Tuesday, 16th July 2019

ಹೃದಯದಲ್ಲಿ ಭಾವುಕತೆಯಿದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತ್ತಿತ್ತು: ಬಿಎಸ್‍ವೈ ವಿರುದ್ಧ ಎಚ್‍ಡಿಕೆ ವಾಗ್ದಾಳಿ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿಯವರಿಗೆ ಹೃದಯದಲ್ಲಿ ಭಾವುಕತೆಯಿದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತಿತ್ತು ಎಂದು ಬಿಎಸ್ ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರತಿದಿನ ಕಣ್ಣೀರು ಹಾಕುತ್ತೇನೆ. ನಾನು ಭಾವುಕ ಜೀವಿ. ಕಣ್ಣಲ್ಲಿ ನೀರು ಸುಮ್ ಸುಮ್ಮನೆ ಬರುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ. ಮಾಜಿ ಮುಖ್ಯಮಂತ್ರಿಯವರ ಹೃದಯದಲ್ಲಿ ಭಾವುಕತೆ ಎಂಬುದು ಇದ್ದರೆ ಅವರಿಗೆ ಕಣ್ಣೀರಿನ ಅರ್ಥ ಗೊತ್ತಾಗುತಿತ್ತು ಎಂದು ಕಿಡಿಕಾರಿದ್ರು.

ನನಗೆ ಮಂಡ್ಯ ಕ್ಷೇತ್ರ ಮಾತ್ರ ಮುಖ್ಯವಲ್ಲ. ಮೊದಲ ಹಂತದ 14 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಮಂಡ್ಯ ಜಿಲ್ಲೆಯ ಜನ ನನ್ನನ್ನು ಸೊರಗಲು ಬಿಡುವುದಿಲ್ಲ. ಮಂಡ್ಯದ ರೈತರು ಇನ್ನೂ ಸತ್ತಿಲ್ಲ. ಅಲ್ಲಿನ ರೈತರು ನಮ್ಮ ಕೈಬಿಡಲ್ಲ. ರೈತರು ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಮಂಡ್ಯದ ಸ್ವಾಭಿಮಾನ ಏನು ಎಂದು ಸುಮಲತಾಗೆ ಗೊತ್ತೆ ಎಂದು ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮೋದಿ ಪೊಳ್ಳು ಭಾಷಣ ಮಾಡುತ್ತಿದ್ದಾರೆ. ಅವರ ಭಾಷಣಕ್ಕೆ ಜನ ಮರುಳಾಗುವುದಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಅವರ ಮಗ ಅಭಿಷೇಕ್ ಇಬ್ಬರೂ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ತರುವುದು ಬೇಡ ಎಂದುಕೊಂಡಿದ್ದರು. ಆಗಿರುವ ಘಟನೆಯ ಬಗ್ಗೆ ಮತ್ತೆ ನೆನಪಿಸಿಕೊಳ್ಳುವುದು ಬೇಡ. ಬಿಜೆಪಿಯ ಯಾವುದೇ ಆಟಗಳು ಶಿವಮೊಗ್ಗ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಮಂಡ್ಯಕ್ಕೆ ನರೇಂದ್ರ ಮೋದಿಗಿಂತ ಹೆಚ್ಚಿನ ಪ್ರಚಾರ ಸಿಕ್ಕಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ರಾಷ್ಟ್ರ ಮಟ್ಟದ ನಾಯಕನನ್ನಾಗಿ ಮಾಡಿದ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ರು.

ಸಚಿವ ಡಿ.ಕೆ ಶಿವಕುಮಾರ್‍ಗೆ ಇಂದು ಕನಕಪುರದಲ್ಲಿ ಪ್ರಚಾರ ಮಾಡುವಂತೆ ಹೇಳಿದ್ದೇನೆ. ಹಾಗಾಗಿ ಇಂದು ಅವರು ಶಿವಮೊಗ್ಗಕ್ಕೆ ಬಂದಿಲ್ಲ. ನಾಡಿದ್ದಿನಿಂದ ಮೂರು ದಿನ ಡಿ.ಕೆ.ಶಿವಕುಮಾರ್ ಶಿವಮೊಗ್ಗದಲ್ಲಿ ಪ್ರಚಾರ ಮಾಡಲಿದ್ದಾರೆ. 23ರಿಂದ 25 ಸ್ಥಾನಗಳನ್ನು ಮೈತ್ರಿಕೂಟ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

Leave a Reply

Your email address will not be published. Required fields are marked *