Friday, 13th December 2019

ರಾಜ್ಯದ ಜನರು ನಮ್ಮನ್ನು ಕ್ಷಮಿಸುವುದಿಲ್ಲ: ಸಿಎಂ

– ವಿಧಿಯ ಆಟದಿಂದ ರಾಜಕೀಯಕ್ಕೆ ಬಂದೆ
– ಸಾಮಾಜಿಕ ಜಾಲತಾಣದಿಂದ ಯುವ ಪೀಳಿಗೆ ಹಾಳಾಗುತ್ತಿದೆ

ಬೆಂಗಳೂರು: ಸದನದಲ್ಲಿ ನಾಲ್ಕು ದಿನಗಳಿಂದ ನಡೆದ ಘಟನೆಗಳು, ಮಾತುಗಳು ರಾಜ್ಯದ ಜನರ ಮುಂದಿವೆ. ಅವರು ತಮ್ಮನ್ನು ಕ್ಷಮಿಸುವುದಿಲ್ಲ. ವಿಶ್ವಾಸ ಮತಯಾಚನೆಯಲ್ಲಿ ವಿಪಕ್ಷದ ಯಾವುದೇ ಸದಸ್ಯರು ಭಾಗವಹಿಸಲಿಲ್ಲ. ಇದು ವಿಶೇಷವಾಗಿತ್ತು ಹಾಗೂ ಇತಿಹಾಸ ಕೂಡ ಆಯಿತು ಎಂದು ಸಿಎಂ ಹೇಳಿದ್ದಾರೆ.

ವಿಶ್ವಾಸ ಮತಯಾಚನೆ ಚರ್ಚೆಯಲ್ಲಿ ಮಾತನಾಡಿದ ಸಿಎಂ, ರಾಜ್ಯಪಾಲರಿಂದ ಬಂದ ಆದೇಶವನ್ನು ಮತ್ತೆ ಪ್ರಸ್ತಾಪಿಸುವುದಿಲ್ಲ. ನಾವು ಕಾಲ ಹರಣ ಮಾಡುತ್ತಿದ್ದೇನೆ ಅಂತ ಚರ್ಚೆಯಾಗುತ್ತಿದೆ. ಹೌದು, ನಾವು ವಿಶ್ವಾಸ ಮತಯಾಚನೆಯನ್ನು ಮುಂದೂಡಿದ್ದು ನಿಜ. ಆದರೆ ಸಮಯವನ್ನು ವ್ಯರ್ಥ ಮಾಡಿಲ್ಲ. ಸರ್ಕಾರ ಬೀಳಿಸಲು ಮುಂದಾದವವರಿಗೆ ಸ್ವಲ್ಪ ಸಮಯದ ಬಳಿಕ ಬುದ್ಧಿ ಬರುತ್ತೆ ಅಂತ ಕಾದು ನೋಡಿದ್ದೇವೆ. ನಾಲ್ಕು ದಿನಗಳಲ್ಲಿ ನಿಮ್ಮ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ಇದು ನಿಮಗೂ ನೋವು ತಂದೆ ಎಂದು ಸಿಎಂ, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ತಿಳಿಸಿದರು.

ನಾನು ಮದುವೆ ಆಗುವುದಾದರೆ ರಾಜಕಾರಣಕ್ಕೆ ಬರಬಾರದು ಅಂತ ಪತ್ನಿ, ಶಾಸಕಿ ಅನಿತಾ ಅವರು ಷರತ್ತು ಹಾಕಿದ್ದರು. ನನಗೂ ರಾಜಕೀಯದಲ್ಲಿ ಆಸಕ್ತಿ ಕೂಡ ಇರಲಿಲ್ಲ. ಆದರೆ ವಿಧಿಯ ಆಟದಿಂದ ರಾಜಕೀಯಕ್ಕೆ ಬಂದುಬಿಟ್ಟೆ. ಜೊತೆಗೆ ಪತ್ನಿಯನ್ನು ಕರೆದುತಂದೆ ಎಂದು ಸದನದಲ್ಲಿ ನಗೆ ಹರಿಸಿದರು.

ವಿಧಾನಸಭೆ ಗ್ಯಾಲರಿಯಲ್ಲಿ ಕುಳಿತು ಕಲಾಪಗಳನ್ನು ನೋಡುತ್ತಿದ್ದೆ. ನನ್ನ ವ್ಯವಹಾರ ಚಿತ್ರರಂಗದಲ್ಲಿ. ಸಿನಿಮಾ ಕ್ಷೇತ್ರದಲ್ಲಿ ಇದ್ದರೂ ತಂದೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಹೋರಾಟವನ್ನು ನೋಡುತ್ತಾ ಬೆಳೆದೆ. ಅವರು ಯಾರ ಹಂಗಿನಲ್ಲಿಯೂ ಬದುಕಿಲ್ಲ, ಜನರ ಮಧ್ಯದಲ್ಲಿ ಬೆಳೆದಿದ್ದಾರೆ. ಎಚ್.ಡಿ.ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ವಿಪಕ್ಷ ನಾಯಕರ ವಿರುದ್ಧ ಕಿಡಿಕಾರಿದರು.

ಸಚಿವ, ಸಹೋದರ ಎಚ್.ಡಿ.ರೇವಣ್ಣ ಅವರ ಮೇಲೆ ತಂದೆಯ ಆಶೀರ್ವಾದ ಇದೆ. ನಾನು ರಾಜಕೀಯಕ್ಕೆ ಬರುವುದು ಎಚ್.ಡಿ.ದೇವೇಗೌಡ ಅವರಿಗೆ ಇಷ್ಟವಿರಲಿಲ್ಲ. ಅವರ ವಿರೋಧದ ನಡುವೆಯೂ 1996ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತೆ. ಶಾಸಕರ ಒತ್ತಾಯದ ಮೇರೆಗೆ ವಿಧಾನಸಭಾ ಚುನಾವಣೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಪರ್ಧೆ ಮಾಡಿದೆ. ಅಲ್ಲಿಯೂ ಸೋಲು ಕಂಡೆ. ಆಗಲೇ ರಾಜಕೀಯ ನಿವೃತ್ತಿ ಘೋಷಿಸಲು ಮುಂದಾಗಿದ್ದೆ. ಆದರೆ ಕಾರ್ಯಕರ್ತರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಮತ್ತೆ ಬೆಂಬಲಕ್ಕೆ ನಿಂತರು ಎಂದರು.

ಪತ್ನಿಯ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ನಾನು ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದಾರೆ. ತಪ್ಪು ಮಾಡಿದಾಗ ಸರಿಪಡಿಸಿಕೊಳ್ಳಲು ಅವಕಾಶ ಕೊಟ್ಟಿದ್ದಾರೆ ಎಂದು ಶಾಸಕಿ ಅನಿತಾ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವ ಸಾರಾ ಮಹೇಶ್ ಅವರ ಬಗ್ಗೆ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಅಸಹ್ಯವಾಗಿ ಮಾತನಾಡಿದ್ದಾರೆ. ಇಂತಹ ಶಾಸಕರು ನಿಮಗೆ ಬೇಕಿತ್ತು ಅಲ್ವಾ ಸಿ.ಟಿ.ರವಿ ಅವರೇ? ಕರೆದುಕೊಂಡು ಹೋಗಿ ಎಂದು ಗುಡುಗಿದರು.

ಸಾಮಾಜಿಕ ಜಾಲತಾಣದಿಂದ ಯುವ ಪೀಳಿಗೆ ಹಾಳಾಗುತ್ತಿದೆ. ಅನೇಕರು ಟ್ವಿಟ್ಟರ್ ವಾಟ್ಸಪ್, ಫೇಸ್‍ಬುಕ್‍ನಲ್ಲಿಯೇ ಕಾಲ ಕಳೆಯುತ್ತಾರೆ. ಕೆಲವರು ಟ್ವೀಟ್ ಮಾಡಿ ಸಿಎಂ ವಿಶ್ವಾಸ ಮತಯಾಚನೆ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ. ಇನ್ನೂ ಕೆಲವರು ತಮಗೆ ತೋಜಿದ್ದನ್ನು ಟ್ವೀಟ್ ಮಾಡುತ್ತಾರೆ ಎಂದು ಕಿಡಿಕಾರಿದರು.

ಸಂತೋಷದಿಂದ ಅಧಿಕಾರ ತ್ಯಜಿಸಲು ನಾನು ಸಿದ್ಧನಿದ್ದೇನೆ. ಬಿಜೆಪಿ ಜೊತೆಗೆ ಸೇರಿ 20 ತಿಂಗಳು ಸರ್ಕಾರ ನಡೆಸಿದೆ. ಬಳಿಕ ಅಧಿಕಾರ ಬಿಟ್ಟುಕೊಳ್ಳಲು ಮುಂದಾಗಿದ್ದೆ. ಆದರೂ ನನ್ನನ್ನು ವಚನ ಭ್ರಷ್ಟ ಎಂದು ಆರೋಪಿಸುತ್ತಾರೆ. ಇದು ನನಗೆ ಭಾರೀ ನೋವು ತರುತ್ತಿದೆ ಎಂದು ಕಿಡಿಕಾರಿದರು.

ಮಾಧ್ಯಮಗಳ ವಿರುದ್ಧ ಕಿಡಿ:
ಮಾಧ್ಯಮಗಳಿಂದ ನಮಗೆ ಖಾಸಗಿ ಜೀವನವೇ ಇಲ್ಲದಂತಾಗಿದೆ. ಸರ್ಕಾರ ರಚನೆ ಆದಾಗಿನಿಂದ ಮಾಧ್ಯಮಗಳು ಡೆಡ್‍ಲೈನ್ ಕೊಡುತ್ತಲೇ ಬಂದವು ಎಂದು ಗುಡುಗಿದರು. ದಿನಬೆಳಗಾದರೆ ಸರ್ಕಾರ ನನ್ನ ವಿರುದ್ಧ ಸುದ್ದಿಗಳು ಬರುತಿತ್ತು. ಆದರು ನಾನು ಇದ್ದೇನೆ ಅಂದರೆ ಅದು ತಂದೆ ತಾಯಿ ಪುಣ್ಯ ಎಂದು ತಿಳಿಸಿದರು.

ಅಧಿಕಾರಿಗಳಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಮಾಧ್ಯಮಗಳು ಕೊಟ್ಟ ಡೆಡ್‍ಲೈನ್‍ನಲ್ಲಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ನಾನು ಇಂತಹ ಕಷ್ಟದ ಸಮಯದಲ್ಲಿ ಅಲ್ಪಸ್ವಲ್ಪ ಕೆಲಸ ಮಾಡಿದ್ದೇನೆ ಅದಕ್ಕೆ ಕಾರಣ ಅಧಿಕಾರಿಗಳ ಸಹಕಾರ ಎಂದು ಮೆಚ್ಚಗೆ ವ್ಯಕ್ತಪಡಿಸಿದರು.

ಮೋದಿ ವಿರುದ್ಧ ಕಿಡಿ:
ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮೈತ್ರಿ ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡಿದರು. ನಾವು ರೈತರ ಸಾಲಮನ್ನಾ ಮಾಡಲು ಶ್ರಮಿಸಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಈಗಲೂ 1,500 ಕೋಟಿ ರೂ. ಇದೆ. ನಾಡಿನ ರೈತರಿಗೆ ನನ್ನಿಂದ ಯಾವುದೇ ಮೋಸವಾಗಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *