Wednesday, 11th December 2019

ಸಿಎಂ ಜೊತೆಗಿನ ಕಬ್ಬು ಬೆಳೆಗಾರರ ಸಭೆ ಯಶಸ್ವಿ- ಎಫ್ಆರ್​ಪಿ ದರ ನೀಡುವಂತೆ ಸೂಚನೆ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತ ಮುಖಂಡರ ಜೊತೆ ನಡೆಸಿದ ಕಬ್ಬಿನ ಬಿಲ್ ಬಾಕಿ ಕುರಿತ ಸಭೆ ಸಂಪೂರ್ಣ ಯಶಸ್ವಿಯಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಏನೋ ಮಾತನಾಡಿದೇ ಅಂತ ಪ್ರತಿಭಟನೆ ನಡೆಯಿತು. ಇವತ್ತಿನ ಸಭೆಗೆ ರೈತರ ಮುಖಂಡರನ್ನು ಕರೆದು ಸುದೀರ್ಘವಾಗಿ ಮಾತನಾಡಿದ್ದೇನೆ. ಬೆಳಗ್ಗಿನಿಂದಲೂ ಮಾಧ್ಯಮಗಳಲ್ಲಿ ಕಬ್ಬು ಬೆಳಗಾರರಿಗೆ ಕಹಿಯೋ, ಸಿಹಿಯೋ ಅಂತ ಸುದ್ದಿ ಮಾಡಿದ್ದೀರಿ. ಆದರೂ ರೈತರು ಸರ್ಕಾರದ ಕೆಲವು ಸಲಹೆಗೆ ಒಪ್ಪಿಗೆ ನೀಡಿದ್ದಾರೆ. ನಾನು ರೈತರಿಗೆ ಅಭಾರಿಯಾಗಿದ್ದೇನೆಂದು ಹೇಳಿದ್ದಾರೆ.

ಸಭೆಯಲ್ಲಿ ಕೆಲ ನಿರ್ಣಯ ಮಾಡಿದ್ದೇನೆ. ಸಮಸ್ಯೆ ಬಗ್ಗೆ ರೈತರು ನನ್ನ ಗಮನಕ್ಕೆ ತಂದಿದ್ದಾರೆ. ಈಗಾಗಲೇ ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿದ್ದೇನೆ. ಇದಕ್ಕೆ ಮಾಲೀಕರು ಇನ್ನು ಒಪ್ಪಿಲ್ಲ. ಅವರ ಪ್ರತಿನಿಧಿಯೊಬ್ಬರು ಸಭೆಗೆ ಬಂದಿದ್ದರು. ಹೀಗಾಗಿ ಇದೇ 22ನೇ ತಾರೀಕಿನ ಒಳಗೆ, ಮಾಲೀಕರ ಸಭೆ ಮಾಡಲು ನಿರ್ಧಾರ ಮಾಡಿದ್ದೇನೆ.

ತಮ್ಮ 13 ಸಮಸ್ಯೆಗಳ ಬಗ್ಗೆ ರೈತರು ಮಾಹಿತಿ ನೀಡಿದ್ದರು. ಇಳುವರಿಯಲ್ಲಿ ಕಡಿಮೆ ತೋರಿಸುವುದು, ತೂಕ ಕಡಿಮೆ ಮಾಡುವ ವಿಚಾರವನ್ನು ಸಹ ಪ್ರಸ್ತಾಪ ಮಾಡಿದ್ದಾರೆ. ಇಳುವಾರಿ ಸರಿಯಾಗಿ ತೋರಿಸಲು ಹೊಸ ಯಂತ್ರ ಖರೀದಿಗೆ ಸೂಚನೆ ನೀಡಿದ್ದೇನೆ. ಎಫ್ಆರ್​ಪಿ ದರವನ್ನೇ ಮಾಲೀಕರಿಗೆ ನೀಡಲು ಸೂಚನೆ ನೀಡಲಾಗಿದೆ. ದರ ನಿಗದಿ ಬಗ್ಗೆ ಆಯುಕ್ತರಿಗೆ ಅಧಿಕಾರ ನೀಡಿದ್ದೇನೆ. ಈ ಬಗ್ಗೆ ಮಾಲೀಕರ ಜೊತೆ ಚರ್ಚೆ ಮಾಡಿ ದರ ನಿಗದಿಗೆ ಮಾಡುವಂತೆ ತಿಳಿಸಿದ್ದೇನೆ.

ಇದು ರೈತರ ಅಂತಿಮ ಸಭೆ ಅಲ್ಲ. ಹಂತ ಹಂತವಾಗಿ ಸಭೆ ಮಾಡುತ್ತೀನಿ. ಅಗತ್ಯ ಸಮಯದಲ್ಲಿ ಸಭೆಯನ್ನು ಕರೆಯುತ್ತೇನೆ. ರೈತ ಮುಖಂಡರು ನೇರವಾಗಿ ನನ್ನನ್ನು ಭೇಟಿ ಮಾಡಬಹುದು. ಅವರಿಗಾಗಿ ಮುಕ್ತ ಅವಕಾಶ ನೀಡಿದ್ದೇನೆ. ಕಳೆದ ವರ್ಷದ ಕಬ್ಬು ಮೊತ್ತ ಬಿಡುಗಡೆ ಮಾಡಲು, ಅಧಿಕಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ. ಮಾಲೀಕರಿಗೂ ಸಹ ಈ ಬಗ್ಗೆ ಸೂಚನೆ ನೀಡಿ, ಎಲ್ಲಾ ಹಣವನ್ನು ನೀಡಲು ಸೂಚಿಸಿದ್ದೇನೆ.

ಇದು ರೈತರ ಪರ ಸರ್ಕಾರವಾಗಿದೆ. ರೈತರು ಆತಂಕಕ್ಕೆ ಒಳಗಾಗುವುದು ಬೇಡ. ಸರಿಯಾದ ಸಮಯಕ್ಕೆ ಕಟಾವು ಮಾಡಲು ಸರ್ಕಾರ ನೇರ ಜವಾಬ್ದಾರಿ ತೆಗೆದುಕೊಂಡಿದೆ. ರೈತರ ಸಲಹೆ ಸ್ವೀಕಾರ ಮಾಡಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿಯೂ ರೈತರ ಜೊತೆ ಸಭೆ ಮಾಡುತ್ತೇನೆ. ಎಲ್ಲಾ ಸಮಸ್ಯೆಯನ್ನು ಪರಿಹಾರ ಮಾಡುತ್ತೇನೆ. ಅಲ್ಲದೇ ಭತ್ತ ಖರೀದಿ ವಿಚಾರವನ್ನು ಶುಕ್ರವಾರ ತೀರ್ಮಾನ ಮಾಡುತ್ತೇನೆ. ಈಗಾಗಲೇ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದು, ಇದರ ಜೊತೆ ಈರುಳ್ಳಿಗೂ ಬೆಂಬಲ ಬೆಲೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ರೈತರೊಂದಿಗಿನ ಇಂದಿನ ಸಭೆ ಸುಸೂತ್ರವಾಗಿ ನಡೆದಿದೆ. ಯಾವುದೇ ಸಮಸ್ಯೆ ಇಲ್ಲದೇ ಶಾಂತ ರೀತಿಯಲ್ಲಿ ಸಭೆ ನಡೆದಿದೆ. 2,750 ಎಫ್ಆರ್​ಪಿ ದರವನ್ನು ನಿಗದಿ ಮಾಡಲಾಗಿದೆ. 2017-18ನೇ ಸಾಲಿನಲ್ಲಿ ಬಾಗಲಕೋಟೆ ಕಾರ್ಖಾನೆಗಳು 2,500 ರೂಪಾಯಿ ನೀಡಿಲ್ಲ. ಅದನ್ನು ತಕ್ಷಣ ಕೊಡಿಸಲು ಜಿಲ್ಲಾಧಿಕಾರಿಗೆ ಹೇಳಿದ್ದೇನೆ. ಎಫ್ಆರ್​ಪಿಯಲ್ಲಿ 36 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಐದಾರು ವರ್ಷದಿಂದ 2,900 ಕೊಡುತ್ತೀವಿ ಎಂದು ಘೋಷಣೆ ಮಾಡಿ, ಇಲ್ಲಿಯವರೆಗೂ ಹಣ ನೀಡಿಲ್ಲ. ಆದ್ದರಿಂದ ಆ ಬ್ಯಾಲೆನ್ಸ್ ಹೆಚ್ಚಿದೆ.

450 ಕೋಟಿ ರೂಪಾಯಿ ಬಾಕಿ ಇದೆ ಎಂದು ರೈತರು ಹೇಳುತ್ತಿದ್ದಾರೆ. ಈ ಬಗೆ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುಜರಾತ್ ಹಾಗೂ ಮಹಾರಾಷ್ಟ್ರ ಮಾದರಿಯನ್ನು ತರಸಿಕೊಳ್ಳಲು ಅಧಿಕಾರಿಗೆ ಹೇಳಿದ್ದೇನೆ. ಮುಂದಿನ ವರ್ಷದಿಂದ ಶಾಶ್ವತ ಪರಿಹಾರ ಯೋಜನೆಯನ್ನು ಜಾರಿಗೆ ತರುತ್ತೇವೆಂದು ಹೇಳಿದರು.

ಈಗಾಗಲೇ ಸಭೆಯ ಮಾಹಿತಿಯನ್ನು ಕಾರ್ಖಾನೆ ಮಾಲೀಕರಿಗೂ ಕಳುಹಿಸಿದ್ದೇನೆ. ಕೊಟ್ಟ ಮಾತಿಗೆ ಮಾಲೀಕರು ನಡೆದುಕೊಳ್ಳಬೇಕು. ಮಾಲೀಕರು ಸರ್ಕಾರದ ಸಭೆಗೆ ಗೈರಾದರೆ, ಏನು ಕ್ರಮ ತೆಗೆದುಕೊಳ್ಳಬೇಕು ಎಂಬುವುದು ನಮಗೆ ಗೊತ್ತಿದೆ. ನಮ್ಮ ಬಳಿ ಅವರ ಕೀಗಳು ಇವೆ. ಸಕ್ಕರೆ ಕಾರ್ಖಾನೆಗಳ ನಿಯಂತ್ರಣ ವಿಧೇಯಕದ ಲೋಪದೋಷಗಳನ್ನು ಸರಿಪಡಿಸುತ್ತೇವೆಂದು ತಿಳಿಸಿದರು.

ರೈತರ ಹೋರಾಟದ ಸಮಯದಲ್ಲಿ ಹಾಕಿದ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳುತ್ತೇನೆ. ಅಲ್ಲದೇ ಈ ಬಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೀನಿ. ಸೋಮವಾರದ ಹೋರಾಟ ಸೇರಿದಂತೆ ಎಲ್ಲಾ ಕೇಸುಗಳನ್ನು ತೆಗೆಯುವ ಕುರಿತು ಕ್ಯಾಬಿನೆಟ್ ನಲ್ಲಿಯೇ ನಿರ್ಧಾರ ಮಾಡುತ್ತೇನೆಂದು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *