Connect with us

Bengaluru City

15 ದಿನಗಳ ಕಾಲಾವಕಾಶ ಕೋರಿದ ಸಿಎಂ: ಸಾಲ ಮನ್ನಾ ಸ್ಕೀಂ ಹೇಗೆ?

Published

on

ಬೆಂಗಳೂರು: ಸಾಲಮನ್ನಾ ಘೋಷಣೆಯಾಗಿದ್ದು, ಆದ್ರೆ ಅದರ ರೂಪುರೇಷೆಗಳನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಲು 15 ದಿನಗಳ ಕಾಲಾವಕಾಶ ಬೇಕು ಅಂತ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸೌಧದದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಲಮನ್ನಾ ಬಗ್ಗೆ ಘೋಷಣೆ ಮಾಡಿದ್ರೂ ಇನ್ನೂ 15 ದಿನ ಕಾಯಬೇಕು. 15 ದಿನಗಳ ಬಳಿಕ ಸರ್ಕಾರದ ರೂಪುರೇಷೆ ಪ್ರಕಟವಾಗಲಿದೆ. 2 ಹಂತಗಳಲ್ಲಿ ಯಾರ ಸಾಲಮನ್ನಾ ಮಾಡಬೇಕು ಅನ್ನೋದರ ಬಗ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಅಂತ ಹೇಳಿದ್ರು.

ಏಪ್ರಿಲ್ 1, 2009 ರಿಂದ ಡಿಸೆಂಬರ್ 31, 2017 ವರೆಗೆ ಮೊದಲ ಸ್ಕೀಂನಲ್ಲಿ ಚುನಾಯಿತ ಸದಸ್ಯರ, ಕೃಷಿ ಸಾಲ ಪಡೆದು ಉದ್ಯಮಕ್ಕೆ ಬಳಸಿದವರ, ಸತತ 3 ವರ್ಷ 4 ಲಕ್ಷಕ್ಕೆ ಆದಾಯಕ್ಕೆ ತೆರಿಗೆ ಕಟ್ಟಿರುವವರ, ಸಹಕಾರ ಬ್ಯಾಂಕ್ ಪದಾಧಿಕಾರಿಗಳಾಗಿ 3 ಲಕ್ಷ ಆದಾಯ ಇರುವವರ ಸಾಲಮನ್ನಾ ಇಲ್ಲ. ಅಲ್ಲದೇ ನಗರ ಪಾಲಿಕೆ ವ್ಯಾಪ್ತಿ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಸಾಲ ಪಡೆದ ಸಾಲ ಮನ್ನಾ ಇಲ್ಲ ಅಂತ ಹೇಳಿದ್ರು. ಇದರಲ್ಲಿ ವರ್ಷಕ್ಕೆ 4 ಲಕ್ಷ ರೂ. ಆದಾಯ ಹೊಂದಿ ತೆರಿಗೆ ಕಟ್ಟುವವರನ್ನು ಸೇರಿಸಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು. ಕೃಷಿ ಸಾಲ ಪಡೆದು ಉದ್ಯಮಕ್ಕೆ ಬಂಡವಾಳ ಹಾಕಿರುವವರನ್ನು ಸೇರಿಸಬೇಕೆ? ಸಹಕಾರಿ ಬ್ಯಾಂಕ್ ಗಳಲ್ಲಿ 3 ಲಕ್ಷ ಆದಾಯ ಇರುವವರನ್ನು ಸೇರಿಸಬೇಕೇ? ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಸ್ಕೀಂ 2ರಲ್ಲಿ ತೋಟಗಾರಿಕೆ, ಯಂತ್ರ ಸಲಕರಣೆ ಸೇರಿದಂತೆ ಇನ್ನಿತರ ಸಾಲದ ಬಗ್ಗೆ ನಿರ್ಧಾರ ಮಾಡಲಾಗುವುದು. ಒಟ್ಟಿನಲ್ಲಿ ಆರ್ಥಿಕ ಶಿಸ್ತಿನಲ್ಲಿ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಕೃಷಿಗಾಗಿ ಸಾಲ ಮಾಡಿದವರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. ಯಾಕಂದ್ರೆ ಅದಕ್ಕೆ ಲಿಮಿಟ್ ಇಲ್ಲ. ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಂಜಾಬ್ ಹಾಗೂ ಮಹಾರಾಷ್ಟ್ರ ಕಡೆಗಳಲ್ಲಿ 1 ಲಕ್ಷ ದಿಂದ ಒಂದೂವರೆ ಲಕ್ಷ ರೂಪಾಯಿವರೆಗೆ ಸಾಲಮನ್ನಾ ಮಾಡುವ ನಿರ್ಧಾರ ಮಾಡಿಕೊಂಡಿದ್ದಾರೆ. ನನ್ನ ಸ್ಕೀಂನಲ್ಲಿ ಒಂದು ಅಥವಾ ಒಂದೂವರೆ ಲಕ್ಷ ಅಂತ ಮಿತಿ ಇಡುತ್ತಿಲ್ಲ. ಎಷ್ಟು ಸಾಲ ಮಾಡಿದ್ರು, ಅಷ್ಟು ಸಾಲವನ್ನು ಸಂಪೂರ್ಣವಾಗಿ ಸಾಲಮನ್ನಾ ಮಾಡುತ್ತೇನೆ ಎಂದರು.

ಸರ್ಕಾರದ ಬದ್ಧತೆ ಬಗ್ಗೆ ರೈತರಿಗೆ ನಾನು ಹೇಳುತ್ತೇನೆ. ರೈತರಿಗೆ ಆಶಾಕಿರಣ ತುಂಬಲು ರೂಪುರೇಷೆ ಸಿದ್ಧ ಮಾಡಿದ್ದೇನೆ. ಕಾಂಗ್ರೆಸ್ ವಿಶ್ವಾಸ ಇಲ್ಲದೆ ನಾನು ಕೆಲಸ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳ ಜೊತೆ ಎರಡು ಮೂರು ಸುತ್ತು ಸಭೆ ಮಾಡಿದ್ದೇನೆ. ಅನೇಕರು ನಮಗೆ ಶ್ರೀಮಂತ ರೈತ ಸಾಲಮನ್ನಾ ಯಾಕೆ ಮಾಡ್ತೀರಾ ಅಂತ ಪತ್ರ ಬರೆದು ಸಲಹೆಗಳನ್ನ ನೀಡಿದ್ದಾರೆ ಎಂದು ತಿಳಿಸಿದರು.

ರೈತರನ್ನ ಉಳಿಸಲು ಹೋಗಿ ನಗರ ಪ್ರದೇಶದವರ ಹಣವನ್ನು ಖರ್ಚು ಮಾಡುವುದಿಲ್ಲ. ಜನತೆಯ ಪರ ತೀರ್ಮಾನ ಮಾಡುತ್ತೇವೆ. ನಾಡಿನ ಜನತೆಗೆ ಸಮಸ್ಯೆ ತಿಳಿಯಲು ಈ ಸಭೆ ಕರೆದಿದ್ದೇನೆ. ಬೆಂಗಳೂರು ಅಭಿವೃದ್ಧಿ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ. ಈ ಸರ್ಕಾರ ಐದು ವರ್ಷ ಪೂರ್ಣ ಮಾಡಿದ್ದಾರೆ. ರೈತರನ್ನು ಉಳಿಸಿ ರಾಜ್ಯದ ಖಜಾನೆ ಭದ್ರ ಪಡೆಸುತ್ತೇನೆ. ಎರಡು ದಿನಗಳಲ್ಲಿ 10 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಂತ ಹಂತವಾಗಿ ರೈತರನ್ನ ನಾನು ಉಳಿಸಿಕೊಡುತ್ತೇನೆ. ರಾಜ್ಯದ ಜನತೆಯನ್ನು ನಾನು ಉಳಿಸಿಕೊಡುತ್ತೇನೆ. ನಿಮ್ಮ ಸಲಹೆ ಪಡೆದು ಮುಂದಿನ ನಿರ್ಧಾರ ಮಾಡುತ್ತೇನೆ. ನಿಮ್ಮ ಸಲಹೆ ಮೇರೆಗೆ ನಿರ್ಧಾರ ಮಾಡ್ತೀವಿ ಎಂದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಯುಪಿಎ ಸರ್ಕಾರ 72 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾರೆ. ಈಗಿನ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ನಿಮಗೆ ಗೊತ್ತಿದೆ. ಯುಪಿಎ ಸರ್ಕಾರದ ಸಾಲಮನ್ನಾ ಪ್ರಸ್ತಾಪಿಸಿ ಈಗಿನ ಕೇಂದ್ರ ಸರ್ಕಾರದ ಬಗ್ಗೆ ಸೂಕ್ಷ್ಮವಾಗಿ ತೆಗಳಿದೆ ಅಂದ ಅವರು, ಇದೇ ವೇಳೆ ರಾಹುಕ್ ಗಾಂಧಿಗೆ ಬಹುಪರಾಕ್ ಹಾಕಿದ್ರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಅವರು ಬಂದಾಗ ರೈತರ ಸಾಲಮನ್ನಾ ಮಾಡಿದ್ರು. ರಾಹುಲ್ ಗಾಂಧಿ ಕೇಂದ್ರದಲ್ಲಿ ಸರ್ಕಾರ ಬಂದ್ರೆ ರೈತರ ಸಾಲಮನ್ನಾ ಮಾಡೋದಾಗಿ ಹೇಳಿದ್ದಾರೆ. ಇದು ನಿಮ್ಮ ಸರ್ಕಾರ. ರಾಜ್ಯದ ರೈತರ ಸರ್ಕಾರ. ಇದು ಸಮ್ಮಿಶ್ರ ಸರ್ಕಾರ ಅಲ್ಲ, ಜನರ ಸರ್ಕಾರ. ನಿಮ್ಮನ್ನ ನಾವು ಉಳಿಸಿಕೊಡುತ್ತೇವೆ. ನೀವು ನಮ್ಮ ಮೇಲೆ ನಂಬಿಕೆ ಇಡಬೇಕು. ಇಂದು ನಾವು ತೆಗೆದುಕೊಳ್ಳುವ ನಿರ್ಧಾರಕ್ಕೆ ರಾಹುಲ್ ಗಾಂಧಿ ಒಪ್ಪುತ್ತಾರೆ ಅನ್ನೋ ಭರವಸೆ ಇದೆ. ಈ ಸಭೆ ಇವತ್ತೇ ಮುಗಿಯೊಲ್ಲ. ಪ್ರತಿ ತಿಂಗಳು ರೈತರ ಸಭೆ ಮಾಡುತ್ತೇನೆ ಅಂತ ಎಂದು ಎಚ್‍ಡಿಕೆ ತಿಳಿಸಿದರು.