ಬೆಂಗಳೂರು: “ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕಚೇರಿಯಲ್ಲಿ ಇರಬೇಕು” ಎಂದು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಇತ್ತೀಚೆಗಷ್ಟೇ ಖಡಕ್ ಸೂಚನೆ ನೀಡಿದ್ದರು. ಸಿಎಂ ಸೂಚನೆ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಧಿಕೃತ ಆದೇಶವನ್ನೂ ಹೊರಡಿಸಿದ್ದರು.
ಈ ಆದೇಶಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದ್ದು, ಅಧಿಕಾರಿಗಳು ಮಾತ್ರ ತಮ್ಮ ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ಬೆಳಗ್ಗೆ 10 ದಾಟಿ 11 ಗಂಟೆಯಾದರೂ ಕಚೇರಿ ಕಡೆಗೆ ಮುಖ ಮಾಡದ ಅಧಿಕಾರಿಗಳ ಬೇಜವಾಬ್ದಾರಿತನ ಪಬ್ಲಿಕ್ ಟಿವಿ (PUBLiC TV) ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಸಾಕ್ಷ್ಯ ಸಮೇತ ಬಯಲಾಗಿದೆ.
ರಾಜಾಜಿನಗರ ಉಪ ತಹಶೀಲ್ದಾರ್ ಕಚೇರಿ: ಇಲ್ಲಿ ಕಚೇರಿಯ ಬಾಗಿಲುಗಳೇನೋ ತೆರೆದಿದ್ದವು. ಆದರೆ ಬೆಳಗ್ಗೆ 10 ಗಂಟೆಯಾದರೂ ಜವಾಬ್ದಾರಿಯುತ ಅಧಿಕಾರಿ ಸೀಟಿನಲ್ಲಿ ಇರಲಿಲ್ಲ. ದೂರದ ಊರುಗಳಿಂದ ತಮ್ಮ ಕೆಲಸಗಳಿಗಾಗಿ ಬಂದ ಸಾರ್ವಜನಿಕರು ಅಧಿಕಾರಿಗಳಿಗಾಗಿ ಗಂಟೆಗಟ್ಟಲೆ ಕಾಯುವ ದುಸ್ಥಿತಿ ನಿರ್ಮಾಣವಾಗಿತ್ತು. ಇದನ್ನೂ ಓದಿ: ಗೃಹಲಕ್ಷ್ಮಿ ಹಣದ ದುರುಪಯೋಗ ತಡೆಗೆ ಬಯೋಮೆಟ್ರಿಕ್

ಎಂ.ಎಸ್. ಬಿಲ್ಡಿಂಗ್ (ಕಂದಾಯ ಇಲಾಖೆ): ಇನ್ನು ವಿಧಾನಸೌಧದ ಪಕ್ಕದಲ್ಲೇ ಇರುವ ಎಂ.ಎಸ್. ಬಿಲ್ಡಿಂಗ್‌ನ ಕಂದಾಯ ಇಲಾಖೆಯ ಪರಿಸ್ಥಿತಿಯಂತೂ ಹೇಳತೀರದು. ಸಮಯ ಬೆಳಗ್ಗೆ 11 ಗಂಟೆಯಾಗಿದ್ದರೂ ಬಹುತೇಕ ಅಧಿಕಾರಿಗಳು ಕಚೇರಿಗೆ ಬಂದಿರಲಿಲ್ಲ. ಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರ ಹಾಜರಾಗಿದ್ದರು.
ಮುಖ್ಯಮಂತ್ರಿಗಳ ಖಡಕ್ ಎಚ್ಚರಿಕೆ ಮತ್ತು ಮುಖ್ಯ ಕಾರ್ಯದರ್ಶಿಗಳ ಅಧಿಕೃತ ಆದೇಶಕ್ಕೆ ಸರ್ಕಾರಿ ಅಧಿಕಾರಿಗಳು ಬೆಲೆಯನ್ನೂ ನೀಡುತ್ತಿಲ್ಲ ಎಂಬುದು ಈ ರಿಯಾಲಿಟಿ ಚೆಕ್‌ನಿಂದ ಸಾಬೀತಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳು ತಮಗಿಷ್ಟ ಬಂದ ಸಮಯದಲ್ಲಿ ಕಚೇರಿಗೆ ಬಂದು ಜನರನ್ನು ಅಲೆದಾಡಿಸುತ್ತಿದ್ದಾರೆ.
ಸರ್ಕಾರದ ಆದೇಶವನ್ನು ಗಾಳಿಗೆ ತೂರಿ, ಕನಿಷ್ಠ ಸಮಯ ಪ್ರಜ್ಞೆಯೂ ಇಲ್ಲದೆ ಸಾರ್ವಜನಿಕರನ್ನು ಸತಾಯಿಸುತ್ತಿರುವ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಿ ಬಿಸಿ ಮುಟ್ಟಿಸಬೇಕಿದೆ.
