Saturday, 24th August 2019

‘ಕಾಫಿ ಕಂಟಕ’: ಪಾಂಡ್ಯ, ರಾಹುಲ್‍ಗೆ ಬಿಸಿ ಮುಟ್ಟಿಸಿದ ವಿನೋದ್ ರಾಯ್

ಮುಂಬೈ: ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನೇಮಿಸಿರುವ ಬಿಸಿಸಿಐ ಆಡಳಿತ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ 2 ಪಂದ್ಯಗಳ ನಿಷೇಧ ಮಾಡುವಂತೆ ಶಿಫಾರಸ್ಸು ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು ಘಟನೆ ಕುರಿತು ಈಗಾಗಲೇ ಕ್ಷಮೆ ಕೋರಿದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಹೋರಾಟಗಾರರು ಸೇರಿದಂತೆ ಹಲವರು ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಕೂಡ 24 ಗಂಟೆಗಳಲ್ಲಿ ಉತ್ತರ ನೀಡುವಂತೆ ಆಟಗಾರರಿಗೆ ನೋಟಿಸ್ ಜಾರಿ ಮಾಡಿತ್ತು.

ಇದರಿಂದ ತೃಪ್ತರಾಗದ ವಿನೋದ್ ರಾಯ್ ಆಟಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಶಿಫಾರಸ್ಸು ಮಾಡಿದ್ದಾರೆ. ಇದರೊಂದಿಗೆ ಸಮಿತಿಯ ಸದಸ್ಯರಾದ ಡಯಾನಾ ಎಡುಲ್ಜಿ ಅವರಿಗೆ ಪ್ರಕರಣ ಶಿಸ್ತುಕ್ರಮ ಕೈಗೊಳ್ಳುವ ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ಇದರಂತೆ ಬಿಸಿಸಿಐ ಕಾನೂನು ಸಮಿತಿ ತೆಗೆದುಕೊಳ್ಳುವ ನಿರ್ಧಾರ ಮೇಲೆ ಇಬ್ಬರು ಆಟಗಾರರ ಮೇಲೆ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.

ಪಾಂಡ್ಯರ ಕ್ಷಮಾಪಣೆಗೆ ಕ್ಷಮಾಪಣೆಗೆ ವಿನೋದ್ ರಾಯ್ ತೃಪ್ತಿಗೊಳ್ಳದಿದ್ದರೆ, ಕೆಎಲ್ ರಾಹುಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುವುದರ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ. ಆದರೆ ಶಿಸ್ತು ಸಮಿತಿಯಲ್ಲಿ ಕಾರ್ಯಕ್ರಮದ ವಿಡಿಯೋ ಪರಿಶೀಲನೆ ನಡೆಸಿದ ಬಳಿಕ ಇಬ್ಬರು ಆಟಗಾರರ ಮೇಲೆ ಏಕರೂಪ ಕ್ರಮಕೈಗೊಳ್ಳಬೇಕಾ? ಅಥವಾ ಇಬ್ಬರಿಗೂ ಪ್ರತ್ಯೇಕ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಜೋಹ್ರಿ ಅವರು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಇಬ್ಬರು ಆಟಗಾರರ ಮೇಲೆ ನಿಷೇಧ ಭೀತಿ ಎದುರಾಗಿದೆ.

ಬಾಲಿವುಡ್‍ನ ಕರಣ್ ಜೋಹರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಭಾಗವಹಿಸಿ ಮಾತನಾಡಿದ್ದರು. ಈ ವೇಳೆ ಕೇಳಿದ ಪ್ರಶ್ನೆಗಳಿಗೆ ಮನಸ್ಸಿಗೆ ಬಂದಂತೆ ಹಿಂದೆ ಮುಂದೆ ನೋಡದೆ ಇಬ್ಬರು ಆಟಗಾರರು ಉತ್ತರಿಸಿ ಸಾರ್ವಜನಿಕವಾಗಿ ಭಾರೀ ಆಕ್ರೋಶ ವ್ಯಕ್ತವಾಗಲು ಕಾರಣರಾಗಿದ್ದರು. ತಮ್ಮ ಮಾತಿನ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದಂತೆ ಎಚ್ಚೆತ್ತುಕೊಂಡಿರುವ ಹಾರ್ದಿಕ್ ಪಾಂಡ್ಯ, ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ್ದರು. ಅಲ್ಲದೇ ಇದರಿಂದ ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆ ಕೋರುತ್ತೇನೆ. ನನ್ನ ಮಾತಿನಲ್ಲಿ ಯಾರ ಮನಸ್ಸಿಗೂ ನೋವುಂಟು ಮಾಡುವ ಅಥವಾ ಯಾರಿಗೂ ಅಗೌರವ ತೋರುವ ಉದ್ದೇಶ ಇರಲಿಲ್ಲ ಎಂದು ತಿಳಿಸಿದ್ದರು.

ಸಚಿನ್ ಹಾಗೂ ಕೊಹ್ಲಿ ಇಬ್ಬರಲ್ಲಿ ಯಾರು ಬೆಟರ್ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಹಾರ್ದಿಕ್ ಹಾಗೂ ಕೆಎಲ್ ರಾಹುಲ್ ಹಿಂದು ಮುಂದು ನೋಡದೇ ಕೊಹ್ಲಿ ಎಂದು ಉತ್ತರಿಸಿದ್ದರು. ಅಲ್ಲದೇ ಮಹಿಳೆಯರು ಹಾಗೂ ಸೆಕ್ಸ್ ಜೀವನದ ಬಗ್ಗೆ ಕೇಳಿದ ಪ್ರಶ್ನೆಯ ಬಗ್ಗೆ ಕ್ಷಣ ಕಾಲ ಕೂಡ ಯೋಚಿಸದೇ ಹಾರ್ದಿಕ್ ಉತ್ತರಿಸಿದ್ದರು. ಇದರಿಂದ ಹಲವು ಕ್ರಿಕೆಟ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹಾರ್ದಿಕ್ ವಿರುದ್ಧ ಟೀಕೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *