Tuesday, 22nd October 2019

ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ – ಪ್ರವಾಹದ ಸಂಪೂರ್ಣ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿಎಸ್‍ವೈ, ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಮತ್ತು ನಮ್ಮ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಆಸ್ತಿ- ಪಾಸ್ತಿ ಸೇರಿದಂತೆ ಸಾಕಷ್ಟು ನಷ್ಟವಾಗಿದೆ. ರಾಜ್ಯದ ಸುಮಾರು ಅರ್ಧ ಭಾಗ ವರುಣನ ರುದ್ರನರ್ತನಕ್ಕೆ ಬಲಿಯಾಗಿದೆ. ಕಳೆದ 45 ವರ್ಷದಲ್ಲಿ ಇಷ್ಟು ದೊಡ್ಡ ಭೀಕರ ಪ್ರವಾಹವನ್ನು ರಾಜ್ಯ ಕಂಡಿರಲಿಲ್ಲ ಎಂದು ಹೇಳಿದರು.

ಪ್ರವಾಹದ ಮಾಹಿತಿ:
ಈವರೆಗೆ 16 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಇದರಿಂದ 24 ಜನ ಮೃತಪಟ್ಡಿದ್ದಾರೆ. ಈಗಾಗಲೇ ಮೃತ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ 80 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿದ್ದೇವೆ. ಒಟ್ಟು 1,024 ಗ್ರಾಮಗಳು ಮಳೆ ಮತ್ತು ಪ್ರವಾಹದ ಭೀಕರತೆಯನ್ನು ಎದುರಿಸುತ್ತಿವೆ. 2.35 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. 220 ಜಾನುವಾರುಗಳ ಸಾನ್ನಪ್ಪಿದ್ದು, 44 ಸಾವಿರ ಜಾನುವಾರಗಳನ್ನು ಸ್ಥಳಾಂತರ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 624 ಪರಿಹಾರ ಕೇಂದ್ರಗಳ ತೆರೆಯಲಾಗಿದೆ ಎಂದರು. ಪರಿಹಾರ ಕೇಂದ್ರದಲ್ಲಿ 1.57 ಲಕ್ಷಕ್ಕೂ ಹೆಚ್ಚ ಜನ ಆಶ್ರಯ ಮಾಡುತ್ತಿದ್ದಾರೆ. ಅವರಿಗೆ ಬೇಕಾದ ಎಲ್ಲ ಸೌಲಭ್ಯವನ್ನು ಒದಗಿಸಲಾಗಿದೆ. 3.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 12,651 ಮನೆಗಳು ಸಂಪೂರ್ಣ ಹಾನಿಯಾಗಿದೆ ಎಂದು ಸಿಎಂ ಬಿಎಸ್‍ವೈ ಅವರು ತಿಳಿಸಿದರು.

ಮಂಗಳೂರಿಗೆ ರೈಲು ಮತ್ತು ರಸ್ತೆ ಸಂಪರ್ಕ ಕಡಿದುಹೋಗಿದೆ. ಇತ್ತ ಕೊಡಗಿನಲ್ಲಿ ಭೂಕುಸಿತ ಉಂಟಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಮೂರು ತಂಡಗಳಾಗಿ ಶಾಸಕರು ತೆರಳಿದ್ದಾರೆ. ಬೆಳಗಾವಿ, ಧಾರವಾಡ, ಗದಗ, ಚಿಕ್ಕೋಡಿ, ಬಾಗಲಕೋಟೆ, ಕೂಡಲಸಂಗಮ, ಬಾದಾಮಿ ಸೇರಿದಂತೆ ಅನೇಕ ಕಡೆ ಭೇಟಿ ನೀಡಿದ್ದೇನೆ. ಈಗಾಗಲೇ ನದಿ ತೀರದ ಜನರಿಗೆ ಎಚ್ಚರಿಕೆ ಕೊಡಲಾಗಿದೆ. ಹೇಮಾವತಿ ಮತ್ತು ತುಂಗಭದ್ರಾ ನದಿಗಳಲ್ಲೂ ಹೆಚ್ಚುವರಿ ನೀರು ಹರಿಸಲು ನಿರ್ಧಾರ ಆಗಿದೆ. ಜಲಾಶಯಗಳಿಗೆ ಹೆಚ್ವುವರಿ ಒಳಹರಿವು ಬರುತ್ತಿದೆ. ಆದ್ದರಿಂದ ಹೊರ ಹರಿವು ಹೆಚ್ಚಿಸಲಾಗಿದೆ ಎಂದರು.

ಕೇಂದ್ರ ಸರ್ಕಾರ ಸಕಾಲಕ್ಕೆ ಸ್ಪಂದಿಸಿದೆ. ವಾಯು, ಭೂ, ನೌಕಾ ಪಡೆಗಳ ಸಿಬ್ಬಂದಿ ತುರ್ತು ಕಾರ್ಯಾಚರಣೆಗೆ ಇಳಿದಿವೆ. ವಾಯುಪಡೆಯ ನಾಲ್ಕು ಹೆಲಿಕಾಪ್ಟರ್‌ಗಳು, ಅಗ್ನಿಶಾಮಕ ದಳ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಪಕ್ಷಾತೀತವಾಗಿ ಶಾಸಕರು, ಸಂಸದರ ತಂಡಗಳು ವಾಸ್ತವ ಸ್ಥಿತಿ ಅರಿತುಕೊಂಡು ಕಾರ್ಯಾಚರಣೆ ಮಾಡುತ್ತಿದ್ದಾರೆ. ಯಾರೂ ಧೈರ್ಯಗುಂದುವ ಅಗತ್ಯ ಇಲ್ಲ. ರಾಜ್ಯ, ಕೇಂದ್ರ ಸರ್ಕಾರಗಳ ನೆರವು ಕೊಡಲು ಸಿದ್ಧ ಇವೆ. ಎಷ್ಟೇ ಖರ್ಚಾದರೂ ಸಂತ್ರಸ್ತರಿಗೆ ಸುರಕ್ಷತೆ ಮತ್ತು ಪುನರ್ವಸತಿ ಕಲ್ಪಿಸಿ ಕೊಡುತ್ತೇವೆ ಎಂದರು.

ಪರಿಹಾರ ನಿಧಿ:
ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನ 150 ಕೋಟಿ ರೂ. ಕೊಡುವುದಾಗಿ ಫೋಷಿಸಿದ್ದಾರೆ. ಬೇರೆ ಬೇರೆ ನಿಗಮ ಮಂಡಳಿಯಿಂದ 50 ಕೋಟಿ ಕೊಡುತ್ತೇವೆ ಎಂದಿದ್ದಾರೆ. ಸುಧಾಮೂರ್ತಿ ಅವರು 10 ಕೋಟಿ ರೂ. ಕೊಟ್ಟಿದ್ದಾರೆ. ಪೊಲೀಸ್ ಮತ್ತು ಸಾರಿಗೆ ಇಲಾಖೆ ಒಂದು ದಿನ ಸಂಬಳವನ್ನು ಕೊಡಲು ಒಪ್ಪಿದ್ದಾರೆ. ಹಾಲು ಉತ್ಪಾದಕ ಘಟಕದಿಂದ 1 ಕೋಟಿ ರೂ. ಕೊಟ್ಟಿದ್ದಾರೆ. ಶಾಸಕರ ಕ್ಷೇಮಾಭಿವೃದ್ದಿ ನಿಧಿಯಿಂದ 2 ಕೋಟಿ ರೂ. ಕೊಡಲಾಗಿದೆ. ಹೀಗೆ ಅನೇಕರು ಅವರ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ ಎಂದು ಸಿಎಂ ಬಿಎಸ್‍ವೈ ಅವರು ತಿಳಿಸಿದರು.

Leave a Reply

Your email address will not be published. Required fields are marked *