೆ ಕಾನೂನು ಕ್ರಮದಡಿ ಸೂಕ್ತ ತೀರ್ಮಾನ ಕೈಗೊಂಡು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುತ್ತೇನೆ ಎಂದು ಹೇಳಿದರು.

ಈ ವೇಳೆ ಮಳೆಯಿಂದಾದ ನಷ್ಟದ ಕುರಿತು ಮಾತನಾಡಿದ ಅವರು, ಕರಾವಳಿಯಲ್ಲಿ ಸುರಿದ ಭಾರೀ ಮಳೆಗೆ 141 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಪ್ರಾಥಮಿಕ ವರದಿ ನೀಡಿದ್ದಾರೆ. ಈಗಾಗಲೇ ಸರ್ಕಾರದಿಂದ 14 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ರಾಜಧಾನಿಗೆ ತೆರಳಿದ ನಂತರ ಪುನಃ 100 ಕೋಟಿ ರೂಪಾಯಿಗೆ ಬಿಡುಗಡೆ ಮಾಡುತ್ತೇನೆ. ರಾಜ್ಯದ ಜನರ ನಿರೀಕ್ಷೆ ಹುಸಿಯಾಗದಂತೆ ನಮ್ಮ ಸರ್ಕಾರ ಕೆಲಸ ಮಾಡುತ್ತದೆ ಎನ್ನುವ ಭರವಸೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv