Connect with us

Bengaluru City

ಶರತ್ ಬಚ್ಚೇಗೌಡ ಮನವೊಲಿಕೆ ಫೇಲ್- ಬಿಜೆಪಿಯಿಂದ ಉಚ್ಛಾಟಿಸಲು ಮುಂದಾದ ಸಿಎಂ

Published

on

– ಸಂಜೆಯೊಳಗೆ ನಿಗಮ ಮಂಡಳಿ ತ್ಯಜಿಸಲು ಡೆಡ್‍ಲೈನ್

ಬೆಂಗಳೂರು: ಹೊಸಕೋಟೆಯಲ್ಲಿ ರಾಜಕೀಯ ರಣಕಣ ರಂಗೇರುತ್ತಿದೆ. ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಮನವೊಲಿಕೆಗೆ ಸಿಎಂ ಯಡಿಯೂರಪ್ಪ ಯತ್ನಿಸಿದರೂ ವಿಫಲವಾಗಿದ್ದು, ಬಿಜೆಪಿಯಿಂದ ಶರತ್ ಉಚ್ಛಾಟನೆ ಫಿಕ್ಸ್ ಎನ್ನುವಂತೆ ಸಿಎಂ ಮಾತನಾಡಿದ್ದಾರೆ.

ಶರತ್ ಬಚ್ಚೇಗೌಡ ಸೋಲುತ್ತಾರೆ, ಎಂಟಿಬಿ ನಾಗರಾಜ್ ಗೆದ್ದೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಲ್ಲಿ ಸಿಎಂ ಇದ್ದು, ಶರತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ಸಂಜೆಯೊಳಗೆ ಶರತ್ ನಿಗಮ ಮಂಡಳಿ ತ್ಯಜಿಸಬೇಕು ಎಂದು ಸಿಎಂ ಆದೇಶಿಸಿದ್ದಾರೆ. ಈ ನಡುವೆ ಶರತ್ ಬಚ್ಚೇಗೌಡ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಪಕ್ಷದಿಂದ ಶರತ್ ಅವರ ಉಚ್ಛಾಟನೆ ಮಾಡಲಾಗುತ್ತದೆ ಎನ್ನುವಂತೆ ಸಿಎಂ ಹೇಳಿಕೆ ಕೊಟ್ಟಿದ್ದಾರೆ.

ಹೊಸಕೋಟೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರುವ ಶರತ್ ಬಚ್ಚೇಗೌಡ ಅವರು ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿಕೊಟ್ಟಿದ್ದಾರೆ. ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶರತ್ ಅವರು ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ಹಾಗೆಯೇ ಕೆಲ ಕಾಲ ಸ್ವಾಮೀಜಿಯೊಂದಿಗೆ ಮಾತುಕತೆಯನ್ನು ಕೂಡ ನಡೆಸಿದ್ದಾರೆ.

ಉಪಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನು ಸೋಮವಾರದಿಂದ ಆರಂಭ ಮಾಡಲಿರುವ ಸಿಎಂ ಬಿಎಸ್‍ವೈ, ಮೊದಲು ಅನರ್ಹ ಶಾಸಕ ಎಂಟಿಬಿ ನಾಗರಾಜ್‍ರ ಹೊಸಕೋಟೆಯಿಂದಲೇ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ಅಲ್ಲದೇ ಎಲ್ಲಾ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ 1 ದಿನ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಅನರ್ಹ ಶಾಸಕರಿಗೆ ನೀಡಿರೋ ಭರವಸೆಯಂತೆ ಸಿಎಂ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಅನರ್ಹರನ್ನು ಮತ್ತೆ ಶಾಸಕರನ್ನು ಮಾಡುತ್ತೇನೆ ಎಂಬ ಶಪಥವನ್ನು ಬಿಎಸ್‍ವೈ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ 14 ಕ್ಷೇತ್ರಗಳಿಗೆ ಸಿಎಂ ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರಕ್ಕಾಗಿ ಮಾಸ್ಟರ್ ಪ್ಲಾನ್ ಕೂಡ ಸಿದ್ಧವಾಗಿದೆ.

ಸಿಎಂ ಬಿಎಸ್‍ವೈ ಅವರು ಪ್ರಚಾರ ನಡೆಸುವ ಸಂದರ್ಭದಲ್ಲಿ ಪಕ್ಷದ ಬೂತ್ ಮಟ್ಟದ ನಾಯಕರು, ಕಾರ್ಯಕರ್ತರು, ಮುಖಂಡರು ತಪ್ಪದೇ ಸಭೆಯಲ್ಲಿ ಭಾಗಿಯಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸ್ವತಃ ಸಿಎಂ ಅವರೇ ಪ್ರಚಾರ ಕಾರ್ಯಕ್ಕೆ ಆಗಮಿಸುವುದರಿಂದ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ ಶಮನವಾಗುತ್ತದೆ ಎಂಬುವುದು ಇದರ ಹಿಂದಿನ ಉದ್ದೇಶವಾಗಿದೆ ಎನ್ನಲಾಗಿದೆ.