Tuesday, 25th February 2020

ಇಂದಿರಾ ಕ್ಯಾಂಟೀನ್ ಅವ್ಯವಹಾರ- ಸಿಬಿಐ ತನಿಖೆಗೆ ಸಿಎಂ ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೆ ತಡ ಬಿಬಿಎಂಪಿ ಬಜೆಟ್, ವೈಟ್ ಟ್ಯಾಪಿಂಗ್ ಮತ್ತು ಟೆಂಡರ್ ಶ್ಯೂರ್ ಕಾಮಗಾರಿಗಳ ತನಿಖೆಗೆ ಒಪ್ಪಿಸಲಾಗಿದೆ. ಈಗ ಇಂದಿರಾ ಕ್ಯಾಂಟೀನ್ ಸರದಿ ಎಂಬ ಮಾತು ಹರಿದಾಡುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಗರಣ ಆರೋಪವಿರುವ ಎಲ್ಲ ಯೋಜನೆಗಳನ್ನ ತನಿಖೆಗೆ ಒಪ್ಪಿಸುತ್ತಿದ್ದಾರೆ. ಈ ಸಾಲಿಗೆ ಇಂದಿರಾ ಕ್ಯಾಂಟೀನ್ ಸಹ ಶೀಘ್ರವೇ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇಂದಿರಾ ಕ್ಯಾಂಟೀನ್ ಬಡವರ ಹೊಟ್ಟೆ ತುಂಬಿಸುವುದರ ಬದಲು ಉಳ್ಳವರ ಖಜಾನೆ ತುಂಬಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಪರಮೇಶ್ವರ್ ಹಾಗೂ ಮಾಜಿ ಸಚಿವ ಕೆ.ಜೆ ಜಾರ್ಜ್ ಯೋಜನೆ ಹೆಸರಲ್ಲಿ ಕೋಟಿ ಲೂಟಿ ಹೊಡೆದಿದ್ದಾರೆ ಎಂಬ ಆರೋಪವಿದೆ.

ವಿಪಕ್ಷ ಕಾಂಗ್ರೆಸ್ ನಾಯಕರು ಅವರ ಅಧಿಕಾರದಲ್ಲಿದ್ದಾಗ ನಡೆದಿದೆ ಎನ್ನಲಾದ ಅಕ್ರಮವನ್ನು ತನಿಖೆಗೆ ಒಳಪಡಿಸುವ ಮೂಲಕ ರಾಜಕೀಯವಾಗಿ ಕಟ್ಟಿಹಾಕುವ ಪ್ಲ್ಯಾನ್ ನಡೆಯುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 189 ಇಂದಿರಾ ಕ್ಯಾಂಟೀನ್‍ನಲ್ಲಿ ಒಂದಕ್ಕೆ ಹತ್ತು ಪಟ್ಟು ಅಂಕಿ ಅಂಶ ತೋರಿಸಿ ಕೋಟ್ಯಂತರ ರೂಪಾಯಿಯ ಸಬ್ಸಿಡಿ ಹಣದ ಹಗಲು ದರೋಡೆ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಚರ್ಚಿಸುತ್ತಿದೆ. ಉನ್ನತ ಮಟ್ಟದ ಅಥವಾ ಸಿಐಡಿ ತನಿಖೆ ನಡೆಸುವ ಬಗ್ಗೆ ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಅವರ ದೂರು ಸೇರಿದಂತೆ ಸಾರ್ವಜನಿಕವಾಗಿ ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಗೆ ಮುಂದಾಗುವ ಸಂಭವ ಇದೆ.

ಇಂದಿರಾ ಕ್ಯಾಂಟಿನ್ ಕಟ್ಟಡ ನಿರ್ಮಾಣದ ಗೋಲ್ ಮಾಲ್ ಮಾಹಿತಿ:
* ಮಾಜಿ ಸಿಎಂ ಸಿದ್ದರಾಮಯ್ಯ 2017 ರಲ್ಲಿ 198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸರ್ಕಾರ ಆದೇಶ ನೀಡಲಾಗಿತ್ತು.
* ತಮಿಳುನಾಡು ಮೂಲದ ಎಂ/ಎಸ್ ಇನ್‍ಪ್ರಸ್ಟ್ರಕ್ಚರ್ ಫ್ರೈ ಲಿಮಿಟೆಡ್‍ಗೆ ಕ್ಯಾಂಟೀನ್ ನಿರ್ಮಾಣ ಗುತ್ತಿಗೆ
* ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಒಟ್ಟು 72 ಕೋಟಿ 90 ಲಕ್ಷ ವೆಚ್ಚ
* ಪ್ರತಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ತಲಾ 28.50 ಲಕ್ಷ
* 198 ಕ್ಯಾಂಟೀನ್‍ಗೆ ಒಟ್ಟು 56.3 ಕೋಟಿ ವೆಚ್ಚ
* ಅಡುಗೆ ಮನೆ ನಿರ್ಮಾಣಕ್ಕೆ 16.47 ಕೋಟಿ.
* ಕ್ಯಾಂಟೀನ್, ಅಡುಗೆ ಮನೆ ಅಗತ್ಯ ಸಲಕರಣೆಗಳಿಗೆ 14 ಕೋಟಿ 53 ಲಕ್ಷ ಬಿಡುಗಡೆ
* 900 ಚ.ಅಡಿ ವಿಸ್ತೀರ್ಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ.

ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ ಹಗರಣದ ದೂರು ಸದ್ಯ ಎಸಿಬಿ, ಲೋಕಾಯುಕ್ತ, ಬಿಎಂಟಿಎಫ್ ಅಂಗಳದಲ್ಲಿದೆ. ಕಟ್ಟಡ ಕೆಲಸಕ್ಕೆ ಮುನ್ನ ಸರ್ಕಾರ ಹಣ ಬಿಡುಗಡೆ ಮಾಡಿತ್ತು. 198 ಕ್ಯಾಂಟೀನ್ ಗಳಲ್ಲಿ 174 ಕ್ಯಾಂಟೀನ್ ಮಾತ್ರ ನಿರ್ಮಾಣವಾಗಿದೆ. 27 ಅಡುಗೆ ಮನೆ ನಿರ್ಮಿಸಬೇಕಿದ್ದ ಸಂಸ್ಥೆ 19 ಅಡುಗೆ ಮನೆ ಮಾತ್ರ ನಿರ್ಮಿಸಿದೆ. 24 ಕ್ಯಾಂಟೀನ್, 8 ಅಡುಗೆ ಮನೆ ನಿರ್ಮಾಣ ಬಾಕಿ ಇದ್ದರೂ ಹೆಚ್ಚುವರಿಯಾಗಿ 11 ಕೋಟಿ 72 ಲಕ್ಷ ಹಣ ಈಗಾಗಲೇ ಸಂಸ್ಥೆಗೆ ಬಿಡುಗಡೆಯಾಗಿದೆ.

ಇಂದಿರಾ ಕ್ಯಾಂಟೀನ್ ಯೋಜನೆ ಆರಂಭವಾಗಿ ಎರಡು ವರ್ಷಗಳು ಕಳೆದಿವೆ. ಆದರೆ ಯೋಜನೆ ಆರಂಭದಿಂದಲೂ ಸಾಕಷ್ಟು ವಿವಾದಗಳು ಸೃಷ್ಟಿ ಆಗುತ್ತಿವೆ. ಆರಂಭದಲ್ಲಿ ಕ್ಯಾಂಟೀನ್ ನಿರ್ಮಾಣದಲ್ಲಿ 9 ಲಕ್ಷದಲ್ಲಿ ನಿರ್ಮಿಸಬಹುದಾದ ಕಟ್ಟಡಕ್ಕೆ 28 ಲಕ್ಷ ವೆಚ್ಚ ಮಾಡಿದ ಆರೋಪ ಕೇಳಿಬಂದಿತ್ತು. ಬಳಿಕ ಶೆಫ್ ಟಾಕ್ ಮತ್ತು ರಿವಾರ್ಡ್ ಎಂಬ ಗುತ್ತಿಗೆ ಪಡೆದ ಎರಡು ಸಂಸ್ಥೆಗಳು ಸರ್ಕಾರದಿಂದ ಅಕ್ರಮವಾಗಿ ಸಬ್ಸಿಡಿ ಪಡೆಯುತ್ತಿವೆ ಎಂದು ದಾಖಲೆ ಸಹಿತ ದೂರಿನ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿದ್ದವು.

ಅದರಲ್ಲೂ ಮುಖ್ಯವಾಗಿ ಊಟ, ತಿಂಡಿ ಲೆಕ್ಕದಲ್ಲಿ ನೀಡುತ್ತಿರುವ ಇಂಡೆಂಟ್‍ಗಳ ದಾಖಲೆಗಳಂತೆ ಪ್ರತೀ ತಿಂಗಳು ಗ್ರಾಹಕರಿಂದ ಸಂಗ್ರಹಿಸುತ್ತಿರುವ ಮೊತ್ತ ಸರಾಸರಿ 4,69,92,900 ರೂಪಾಯಿ ಆಗಿದೆ. ಹಾಗೆಯೇ ಪ್ರತೀ ತಿಂಗಳೂ ಬಿಬಿಎಂಪಿ ಮೂಲಕ ಸರ್ಕಾರದಿಂದ ಇವುಗಳು ಪಡೆಯುತ್ತಿರುವ ಸಬ್ಸಿಡಿ ಮೊತ್ತವು ಸುಮಾರು 6,82,81,373 ರೂಪಾಯಿ ಇದೆ. ಈ ಅಂಕಿ ಅಂಶಗಳ ಲೆಕ್ಕ ಸಂಶಯಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ವರ್ಷಗಳ ಹಿಂದೆ ಬಿಜೆಪಿ ತನಿಖೆಗೆ ಒತ್ತಾಯಿಸಿತ್ತು. ಆ ವಿಚಾರ ಇದೀಗ ಪಾಲಿಕೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆದ 60ಕ್ಕೂ ಹೆಚ್ಚು ಅಕ್ರಮಗಳ ಬಗ್ಗೆ ಬಿಜೆಪಿ ಸರ್ಕಾರ ತನಿಖೆಗೆ ಮುಂದಾಗಿದೆ. ಅದರಲ್ಲಿ ಮುಖ್ಯವಾಗಿ ಇಂದಿರಾ ಕ್ಯಾಂಟೀನ್‍ನಲ್ಲಾದ ಅಕ್ರಮದ ಬಗ್ಗೆಯೂ ತನಿಖೆ ನಡೆಸಲು ಸಿಎಂ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *