Bengaluru City
ನನ್ನ ಕೈ ಬಿಟ್ರೆ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದಂತೆ: ಸಚಿವ ಕೆ. ನಾಗೇಶ್

ಬೆಂಗಳೂರು: ನನ್ನನ್ನು ಸಂಪುಟದಿಂದ ಕೈ ಬಿಟ್ಟರೆ ನಮ್ಮ ಸಮುದಾಯಕ್ಕೆ ಅನ್ಯಾಯವಾದಂತೆ ಎಂದು ಅಬಕಾರಿ ಸಚಿವ ಕೆ.ನಾಗೇಶ್ ಹೇಳಿದ್ದಾರೆ.
ಸಂಪುಟ ರಚನೆಯ ವಿಸ್ತರಣೆಯ ಹೊತ್ತಿನಲ್ಲಿ ಕೆಲವು ಹಾಲಿ ಸಚಿವರನ್ನು ಕೈ ಬಿಡುವಂತಹ ಮಾತುಗಳು ಕೇಳಿ ಬರುತ್ತಿದ್ದು, ಅದರಲ್ಲಿ ಸಚಿವ ಕೆ. ನಾಗೇಶ್ ಅವರ ಹೆಸರು ಮೂಂಚೂಣಿಯಲ್ಲಿ ಕೇಳಿಬರುತ್ತಿದೆ. ಈ ಕುರಿತಂತೆ ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಾಗೇಶ್, 7 ಸಚಿವ ಸ್ಥಾನಗಳು ಖಾಲಿ ಇದೆ. ಹಾಗಾಗಿ 7 ಜನರಿಗೆ ಸಚಿವ ಸ್ಥಾನ ನೀಡಬಹುದು. ಅವರು ಮನಸ್ಸು ಮಾಡಿದರೆ ನನ್ನನ್ನಾಗಲಿ ಬೇರೆಯವರನ್ನಾಗಲಿ ಸಂಪುಟದಿಂದ ಕೈಬಿಡುವ ಸಂದರ್ಭ ಬರುವುದಿಲ್ಲ ಎಂದರು.
ನಿನ್ನೆ ಸಿಎಂ ಬಿಎಸ್ವೈರವರನ್ನು ಭೇಟಿಯಾದಾಗ 3 ರಿಂದ ನಾಲ್ಕು ಜನರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆಗಳಿದೆ ಎಂದು ತಿಳಿಸಿದ್ದಾರೆ. ಸಂಪುಟದಿಂದ ಯಾರನ್ನು ಕೈ ಬಿಡಲಾಗುತ್ತಿದೆ ಎನ್ನುವುದರ ಕುರಿತಂತೆ ಯಾವುದೇ ಮಾಹಿತಿ ನೀಡಿಲ್ಲ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಯಾರನ್ನು ಬಿಡಬೇಕೆಂದು ದೆಹಲಿಯಿಂದ ಪಟ್ಟಿ ಬರುತ್ತದೆ ಹಾಗಾಗಿ ಇಂದು ಸಂಜೆಯವರೆಗೂ ಕಾದು ನೋಡಿ ಬಿಎಸ್ವೈ ಎಂದಿದ್ದಾರೆ. ಹಾಗಾಗಿ ಇಲ್ಲಿಯವರೆಗೂ ನನಗೆ ಯಾವುದೇ ಮಾಹಿತಿ ಬಂದಿಲ್ಲ.
ಸಿಎಂ ಬಿಎಸ್ ಯಡಿಯೂರಪ್ಪನವರು ನನ್ನ ಕೈ ಬಿಡುವುದಿಲ್ಲ ಎಂಬುವ ಸಂಪೂರ್ಣ ಭರವಸೆ ಇದೆ. ಸರ್ಕಾರ ರಚನೆಗೆ ಮುಖ್ಯ ಕಾರಣ ನಾನು. ಅಂದು ಮಂತ್ರಿ ಪದವಿ ತ್ಯಜಿಸಿ ನನ್ನ ಸ್ನೇಹಿತರೊಂದಿಗೆ ಮುಂಬೈಗೆ ಹೋಗಿದ್ದೆ. ನಾವು 17 ಜನರು ಇದ್ದರಿಂದ ಇಂದು ಸರ್ಕಾರ ರಚನೆಯಾಗಿದೆ. ಹೀಗಿರುವಾಗ ನನ್ನನ್ನು 15 ತಿಂಗಳಲ್ಲಿ ಸಂಪುಟದಿಂದ ಕೈ ಬಿಡುವ ತೀರ್ಮಾನ ಮಾಡುವುದಿಲ್ಲ ಎಂಬ ವಿಶ್ವಾಸ ಇಂದಿಗೂ ನನಗೆ ಇದೆ ಎಂದು ಹೇಳಿದರು.
ನಾನೂ ಈಗ ಬಿಜೆಪಿ ಪಕ್ಷದವನೇ ಆಗಿದ್ದೇನೆ. ಕೋಲಾರದಲ್ಲಿ ಬಿಜೆಪಿ ಗೆಲ್ಲಿಸುವುದು ಸುಲಭದ ಕೆಲಸವಲ್ಲ. ಸಂಪುಟದಿಂದ ನನ್ನ ಕೈ ಬಿಟ್ಟರೆ ನಮ್ಮ ಸಮುದಾಯಕ್ಕೆ ಅನ್ಯಾಯ ಆಗುತ್ತದೆ. ನಮ್ಮ ಸಮುದಾಯದವರು ಬಹಳ ಜನ ಇದ್ದಾರೆ ಎಂದು ಪರೋಕ್ಷವಾಗಿ ಸಮುದಾಯದ ಎಚ್ವರಿಕೆ ನೀಡಿದರು. ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಇಂದು ವಿಧಾನ ಸೌಧದಲ್ಲಿ ಕ್ಯಾಬಿನೆಟ್ ಸಭೆ ಇದೆ. ಇಂದು ಸಿಎಂ ರನ್ನು ಭೇಟಿ ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.
