Sunday, 25th August 2019

Recent News

ಯಾವನೋ ಅವನು ಯಶ್ ನನ್ನ ಪಕ್ಷ ಕಳ್ಳರ ಪಕ್ಷ ಅಂತಾನೆ: ಗುಡುಗಿದ ಸಿಎಂ ಎಚ್‍ಡಿಕೆ

ಮಂಡ್ಯ: ಲೋಕಸಭಾ ಚುನಾವಣೆ ಮತದಾನಕ್ಕೆ ಕೆಲ ದಿನಗಳಷ್ಟೇ ಬಾಕಿ ಇದ್ದು, ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಪುತ್ರ ನಿಖಿಲ್ ಪರ ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿರುವ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ನಟ ಯಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಕೆ.ಆರ್ ಪೇಟೆ ಸಮಾವೇಶದಲ್ಲಿ ಮಾತನಾಡಿದ ಸಿಎಂ ಎಚ್‍ಡಿಕೆ, ರೈತರು ಆತ್ಮಹತ್ಯೆ ಮಾಡಿಕೊಂಡು ಮಂಡ್ಯದ ತಾಯಂದಿರು ಕಣ್ಣೀರುಡುತ್ತಿದ್ದ ವೇಳೆ ಬಾರದ ಇವರು ಇಂದು ಬಂದಿದ್ದಾರೆ. ಈಗ ಬಂದು ಮಂಡ್ಯ ಸ್ವಾಭಿಮಾನ ಎಂದು ಸಿನಿಮಾದವರು ಮಾತನಾಡುತ್ತಾರೆ. ಅಂದು ಮಹಿಳೆಯರು ಕಣ್ಣೀರು ಹಾಕುತ್ತಿದ್ದ ವೇಳೆ ಯಾರು ಬಂದಿದ್ದರು ಎಂದು ಪ್ರಶ್ನೆ ಮಾಡಿದರು.

ರೈತರು ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಅವರ ಸ್ವಾಭಿಮಾನ ಉಳಿಸಲು ಏಕೆ ಬಂದಿರಲಿಲ್ಲ? ನಾನು ಕಲಾವಿದರು ಎಂದು ಗೌರವ ಕೊಟ್ಟು ಮಾತನಾಡಿದ್ದೇನೆ. ಯಾವನೋ ಯಶ್ ನನ್ನ ಪಕ್ಷವನ್ನು ರಾತ್ರಿ ವೇಳೆ ಹಳ್ಳಿ ಕಡೆ ಬಂದು ಕಳ್ಳರ ಪಕ್ಷ ಎಂದು ಕರೆಯುತ್ತಾರೆ. ಆದರೆ ಅವರಿಗೆ ನನ್ನ ಕಾರ್ಯಕರ್ತರು ಏಕೆ ಸುಮ್ಮನೆ ಇದ್ದಾರೆ ಎಂದು ಇನ್ನು ಗೊತ್ತಿಲ್ಲಾ. ನನ್ನ ಹೆಸರಿಗೆ ಕಳಂಕ ಬರುತ್ತದೆ, ತಪ್ಪು ಸಂದೇಶ ರವಾನೆ ಆಗುತ್ತೆ ಎಂದು ಸುಮ್ಮನಿದ್ದಾರೆ. ನಾನು ನಿರ್ಮಾಪಕ ಆಗಿದ್ದವನು. ನನ್ನಂಥ ನಿರ್ಮಾಪಕ ಇಲ್ಲದಿದ್ದರೆ ಇವರು ಎಲ್ಲಿ ಬದುಕುತ್ತಾರೆ. ಸಿನಿಮಾದಲ್ಲಿ ನೋಡುವುದು ನಿಜ ಎಂದು ತಿಳಿದುಕೊಳ್ಳಬೇಡಿ. ನಿಮ್ಮ ಮನೆಯಲ್ಲಿ ನಡೆಯುತ್ತಿರುವುದು ನಿಜವಾದ ಜೀವನ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಇದಕ್ಕೂ ಮುನ್ನ ಭಾವುಕರಾಗಿ ಮಾತನಾಡಿದ ಸಿಎಂ, ನಾನು ಕಣ್ಣೀರು ಹಾಕೋದನ್ನು ನಿಲ್ಲಿಸಿದ್ದೆ. ನಮ್ಮ ನಾಯಕರಾದ ವಿಶ್ವನಾಥ್ ಅವರು ಯಾರು ನಿನ್ನ ಕಷ್ಟ, ನಿನ್ನ ಆರೋಗ್ಯದ ಬಗ್ಗೆ ಯೋಚಿಸುತ್ತಿಲ್ಲ. ಅದು ನೋವಾಗುತ್ತೆ ಎಂದು ಹೇಳಿದಾಗ ಅವರ ಮಾತು ಕೇಳಿ ಕಣ್ಣಲ್ಲಿ ನೀರು ಬಂತು ಎಂದು ಭಾವುಕರಾದರು. ಅಲ್ಲದೇ ನಾನು ಮುಖ್ಯಮಂತ್ರಿ ಆದ ದಿನದಿಂದ ಒಂದು ದಿನ ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟಿಲ್ಲ. ನಾನು 120 ಸೀಟ್ ಗೆದ್ದಿದ್ದರೆ ನೆಮ್ಮದಿಯಾಗಿ ಆಡಳಿತ ನಡೆಸುತ್ತಿದೆ ಎಂದರು.

