Connect with us

Bengaluru City

ಲಿಂಗಾಯತ ಮೀಸಲು ಸಿಎಂ ಬ್ರಹ್ಮಾಸ್ತ್ರಕ್ಕೆ ಹೈಕಮಾಂಡ್ ಬ್ರೇಕ್

Published

on

– ಸಿಎಂಗೆ ದೆಹಲಿ ಬರಲು ತುರ್ತು ಬುಲಾವ್
– ಒಬಿಸಿ ಅಸ್ತ್ರದಿಂದ ಇಕ್ಕಟ್ಟಿಗೆ ಸಿಲುಕ್ತಾರಾ ಯಡಿಯೂರಪ್ಪ?

ಬೆಂಗಳೂರು: ವೀರಶೈವ ಲಿಂಗಾಯಗತರಿಗೆ ಓಬಿಸಿ ಸ್ಥಾನಮಾನ ನೀಡುವ ಕುರಿತು ರಾತ್ರಿ ಪ್ರಹಸನ ನಡೆದಿದ್ದು, ಕೇಂದ್ರದ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಸಮುದಾಯದವರು ಸಿಎಂ ಮೇಲೆ ಮುಗಿಬಿದ್ದಿದ್ದಾರೆ.

ಕಳೆದ ರಾತ್ರಿ ಸಿಎಂ ಪಡಸಾಲೆಯಿಂದ ಹೊರಬಿದ್ದ ಒಂದೇ ಸುದ್ದಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಇವತ್ತಿನ ಸಂಪುಟ ಸಭೆಯಲ್ಲಿ ವೀರಶೈವ ಲಿಂಗಾಯತರಿಗೆ ಓಬಿಸಿ ಸ್ಥಾನಮಾನ ನೀಡಲು ಕೇಂದ್ರಕ್ಕೆ ಸರ್ಕಾರ ಶಿಫಾರಸ್ಸು ಮಾಡಲಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಸಂಪುಟ ಸಭೆ ಬಳಿಕ ಮುಖ್ಯಮಂತ್ರಿಗಳೇ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಪ್ರಕಟಿಸುತ್ತಾರೆ ಎಂಬ ಮಾಹಿತಿಯೂ ಹೊರಬಿದ್ದಿತ್ತು. ಈ ಮೂಲಕ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ನೀಡದೇ ಸತಾಯಿಸುತ್ತಿರುವ ಬಿಜೆಪಿ ಹೈಕಮಾಂಡ್‍ಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪೂರಕವಾಗಿ ಲಿಂಗಾಯತ ಸಮುದಾಯವನ್ನು ಓಬಿಸಿ ಪಟ್ಟಿಗೆ ಸೇರಿಸುವ ವಿಚಾರವನ್ನು ಇಂದಿನ ಕ್ಯಾಬಿನೆಟ್ ಅಜೆಂಡಾದಲ್ಲಿಯೂ ಸೇರಿಸಲಾಗಿತ್ತು. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಎಲ್ಲವೂ ಉಲ್ಟಾ ಆಗಿದೆ.

ಸಿಎಂ ಯಡಿಯೂರಪ್ಪ ನಡೆಗೆ ಬೆಚ್ಚಿಬಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರೆ ಮಾಡಿ ದೆಹಲಿಗೆ ಬನ್ನಿ ಮಾತಾಡೋಣ. ಅಲ್ಲಿಯವರೆಗೂ ಯಾವುದೇ ಪ್ರಮುಖ ನಿರ್ಣಯ ಕೈಗೊಳ್ಳಬೇಡಿ ಎಂದು ಸೂಚನೆ ನೀಡಿದ್ದಾರೆ. ಹೀಗಾಗಿ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಬೇಕಿದ್ದ ವಿಷಯವನ್ನು ಮುಂದಿನ ಸಭೆಗೆ ಮುಂದೂಡಲಾಯಿತು. ದೆಹಲಿಗೆ ತೆರಳಿ ಅಮಿತ್ ಶಾ ಜೊತೆಗೆ ಚರ್ಚಿಸಿದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಸಚಿವರಿಗೆ ಹೇಳಿದರು.

ಲಿಂಗಾಯತರನ್ನು ಓಬಿಸಿಗೆ ಸೇರಿಸುವ ಬಗ್ಗೆ ಇನ್ನೂ ಕಾನೂನಾತ್ಮಕ ಚರ್ಚೆ ಅಗತ್ಯ ಇದೆ ಎಂದು ಅಡ್ವೋಕೇಟ್ ಜನರಲ್ ಕೂಡ ಸಲಹೆ ನೀಡಿದ್ದರಿಂದ ಸಂಪುಟದಲ್ಲೂ ಚರ್ಚೆ ನಡೆಸಿಲ್ಲ. ಸಿಎಂ ಉದ್ದೇಶಿತ ಸುದ್ದಿಗೋಷ್ಟಿಯನ್ನೂ ರದ್ದು ಮಾಡಲಾಯಿತು.

ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ, ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಕೆಲ ಅಂಶಗಳ ಅಧ್ಯಯನ ನಡೆಸಬೇಕಿದೆ. ಈ ಕಾರಣಕ್ಕೆ ಶಿಫಾರಸು ಮುಂದೂಡಿದ್ದೇವೆ ಅಷ್ಟೇ. ಇದರಲ್ಲಿ ಕೇಂದ್ರದ ಪಾತ್ರವಿಲ್ಲ. ಸಂಪುಟ ಸರ್ಜರಿ ವಿಳಂಬಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಸೋಮಣ್ಣ ಸಹ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ ನಡೆಸಿದರು. ದೆಹಲಿ ನಾಯಕರೇನು ಮಧ್ಯ ಪ್ರವೇಶ ಮಾಡಿಲ್ಲ. ಸಮುದಾಯಕ್ಕೂ ಆಶಾ ಭಂಗ ಆಗಿಲ್ಲ ಎಂದರು.

ಸಿಎಂ ಪ್ಲಾನ್ ಏನು?
ಸದ್ಯ ಹಿಂದುಳಿದ ವರ್ಗ 3ಬಿ ಅಡಿಯಲ್ಲಿ ಶೇ.5ರಷ್ಟು ಮೀಸಲಾತಿ ಇದೆ. ವೀರಶೈವ ಲಿಂಗಾಯತ ಸೇರಿ 42 ಉಪ ಜಾತಿಗಳಿಗೆ ಮೀಸಲಾತಿ ಅನ್ವಯವಾಗಲಿದೆ. ಹೀಗಾಗಿ 2(ಎ)ಗೆ ಸೇರಿಸುವಂತೆ ವೀರಶೈವ ಮುಖಂಡರು ಒತ್ತಡ ಹೇರಿದ್ದರು. ಆದರೆ 2(ಎ)ಗೆ ಸೇರಿಸುವ ಬದಲು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಮೂಲಕ ರಾಜ್ಯ ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಪ್ಲಾನ್ ಮಾಡಲಾಗಿತ್ತು.

ದಾಳ ಉರುಳಲಿಲ್ಲ ಏಕೆ?
ಸಿಎಂ ಯಡಿಯೂರಪ್ಪ ನಡೆಯಿಂದ ಆರ್‍ಎಸ್‍ಎಸ್‍ಗೆ ಶಾಕ್ ಆಗಿದೆ. ಹೀಗಾಗಿ ಆರ್‍ಎಸ್‍ಎಸ್ ಕೂಡಲೇ ಹೈಕಮಾಂಡ್ ಗಮನಕ್ಕೆ ತಂದಿದೆ. ಪಕ್ಷ, ಸಂಘದ ಅಜೆಂಡಾದಲ್ಲಿ ಇಲ್ಲದ ವಿಚಾರ ಇದು. ಮೀಸಲಾತಿಯಂತಹ ಪ್ರಮುಖ ವಿಚಾರ ಚರ್ಚೆ ನಡೆದ ಬಳಿಕ ಅನುಷ್ಠಾನವಾಗಬೇಕು. ಈಗ ಲಿಂಗಾಯತರಿಗೆ ಓಬಿಸಿ ಸ್ಥಾನಮಾನ ಕೊಟ್ಟರೆ ಮುಂದೆ ಬೇರೆ ಜಾತಿಗಳು ಪ್ರಶ್ನಿಸಬಹುದು. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಲು ಹೇಳಿ ಎಂದು ಬಿಜೆಪಿ ಹೈಕಮಾಂಡ್‍ಗೆ ಆರ್‍ಎಸ್‍ಎಸ್ ಪ್ರಮುಖರು ನಿರ್ದೇಶಿಸಿದ್ದಾರೆ.

ಈ ಬೆನ್ನಲ್ಲೇ ಖುದ್ದು ಅಖಾಡಕ್ಕೆ ಇಳಿದ ಗೃಹ ಸಚಿವ ಅಮಿತ್ ಶಾ, ಬೆಳಗ್ಗೆ ಸಿಎಂ ಯಡಿಯೂರಪ್ಪಗೆ ತುರ್ತು ಕರೆ ಮಾಡಿ, ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಅಲ್ಲದೆ ಯಾವುದೇ ನಿರ್ಣಯ ಕೈಗೊಳ್ಳದಂತೆ ಸೂಚಿಸಿದ್ದಾರೆ. ಇತ್ತ ಶಿಫಾರಸು ವಿಚಾರವಾಗಿ ಎಜಿ ಆಕ್ಷೇಪ ವ್ಯಕ್ತಪಡಿಸಿ, ಇನ್ನಷ್ಟು ಅಧ್ಯಯನ ಅಗತ್ಯತೆ, ಕಾನೂನು ವ್ಯಾಪ್ತಿ ಪರಿಶೀಲನೆ ಹಿನ್ನೆಲೆ ಮುಂದೂಡಲು ಸಲಹೆ ನೀಡಿದ್ದಾರೆ.

ಬಿಎಸ್‍ವೈ ಮುಂದಿರುವ ಸವಾಲು
ವೀರಶೈವ ಲಿಂಗಾಯತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವ ಬೇಡಿಕೆಗೆ ಬಿಜೆಪಿ ಹೈಕಮಾಂಡ್ ಅಸ್ತು ಎನ್ನದೇ ಇರಬಹುದು. ಅಲ್ಲದೆ ಓಬಿಸಿ ವಿಚಾರದಲ್ಲಿ ಸೈಲೆಂಟಾಗಿರುವಂತೆ ಸೂಚಿಸಬಹುದು. ಇದರಿಂದ ವೀರಶೈವ ಲಿಂಗಾಯತರು ಹೋರಾಟ ಆರಂಭಿಸುತ್ತಾರೆ. ವೀರಶೈವ ಲಿಂಗಾಯತರನ್ನು ಮನವರಿಕೆ ಮಾಡುವ ಸವಾಲು ಎದುರಾಗಲಿದೆ. ಬಳಿಕ ಸಮುದಾಯ ಓಲೈಕೆ ತಂತ್ರವೇ ತಿರುಗುಬಾಣ ಆಗಬಹುದು.

ನಿರ್ಧಾರದ ಕುರಿತು ಸಿಎಂ ಹಿಂದೆ ಸರಿಯುತ್ತಿದ್ದಂತೆ ವೀರಶೈವ ಲಿಂಗಾಯತ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದು, ಇವತ್ತು ಸಿಹಿ ಸುದ್ದಿ ನಿರೀಕ್ಷೆಯಲ್ಲಿದ್ದ ಸಮುದಾಯ ಶಾಕ್ ಆಗಿದೆ. ಕೇಂದ್ರದ ಒತ್ತಡಕ್ಕೆ ಮಣಿದ ಸಿಎಂ ವಿರುದ್ಧ ವೀರಶೈವ ಸ್ವಾಮೀಜಿಗಳು ಸಿಟ್ಟಾಗಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮೀಜಿ, ಸಿಎಂ ವಿರುದ್ಧ ಗುಡುಗಿದ್ದಾರೆ. ನಿಮ್ಮ ರಾಜಕೀಯ ನಮಗೆ ಗೊತ್ತಿಲ್ಲ. ನಮ್ಮ ಬೇಡಿಕೆ ಈಡೇರಲೇಬೇಕು. ನಾಳೆಯೊಳಗೆ ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ ಕೂಡಲಸಂಗಮದಿಂದ ಹೋರಾಟ ತೀವ್ರಗೊಳಿಸುತ್ತೇವೆ. ಒಂದು ತಿಂಗಳು ಪಾದಯಾತ್ರೆ ನಡೆಸಿ ಡಿಸೆಂಬರ್ 23ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

ಇದರಿಂದ ಸಿಎಂ ಇಕ್ಕಟ್ಟಿಗೆ ಸಿಲುಕಿದಂತೆ ಕಂಡು ಬಂದಿದೆ. ಇನ್ನು ವೀರಶೈವ ಲಿಂಗಾಯತರಿಗೆ ಓಬಿಸಿ ಸ್ಥಾನಮಾನ ನೀಡದಿದ್ದರೆ ರಾಜ್ಯದಲ್ಲಿ ಬೆಂಕಿ ಹತ್ತಬಹದು ಹುಷಾರ್ ಎಂದು ಕಲಬುರಗಿಯ ಸಾರಂಗ ಮಠದ ಶ್ರೀಗಳು ಎಚ್ಚರಿಸಿದ್ದಾರೆ. ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ನೋಡಿದರೆ ರಾಜ್ಯದಲ್ಲಿ ಬಿಜೆಪಿ ನಾಮಾವಶೇಷ ಆಗುತ್ತೆ ಎಂದು ಬಿಜೆಪಿ ಹೈಕಮಾಂಡ್‍ಗೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಸಿಲು ಸಚಿವರು, ಶಾಸಕರು ನಿರಾಕರಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in