Connect with us

Latest

ಹತ್ರಾಸ್ ಗ್ಯಾಂಗ್‍ರೇಪ್ ಪ್ರಕರಣ ಸಿಬಿಐಗೆ ವರ್ಗಾವಣೆ

Published

on

ಲಕ್ನೋ: ಹತ್ರಾಸ್ ಪ್ರದೇಶದ ದಲಿತ ಯುವತಿ ಮೇಲಿನ ಗ್ಯಾಂಗ್‍ರೇಪ್ ಪ್ರಕರಣವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಿಬಿಐಗೆ ವರ್ಗಾಯಿಸಿದ್ದಾರೆ.

ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮೂಲಕ ಈ ಮಾಹಿತಿಯನ್ನು ಖಚಿತ ಪಡಿಸಿದೆ. ವಿಪಕ್ಷಗಳು ಸೇರಿದಂತೆ ದೇಶದ ಜನತೆ ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಯಬೇಕೆಂದು ಆಗ್ರಹಿಸಿದ್ದವು. ಆದ್ರೆ ಸಂತ್ರಸ್ತೆಯ ಕುಟುಂಬಸ್ಥರು ಸಿಬಿಐ ತನಿಖೆಗೆ ಆಗ್ರಹಿಸಿರಲಿಲ್ಲ ಎಂದು ವರದಿಯಾಗಿದೆ.

ಇಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಹತ್ರಾಸ್ ಗ್ರಾಮಕ್ಕೆ ತೆರಳಿ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಈ ವೇಳೆ ರಾಹುಲ್ ಗಾಂಧಿ ಕುಟುಂಬಸ್ಥರ ಜೊತೆ ಮಾತನಾಡುವಾಗ, ಸಿಬಿಐ ತನಿಖೆಗೆ ಆಗ್ರಹಿಸುವ ಕುರಿತು ಮಾತನಾಡಿದ್ದರು. ಆದ್ರೆ ಸಂತ್ರಸ್ತೆಯ ಕುಟುಂಬಸ್ಥರು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನು ಭೇಟಿ ವೇಳೆ ರಾಹುಲ್ ಗಾಂಧಿ ಸಂತ್ರಸ್ತೆಯ ಕುಟುಂಬಕ್ಕೆ ಚೆಕ್ ನೀಡಿದ್ದಾರೆ ಎನ್ನಲಾಗಿದೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಆಗಮನ ಹಿನ್ನೆಲೆ ಸಂತ್ರಸ್ತೆ ಮನೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಮುಂಜಾಗ್ರತ ಕ್ರಮವಾಗಿ ಪೊಲೀಸರು ನಾಯಕರ ಆಗಮನ ಮತ್ತು ನಿರ್ಗಮನಕ್ಕಾಗಿ ತಾತ್ಕಲಿಕ ಮಾರ್ಗ ನಿರ್ಮಿಸಿದ್ದಾರೆ. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರೇ ಕೊಠಡಿಯಲ್ಲಿ ನಾಯಕರ ಭೇಟಿಗೆ ಪೊಲೀಸರು ಅವಕಾಶ ಕಲ್ಪಿಸಿದ್ದರು.

ಅಕ್ಟೋಬರ್ 1ರಂದು ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಂತ್ವಾನ ಹೇಳಲು ಮುಂದಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಗ್ರೇಟರ್ ನೋಯ್ಡಾ ಬಳಿಯೇ ತಡೆದ ಪೊಲೀಸರು ಬಳಿಕ ವಶಕ್ಕೆ ಪಡೆದಿದ್ದರು.

ಪ್ರಕರಣ ಸಿಬಿಐಗೆ ವರ್ಗಾವಣೆಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಸಂತ್ರಸ್ತೆಯ ಸೋದರ, ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ನಮ್ಮ ಆಪೇಕ್ಷೆ ಆಗಿತ್ತು. ಆದ್ರೆ ಸಿಬಿಐ ತನಿಖೆಗೂ ನಮ್ಮ ಸಮ್ಮತಿ ಇದೆ ಎಂದು ಹೇಳಿದ್ದಾರೆ. ಈ ಮೊದಲು ಉತ್ತರ ಪ್ರದೇಶ ಸರ್ಕಾರ ತನಿಖೆಯ ಜವಾಬ್ದಾರಿಯನ್ನು ಎಸ್‍ಐಟಿಗೆ ನೀಡಿತ್ತು. ಕಳೆದ ಎರಡ್ಮೂರು ದಿನಗಳಿಂದ ಸಂತ್ರಸ್ತೆಯ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಎಸ್‍ಐಟಿ ತಂಡ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿತ್ತು.

Click to comment

Leave a Reply

Your email address will not be published. Required fields are marked *