ಅಂಬಿ ಶವ ರಾಜಕೀಯ: ಅಂದು ನಟ ರಾಜಕುಮಾರ್ ನಿಧನರಾದಾಗ ನಮ್ಮ ಗಮನಕ್ಕೆ ತರದೆ ಮಾಧ್ಯಮಕ್ಕೆ ಘೋಷಣೆ ಮಾಡಿದ್ದರು. ಇದರಿಂದ ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳಲಾಗಲಿಲ್ಲ. ಪರಿಣಾಮ ಅಂತ್ಯಕ್ರಿಯೆಯ ವೇಳೆ ಹಲವು ಗೊಂದಲವಾಯಿತು. ಅಂಬರೀಶ್ ಅವರನ್ನು ಮೊದಲು ಎಂಪಿ ಮಾಡಿದ್ದು ಜನತಾ ಪಕ್ಷ. ನಂತರ ಕಾಂಗ್ರೆಸ್ ಗೆ ಹೋದರು. ನಾನು ಅವರಿಗೆ ಏನು ಸಹಾಯ ಮಾಡಿದ್ದೇನೆ, ಅವರು ನನಗೆ ಏನು ಸಹಾಯ ಮಾಡಿದ್ದಾರೆ ಈಗ ಮಾತನಾಡುವುದು ಬೇಡ. ಅಂಬರೀಶ್ ನಿಧನರಾದಾಗ ನನಗೆ ನನ್ನ ಮಗ ತಿಳಿಸಿದ. ಆಸ್ಪತ್ರೆಗೆ ಹೋದಾಗ ಅಲ್ಲಿ ಇಂದು ಚುನಾವಣೆ ನಡೆಸಲು ಬಂದವರು ಇರಲಿಲ್ಲ. ಈ ಸಂದರ್ಭದಲ್ಲಿ ಆ ತಾಯಿಗೆ ಕೇಳುತ್ತೇನೆ. ಆ ಸಣ್ಣ ಸೌಜನ್ಯದ ಕ್ರಿಯೆ ಅವರಿಗೆ ಇದೆಯಾ? ಅವರು ವಾಸ ಮಾಡುತ್ತಿದ್ದ ಮನೆಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ. ಮಧ್ಯ ರಾತ್ರಿಯಲ್ಲಿ ಒಂದು ರೂಂ ಕ್ಲೀನ್ ಮಾಡಿಸಿ ಅವರು ಬಾಳಿದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದೆ. ದೇಶದ ಇತಿಹಾಸದಲ್ಲಿ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ಸೇನೆಯ ವಿಮಾನ ಕೊಡಲ್ಲ. ಅವತ್ತು ಈ ಅಭಿಮಾನಿಗಳು ಕೇಳಿಕೊಂಡರು ಎಂದು ಮಾಡಿದೆ. ನಾನು ಒಬ್ಬ ಮುಖ್ಯಮಂತ್ರಿ ಆಗಿ ನಾನು ಅಲ್ಲಿ ಕೂರಲಿಲ್ಲ ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

ಇಂದು ಕಣ್ಣಲ್ಲಿ ನೀರು ಹಾಕಿ ಡ್ರಾಮಾ ಆರಂಭ ಮಾಡಿದ್ದಾರೆ. ನಾನು, ನಮ್ಮ ತಂದೆ ಕಣ್ಣಲ್ಲಿ ನೀರು ಹಾಕುತ್ತೇವೆ. ಜನರ ಸಮಸ್ಯೆ ನೋಡಿ ಕಣ್ಣಲ್ಲಿ ನೀರು ಬರುತ್ತೆ. ಅಂಬರೀಶ್ ಪಾರ್ಥೀವ ಶರೀರವನ್ನ ಮಂಡ್ಯಕ್ಕೆ ತೆಗೆದುಕೊಂಡು ಹೋಗೋಣ ಅಂದರೆ ಮಗನೊಂದಿಗೆ ಬೇಡ ಎಂದ ಮಹಾನ್ ತಾಯಿ ಇವತ್ತು ಕಣ್ಣೀರಾಕಿ ಜನರ ಮುಂದೆ ಬಂದಿದ್ದಾರೆ ಎಂದು ಅಂಬರೀಶ್ ಪಾರ್ಥೀವ ಶರೀರ ಮಂಡ್ಯಕ್ಕೆ ತೆಗೆದುಕೊಂಡು ಹೋಗೋದು ಬೇಡ ಎಂದು ಸುಮಲತಾ ಅವರು ಹೇಳಿದ್ದರು ಎಂದು ತಿಳಿಸಿದರು.

ಇಲ್ಲಿಯವರೆಗೂ ನಾನು ಬಾಯಿ ಮುಚ್ಚಿಕೊಂಡಿದ್ದೆ. ಅವರಿಗೆ ಎಂಪಿ ಆಗಿದ್ದೇನೆ ಎಂದು ಮೂರು ತಿಂಗಳಿಂದ ನಿಮ್ಮ ತಲೆಗೆ ತುಂಬಿದ್ದಾರೆ. ನಾನು ಮಾಧ್ಯಮಗಳಿಂದ ಬದುಕಿಲ್ಲ. ಮಾಧ್ಯಮದವರು ನೀವು ಏನ್ ಬೇಕಾದರು ಮಾಡಿಕೊಳ್ಳಿ ಎಂದು ಕಿಡಿಕಾರಿದರು. ಅಲ್ಲದೇ ಎರಡು ಬಾರಿ ಚಿಕಿತ್ಸೆಗೆ ಒಳಗಾದವನು ನಾನು. ಇಸ್ರೇಲ್‍ಗೆ ಹೋದಾಗಲೇ ನನ್ನ ಜೀವ ಹೋಗಬೇಕಾಗಿತ್ತು. ವೈದ್ಯರು ಚಿಕಿತ್ಸೆ ಕೊಡಲೇ ಬೇಕು ಅಂದರು ಆದರೆ ನಾನು ಬಂದಿರುವುದು ರೈತರಿಗೆ ಒಳ್ಳೆಯದು ಮಾಡಲು ಎಂದು ಯಾವುದಾದರು ಮಾತ್ರೆ ಕೊಡಿ ಸಾಕು ಎಂದು ಬಂದೆ ಎಂದು ತಿಳಿಸಿ ಮತ್ತೊಮ್ಮೆ ತಾವು ಸಾವಿನ ಸನಿಹ ಹೋಗಿದ್ದ ಸನ್ನಿವೇಶ ಬಿಚ್ಚಿಟ್ಟರು.

Leave a Reply

Your email address will not be published. Required fields are marked *